ಬೆಂಗಳೂರು : ರಾಜರಾಜೇಶ್ವರಿ ನಗರದ ಮೌಂಟ್‌ ಕಾರ್ಮೆಲ್‌ ಶಾಲೆಯ 8ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ‘ರೈತರ ಮಿತ್ರನಾರು’ ಎಂಬ ಪ್ರಶ್ನೆಗೆ ‘ಎರೆಹುಳು, ಕುಮಾರಸ್ವಾಮಿ ಮತ್ತು ಯಡಿಯೂರಪ್ಪ’ ಎಂಬ ಬಹು ಆಯ್ಕೆ ಉತ್ತರದ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ ಶಿಕ್ಷಕರಿಂದ ಶಿಕ್ಷಣ ಸಂಸ್ಥೆಯು ರಾಜೀನಾಮೆ ಪಡೆದಿದೆ.

ಮೌಂಟ್‌ ಕಾರ್ಮೆಲ್‌ ಶಾಲೆಯಲ್ಲಿ ಕನ್ನಡವನ್ನು ತೃತೀಯ ಭಾಷೆಯಾಗಿ ಬೋಧನೆ ಮಾಡಲಾಗುತ್ತಿದೆ. ಕಳೆದ ವಾರ ವಾರ್ಷಿಕ ಪರೀಕ್ಷೆ ನಡೆಸಿದ್ದು, ಬಹು ಆಯ್ಕೆಯ ಪ್ರಶ್ನೋತ್ತರಗಳಲ್ಲಿ ಅರ್ಧ ಅಂಕದ ಪ್ರಶ್ನೆ ವಿಭಾಗದಲ್ಲಿ 9ನೇ ಪ್ರಶ್ನೆಯಾಗಿ ರೈತ ಮಿತ್ರನಾರು ಪ್ರಶ್ನೆ ಕೇಳಲಾಗಿದೆ. 

ಉತ್ತರಗಳನ್ನು ರಾಜಕೀಯ ಮುಖಂಡರ ಹೆಸರು ಪ್ರಸ್ತಾಪಿಸಿರುವುದು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು, ಸಾರ್ವಜನಿಕವಾಗಿ ಗೇಲಿ ಮಾಡುವಂತಾಗಿದೆ. ಹೀಗಾಗಿ, ತಮ್ಮಿಂದಲೇ ಸಂಸ್ಥೆಗೆ ಕೆಟ್ಟಹೆಸರು ಬಂದಿದೆ ಎಂದು ಭಾವಿಸಿ ಸ್ವತಃ ಶಿಕ್ಷಕರೇ ರಾಜಿನಾಮೆ ನೀಡಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲರಾದ ರಾಘವೇಂದ್ರ ತಿಳಿಸಿದ್ದಾರೆ.