ಚೆನ್ನೈ[ಏ.26]: ತಮಿಳುನಾಡು, ಪುದುಚೇರಿ ಹಾಗೂ ಆಂಧ್ರ ಪ್ರದೇಶಕ್ಕೆ ಚಂಡಮಾರುತದ ಭೀತಿ ಎದುರಾಗಿದ್ದು, ಮುಂದಿನ 48 ಗಂಟೆಗಳಲ್ಲಿ ಬಿರುಗಾಳಿಯಿಂದ ಕೂಡಿದ ಭಾರೀ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಹಿಂದೂ ಮಹಾಸಾಗರ ಹಾಗೂ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಏ.27 ಮತ್ತು ಏ.29ರ ಮಧ್ಯೆ ಇನ್ನಷ್ಟುಪ್ರಬಲಗೊಂಡು ಚಂಡಮಾರುತವಾಗಿ ಬದಲಾಗಲಿದೆ. ‘ಫಣಿ’ ಹೆಸರಿನ ಈ ಚಂಡಮಾರುತ ವಾಯವ್ಯ ದಿಕ್ಕಿನತ್ತ ಸಾಗಲಿದ್ದು, ಇದರ ಪರಿಣಾಮವಾಗಿ ತಮಿಳುನಾಡು, ಪುದುಚೇರಿ ಹಾಗೂ ಆಂಧ್ರ ಕರಾವಳಿ ಪ್ರದೇಶಗಳಲ್ಲಿ ಏ.30 ಹಾಗೂ ಮೇ 1ರಂದು ಗುಡುಗು, ಸಿಡಿಲಿನಿಂದ ಕೂಡಿದ ಭಾರೀ ಮಳೆ ಸುರಿಯಲಿದೆ.

ಗಂಟೆಗೆ ಸುಮಾರು 90ರಿಂದ 100 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಗರಿಷ್ಠ 115 ಕಿ.ಮಿ.ವರೆಗೂ ತಲುಪುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಕರಾವಳಿಯಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಪುಡುಕೊಟ್ಟೈ, ತಂಜಾವೂರ್‌, ಕಾರೈಕಲ್‌ ಮತ್ತು ನಾಗಪಟ್ಟಣಂ ಜಿಲ್ಲೆಗಳಲ್ಲಿ ಏ.29ರಂದು ಭಾರೀ ಮಳೆ ಸುರಿಯುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಚಂಡಮಾರುತದ ಪರಿಣಾಮವಾಗಿ ತಮಿಳುನಾಡಿನ ಸುತ್ತಮುತ್ತಲಿನ ರಾಜ್ಯಗಳಾ ಕರ್ನಾಟಕ, ಕೇರಳದಲ್ಲೂ ಮಳೆಯಾಗುವ ಸಾಧ್ಯತೆ ಇದೆ.