ಲೋಕಸಭಾ ಚುನಾವಣೆ ಮುಗಿದು ಫಲಿತಾಂಶವೂ ಬಂದು ತಿಂಗಳು ಕಳೆದಿವೆ. ಆಪರೇಶನ್ ಕಮಲ ಎಂಬ ವಿಚಾರ ಸದ್ದಿಲ್ಲದೆ ಅಡಗಿ ಹೋಗಿದೆ. ಆದರೆ ಇದ್ದಕ್ಕಿದ್ದಂತೆ ಕಾಂಗ್ರೆಸ್ ನ ಇಬ್ಬರು ಶಾಸಕರು ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪರ್ವ ಆರಂಭವಾಗಲು ಕಾರಣಗಳು ಏನು?

ಬೆಂಗಳೂರು[ಜು. 01] ದೋಸ್ತಿ ಸರಕಾರ ಅಳೆದು ತೂಗಿ ಸಚಿವ ಸಂಪುಟ ವಿಸ್ತರಣೆ ಮಾಡಿತ್ತು. ಅಂತಿಮವಾಗಿ ಪಕ್ಷೇತರರಿಬ್ಬರಿಗೆ ಮಣೆ ಹಾಕಿ ಮಂತ್ರಿಗಿರಿ ನೀಡಲಾಗಿತ್ತು. ಆದರೆ ಅತೃಪ್ತ ಶಾಸಕೆ ಒಳಬೇಗುದಿ ಹಾಗೇ ಇತ್ತು. ಅದು ಸ್ಫೋಟವಾಗಲು ಒಂದು ಅವಕಾಶ ಬೇಕಾಗಿತ್ತು. ಕುಮಾರಸ್ವಾಮಿ ಅಮೆರಿಕಕ್ಕೆ ತೆರಳಿದ್ದೆ ದೊಡ್ಡ ಅವಕಾಶದಂತೆ ಕಾಂಗ್ರೆಸ್ ಅತೃಪ್ತ ಶಾಸಕರಿಗೆ ಕಾಣಿಸಿಕೊಂಡಿತು.

ದೋಸ್ತಿಗೆ ಮರೆಯಾದ ಆನಂದ, ರಮೇಶ್ ಜಾರಕಿಹೊಳಿ ರಾಜೀನಾಮೆ

1. ಸಿಎಂ ಕುಮಾರಸ್ವಾಮಿ ಪ್ರವಾಸ: ಗ್ರಾಮ ವಾಸ್ತವ್ಯ ಮುಗಿಸಿ ಸಿಎಂ ಕುಮಾರಸ್ವಾಮಿ ಅಮೆರಿಕ ಪ್ರವಾಸ ಕೈಗೊಂಡ ತಕ್ಷಣವೇ ಒಂದಾದ ಮೇಲೊಂದು ರಾಜೀನಾಮೆ ಪತ್ರಗಳು ಸ್ಪೀಕರ್ ಕಡೆಗೆ ರವಾನೆಯಾಗುತ್ತಿವೆ.

2. ಸಿಗದ ಸಚಿವ ಸ್ಥಾನ: ರಮೇಶ್ ಜಾರಕಿಹೊಳಿ ಅತೃಪ್ತ ಬಣದ ನಾಯಕರು ಎಂದು ಹೇಳಲಾಗಿದ್ದರೂ ಅವರ ಜತೆಗೆ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್, ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್ ಸರಕಾರದ ವಿರುದ್ಧ ಅತೃಪ್ತಿ ಹೊರಹಾಕಿದ್ದರು. ಸುಧಾಕರ್ ಗೆ ಮಂಡಳಿ ಸ್ಥಾನ ಕಲ್ಪಿಸಲಾಯಿತಾದರೂ ಉಳಿದವರಿಗೆ ಹುದ್ದೆ ಸಿಗದಿರುವುದು ರಾಜೀನಾಮೆ ಪರ್ವಕ್ಕೆ ಕಾರಣವಾಯಿತು.

3. ಜಿಂದಾಲ್ ಗೊಂದಲ: ರಾಜ್ದದ ದೋಸ್ತಿ ಸರಕಾರ ಜಿಂದಾಲ್ ಗೆ ಕಡಿಮೆ ದರದಲ್ಲಿ ಭೂಮಿ ನೀಡಲು ಮುಂದಾಗಿದ್ದಕ್ಕೆ ಆನಂದ್ ಸಿಂಗ್, ಎಚ್‌.ಕೆ.ಪಾಟೀಲ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಆದರ ಪರಿಣಾಮವೇ ರಾಜೀನಾಮೆ ಪರ್ವ.

4. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ತ್ಯಜಿಸಿದ ವಿಶ್ವನಾಥ್: ರಾಜೀನಾಮೆ ನೀಡಿದ ವಿಶ್ವನಾಥ್ ಬಿಜೆಪಿ ನಾಯಕ ಒಂದು ಕಾಲದ ಆಪ್ತ, ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ಅವರನ್ನು ಭೇಟಿ ಮಾಡಿದ್ದರು. ಇದಾದ ಮೇಲೆ ಜೆಡಿಎಎಸ್ ನಲ್ಲಿಯೂ ಬಂಡಾಯದ ಮಾತುಗಳು ಕೇಳಿ ಬಂದಿದ್ದು ಕಾಂಗ್ರೆಸ್ ಮೇಲೆ ಪರಿಣಾಮ ಬೀರಿತ್ತು.

5. ಕೇಂದ್ರದಲ್ಲಿ ಮೋದಿ ಗೆಲುವು: ಲೋಕಸಭಾ ಚುನಾವಣಾ ಫಲಿತಾಂಶ ಹೊರಬಂದ ನಂತರ ಮತ್ತೊಮ್ಮೆ ದೇಶದಲ್ಲಿ ಮೋದಿ ಅಲೆ ಇದೆ ಎಂಬ ವಿಚಾರವನ್ನು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಅನಿವಾರ್ಯವಾಗಿ ಒಪ್ಪಿಕೊಳ್ಳಲೇಬೇಕಾಯಿತು. ಸಹಜವಾಗಿ ಅತೃಪ್ತರು ಬಿಜೆಪಿ ಕಡೆಗೆ ಮುಖ ಮಾಡುವಂತಹ ವ್ಯವಸ್ಥೆ ನಿರ್ಮಾಣ ಆಯಿತು.