ನವದೆಹಲಿ: ಪ್ರಧಾನಿ ಮೋದಿ ವಿರುದ್ಧ ಆಗ್ಗಿಂದಾಗ್ಗೆ ಕೀಳು ಟೀಕೆ ಮಾಡುವ ಮೂಲಕ ವಿಪಕ್ಷ ಮತ್ತು ಸ್ವಪಕ್ಷೀಯರಿಂದಲೇ ಹಲವು ಬಾರಿ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್ಸಿನ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಹಾಗೂ ಚಿತ್ರನಟಿ ರಮ್ಯಾ ಮತ್ತೆ ಅಂಥದ್ದೇ ಎಡವಟ್ಟು ಮಾಡಿದ್ದಾರೆ. 

ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಸರ್ದಾರ್‌ ಪಟೇಲರ ಪ್ರತಿಮೆ ಉದ್ಘಾಟನೆಗೆ ತೆರಳಿದ್ದ ವೇಳೆ ತೆಗೆದ ಫೋಟೋ ಒಂದನ್ನು ಬಳಸಿ ರಮ್ಯಾ, ಗುರುವಾರ ನಿಕೃಷ್ಟವಾದ ಟ್ವೀಟ್‌ ಮಾಡಿದ್ದು, ಭಾರೀ ಟೀಕೆಗೆ ತುತ್ತಾಗಿದ್ದಾರೆ.

ರಮ್ಯಾ ಅವರ ಈ ಟ್ವೀಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಪತ್ರಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ಹೊರತಾಗಿಯೂ ತಮ್ಮ ಟ್ವೀಟ್‌ ಸಮರ್ಥಿಸಿಕೊಳ್ಳುವ ಮೂಲಕ ರಮ್ಯಾ ತಮ್ಮ ಮೊಂಡುತನ ಪ್ರದರ್ಶಿಸಿದ್ದಾರೆ.

ಏನೀ ವಿವಾದ?:  ಜಗತ್ತಿನ ಅತಿ ಎತ್ತರದ ಪ್ರತಿಮೆಯಾಗಿರುವ ಸರ್ದಾರ್‌ ಪಟೇಲರ ಪುತ್ಥಳಿಯನ್ನು ಅನಾವರಣಗೊಳಿಸಿ ಅದರ ಬುಡದಲ್ಲಿ ನಿಂತು ಪಾದವನ್ನು ಕೈಯಲ್ಲಿ ಮುಟ್ಟಿವೀಕ್ಷಿಸುತ್ತಿರುವ ಮೋದಿ ಅವರ ಫೋಟೋವನ್ನು ಟ್ವೀಟ್‌ ಮಾಡಿ, ‘ಅದು ಪಕ್ಷಿ ಹಿಕ್ಕೆಯಾ?’ ಎಂದು ರಮ್ಯಾ ಕೇಳಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಬೃಹತ್‌ ಪ್ರತಿಮೆಯ ಬುಡದಲ್ಲಿ ಬೆಳ್ಳನೆಯ ಬಟ್ಟೆಧರಿಸಿ ಮೋದಿ ನಿಂತ ದೃಶ್ಯವನ್ನು ಹಕ್ಕಿ ಹಿಕ್ಕೆಗೆ ಹೋಲಿಸಿದ ರಮ್ಯಾ ಅವರ ಈ ಟ್ವೀಟ್‌ಗೆ ಬಿಜೆಪಿ ಅಷ್ಟೇ ಅಲ್ಲದೇ ಕಾಂಗ್ರೆಸ್‌ನಿಂದಲೂ ಆಕ್ಷೇಪ ವ್ಯಕ್ತವಾಗಿದೆ.

‘ಕಾಂಗ್ರೆಸ್ಸಿನ ಮೌಲ್ಯಗಳೇ ಕುಸಿಯುತ್ತಿವೆ’ ಎಂದು ವ್ಯಂಗ್ಯವಾಡಿರುವ ಬಿಜೆಪಿ, ಕಾಂಗ್ರೆಸ್ಸಿನ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೂ ಚಾಟಿ ಬೀಸಿದೆ. ಪ್ರಧಾನಿ ಕುರಿತು ಇಂತಹ ಭಾಷೆ ಬಳಸುವುದಕ್ಕೆ ತನ್ನ ಸಹಮತವಿಲ್ಲ ಎಂದು ಕಾಂಗ್ರೆಸ್‌ ಕೂಡ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಆದರೆ ಇದ್ಯಾವುದಕ್ಕೂ ಕ್ಯಾರೆ ಎನ್ನದ ರಮ್ಯಾ ‘ನನ್ನ ಅಭಿಪ್ರಾಯ ನನ್ನದು. ನಿಮ್ಮ ಅಭಿಪ್ರಾಯಗಳಿಗೆ ನಾನೇನು ಅಸಮಾಧಾನ ವ್ಯಕ್ತಪಡಿಸಿಲ್ಲ’ ಎಂದು ಮೊಂಡುವಾದ ಮಾಡಿದ್ದಾರೆ.

ರಮ್ಯಾ ಅವರು ಪ್ರಧಾನಿ ಕುರಿತು ಈ ರೀತಿಯ ಆಕ್ಷೇಪಾರ್ಹ ಟ್ವೀಟ್‌ ಮಾಡುತ್ತಿರುವುದು ಇದೇ ಮೊದಲಲ್ಲ. ಪ್ರಧಾನಿ ಅವರ ಮೇಣದ ಪ್ರತಿಮೆಯ ಹಣೆಯ ಮೇಲೆ ‘ಚೋರ್‌’ (ಕಳ್ಳ) ಎಂದು ಬರೆದು ರಮ್ಯಾ ಟ್ವೀಟ್‌ ಮಾಡಿದ್ದು ಭಾರಿ ವಿವಾದ ಸೃಷ್ಟಿಸಿತ್ತು. ಈ ಬಗ್ಗೆ ಉತ್ತರಪ್ರದೇಶದಲ್ಲಿ ರಾಷ್ಟ್ರದ್ರೋಹ ಪ್ರಕರಣ ಕೂಡ ದಾಖಲಾಗಿತ್ತು.