ರಕ್ಷಿತ್‌ ಶೆಟ್ಟಿಮೊದಲ ಬಾರಿಗೆ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯವಾಗಿ ಮಾತನಾಡುತ್ತಿರುವವರಿಗೆ ಉತ್ತರ ಕೊಡುವ ಮೂಲಕ ಅವರು ರಶ್ಮಿಕಾ ಮಂದಣ್ಣ ಬೆಂಬಲಕ್ಕೆ ನಿಂತಿದ್ದಾರೆ.

ಬೆಂಗಳೂರು : ನಟ ರಕ್ಷಿತ್‌ ಶೆಟ್ಟಿಹಾಗೂ ನಟಿ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮುರಿದು ಬಿದ್ದಿದೆಯೆಂಬ ಸುದ್ದಿಗಳ ಬಗ್ಗೆ ರಕ್ಷಿತ್‌ ಶೆಟ್ಟಿಮೊದಲ ಬಾರಿಗೆ ಮಾತನಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯವಾಗಿ ಮಾತನಾಡುತ್ತಿರುವವರಿಗೆ ಉತ್ತರ ಕೊಡುವ ಮೂಲಕ ಅವರು ರಶ್ಮಿಕಾ ಮಂದಣ್ಣ ಬೆಂಬಲಕ್ಕೆ ನಿಂತಿದ್ದಾರೆ.

ಕಳೆದ ಎರಡ್ಮೂರು ದಿನಗಳಿಂದ ಈ ಬೆಳವಣಿಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಬ್ರೇಕಪ್‌ ಬಗ್ಗೆ ಇಬ್ಬರೂ ಇದುವರೆಗೆ ಮಾತನಾಡಿಲ್ಲ. ಈ ನಡುವೆ ಟ್ವೀಟರ್‌, ಫೇಸ್‌ಬುಕ್‌ ಸೇರಿದಂತೆ ಸೋಷಿಯಲ್‌ ಮೀಡಿಯಾಗಳಿಂದ ದೂರವಾಗಿದ್ದ ರಕ್ಷಿತ್‌ ಶೆಟ್ಟಿ, ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡುವುದಕ್ಕಾಗಿಯೇ ಫೇಸ್‌ಬುಕ್‌ಗೆ ಬಂದಿದ್ದಾರೆ. ಮಂಗಳವಾರ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಈ ಕುರಿತು ರಕ್ಷಿತ್‌ ಶೆಟ್ಟಿಬರೆದ ಸಾಲುಗಳು ಇಲ್ಲಿವೆ.

ಸೋಷಿಯಲ್‌ ಮೀಡಿಯಾದಿಂದ ದೂರವಿದ್ದೆ

ಎಲ್ಲರಿಗೂ ಗೊತ್ತಿರುವಂತೆ ಬೇರೆ ಬೇರೆ ಕಾರಣಗಳಿಗಾಗಿ ನಾನು ಕೆಲವು ದಿನಗಳ ಹಿಂದೆಯೇ ಸೋಷಿಯಲ್‌ ಮೀಡಿಯಾಗಳಿಂದ ದೂರವಾಗಿದ್ದೆ. ಆದರೆ, ಬೇರೆ ದಾರಿ ಇಲ್ಲದೆ ಮತ್ತೆ ಇಲ್ಲಿಗೆ ಬಂದಿರುವೆ. ಕೆಲವು ದಿನಗಳಿಂದ ನನ್ನ ಮತ್ತು ರಶ್ಮಿಕಾ ಮಂದಣ್ಣ ವೈಯಕ್ತಿಕ ಜೀವನದ ಬಗ್ಗೆ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಸ್ಪಷ್ಟೀಕರಣ ಕೊಡಲು ಬಂದಿದ್ದೇನೆ. ಈಗ ನಡೆಯುತ್ತಿರುವ ಬೆಳವಣಿಗೆಗಳಿಂದ ತುಂಬಾ ಪ್ರೀತಿಸುತ್ತಿದ್ದವರನ್ನು ಮತ್ತು ಜತೆಗಿದ್ದವರನ್ನು ಕಳೆದುಕೊಂಡೆನೋ ಎಂಬ ಭ್ರಮೆ ಮೂಡುವಂತಾಗಿದೆ. ಇದು ಯಾರಿಗೂ ಒಳ್ಳೆಯದಲ್ಲ.

ರಶ್ಮಿಕಾಳನ್ನು ತಾಳ್ಮೆಯಿಂದಿರಲು ಬಿಡಿ

ನಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಸೋಷಿಯಲ್‌ ಮೀಡಿಯಾಗಳಲ್ಲಿ ಮಾತನಾಡುತ್ತಿರುವವರಿಗಿಂತ ನನಗೆ ರಶ್ಮಿಕಾ ಮಂದಣ್ಣ ಏನು ಅಂತ ಚೆನ್ನಾಗಿ ಗೊತ್ತಿದೆ. ನಾವಿಬ್ಬರೂ ಎರಡ್ಮೂರು ವರ್ಷಗಳಿಂದ ಪರಿಚಿತರು. ನೀವೆಲ್ಲ ನಿಮ್ಮ ಮನಸ್ಸಿಗೆ ಬಂದ ಅಭಿಪ್ರಾಯಗಳನ್ನು ಹೇಳುತ್ತಿದ್ದೀರಿ. ಆ ಮೂಲಕ ರಶ್ಮಿಕಾ ಮಂದಣ್ಣ ಅವರನ್ನು ನೀವು ದೂಷಿಸುತ್ತಿದ್ದೀರಿ. ಇದು ಸರಿಯಲ್ಲ. ಯಾವುದೇ ಒಂದು ಬೆಳವಣಿಗೆಗೆ ಮತ್ತೊಂದು ಮುಖವೂ ಇರುತ್ತದೆ. ಆ ದೃಷ್ಟಿಕೋನದಲ್ಲಿ ನಾವು ಯೋಚನೆ ಮಾಡದೆ ಮಾತನಾಡುತ್ತೇವೆ. ನಮ್ಮ ಈ ಮಾತುಗಳಿಂದ ಬೇರೊಬ್ಬರಿಗೆ ನೋವು ತರುತ್ತೇವೆ. ಈ ವಿಚಾರದಲ್ಲಿ ರಶ್ಮಿಕಾ ಮಂದಣ್ಣ ಅವರ ಕುರಿತು ಅಸಭ್ಯವಾಗಿ ಮಾತನಾಡುವುದನ್ನು ನಿಲ್ಲಿಸಿ. ಅವಳನ್ನು ತಾಳ್ಮೆಯಿಂದ ಇರಲು ಬಿಡಿ.

ಯಾವುದನ್ನೂ ನಂಬಬೇಡಿ

ನನ್ನ ಮತ್ತು ರಶ್ಮಿಕಾ ಮಂದಣ್ಣ ಬಗ್ಗೆ ಬರುತ್ತಿರುವ ಯಾವ ಸುದ್ದಿಗಳೂ ಅಧಿಕೃತವಲ್ಲ. ನಮ್ಮ ನಿಶ್ಚಿತಾರ್ಥ ಮುರಿದುಬಿದ್ದಿದೆ, ಬ್ರೇಕಪ್‌ ಆಗಿದೆ ಎಂಬಿತ್ಯಾದಿ ಸುದ್ದಿಗಳು ಅವರವರ ಮೂಗಿನ ನೇರಕ್ಕೆ ಕಲ್ಪನೆ ಮಾಡಿಕೊಂಡು ಮಾಡುತ್ತಿರುವ ಸುದ್ದಿಗಳು. ಈ ಬಗ್ಗೆ ನಾನಾಗಲೀ, ರಶ್ಮಿಕಾ ಮಂದಣ್ಣ ಆಗಲೀ ಮಾಹಿತಿ ಕೊಟ್ಟಿಲ್ಲ. ಯಾರಿಗೆ ಹೇಗೆ ಬೇಕೋ ಹಾಗೆ ಸುದ್ದಿ ಮಾಡುತ್ತಿದ್ದಾರೆ. ಹೀಗಾಗಿ ಈ ಎಲ್ಲವೂ ನಿಜವಲ್ಲ. ಈ ಸಮಸ್ಯೆ ಆದಷ್ಟು ಬೇಗ ಸರಿಹೋಗುತ್ತದೆ. ಆಗ ನಿಮಗೇ ಸತ್ಯ ಏನೂ ಅಂತ ತಿಳಿಯುತ್ತದೆ.