ಶಿಶುನಾಳ ಷರೀಫರ ಅಂಚೆ ಚೀಟಿ ಬಿಡುಗಡೆಗೆ ರೈಲ್ವೇ ಖಾತೆ ರಾಜ್ಯ ಸಚಿವ ಮನೋಜ್ ಸಿನ್ಹಾ ಒಪ್ಪಿಗೆ | ಜಗದೀಶ್ ಶೆಟ್ಟರ್ ಮನವಿಗೆ ಸ್ಪಂದಿಸಿದ ಮನೋಹ್ ಸಿನ್ಹಾ  

ಬೆಂಗಳೂರು (ಸೆ. 04): ಸಂತ ಶಿಶುನಾಳ ಶರೀಫರ ಸ್ಮರಣಾರ್ಥ ವಿಶೇಷ ಅಂಚೆಚೀಟಿ ತರಲು ಕೇಂದ್ರದ ಸಂಪರ್ಕ ಸಂವಹನ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ಮನೋಜ್ ಸಿನ್ಹಾ ಒಪ್ಪಿಗೆ ಸೂಚಿಸಿದರು.

Add Asianetnews Kannada as a Preferred SourcegooglePreferred

ಕುಮಾರ ಕೃಪಾ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಸೋಮವಾರ ಗಾಂಧಿ ಸ್ಮಾರಕ ನಿಧಿ ಆಯೋಜಿಸಿದ್ದ ‘ಹುತಾತ್ಮ ಮೈಲಾರ ಮಹಾದೇವಪ್ಪ ಸಂಸ್ಮರಣಾ ಅಂಚೆ ಚೀಟಿ’ ಬಿಡುಗಡೆ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಶಿಶುನಾಳ ಷರೀಫ ಅವರ ವಿಶೇಷ ಅಂಚೆ ಚೀಟಿ ತರಬೇಕು ಎಂದು ಮಾಡಿದ ಮನವಿಗೆ ಸ್ಪಂದಿಸಿದ ಸಿನ್ಹಾ ಶೀಘ್ರ ಶರೀಫರ ಅಂಚೆ ಚೀಟಿ ಹೊರತರಲಾಗುವುದು ಎಂದರು.

ಮೈಲಾರ ಮಹಾದೇವಪ್ಪ ಅವರು ಅಪ್ರತಿಮ ದೇಶಭಕ್ತ. ಸ್ವಾತಂತ್ರ್ಯ ಹೋರಾಟಗಾರರಿದ್ದರು. ಅವರ ತ್ಯಾಗ, ಬಲಿದಾನ ನಮಗೆ ಆದರ್ಶವಾಗಿದೆ. ಮಹಾತ್ಮ ಗಾಂಧೀಜಿ ಅವರು 1930 ರಲ್ಲಿ ಕೈಗೊಂಡಿದ್ದ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ 71 ಮಂದಿ ಪೈಕಿ ಕರ್ನಾಟಕದಿಂದ ಮೈಲಾರ ಮಹದೇವಪ್ಪ ಪ್ರತಿನಿಧಿಸಿದ್ದರು. ಅಂತಹ ವ್ಯಕ್ತಿಯನ್ನು ಮತ್ತು ಅವರ ವಿಚಾರಧಾರೆಗಳನ್ನು ಎಂದಿಗೂ ಮರೆಯಲಾಗದು ಎಂದು ಸ್ಮರಿಸಿದರು.

ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ಮೈಲಾರ ಮಹದೇವ ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಅಗ್ರಗಣ್ಯರಾಗಿದ್ದರು. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭೂಗತರಾಗಿ ಏಳು ತಿಂಗಳಿಗೂ ದೀರ್ಘಕಾಲ ಅವರು ಮಾಡಿದ ಸಾಹಸ, ಪಟ್ಟ ಕಷ್ಟ ಅಸಾಧಾರಣ. ‘ಮಾಡು ಇಲ್ಲವೆ ಮಡಿ’ ಎಂಬ ಗಾಂಧೀಜಿಯ ಕರೆಯಂತೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ. ಅವರ ನೆನಪಿನಲ್ಲಿ ಅಂಚೆ ಚೀಟಿ ತರುವ ಮೂಲಕ ಗೌರವ ಸಮರ್ಪಿಸಲಾಗುತ್ತಿದೆ. ಅದೇ ರೀತಿ ಸಾಮರಸ್ಯದ ಸಂಕೇತವಾಗಿ ಬದುಕಿದ ಶರೀಫರ ಅಂಚೆ ಚೀಟಿಯನ್ನು ಹೊರ ತರಬೇಕು ಎಂದು ಹೇಳಿದರು.