ಸಾವಿನ ಮನೆಯಲ್ಲಿ ರಾಜಕೀಯ ಮಾತಾಡುವುದೇನಿದೆ? ಅಮ್ಮನನ್ನು ಕಳೆದುಕೊಂಡು ಎರಡು ವಾರ ಆಗಿದೆ ಅಷ್ಟೆ. ಇಂಥ ಸಂದರ್ಭದಲ್ಲಿ ಯಾರೂ ರಾಜಕೀಯ ವಿಚಾರ ಚರ್ಚಿಸುವುದಿಲ್ಲ. ರಾಹುಲ್ ಗಾಂಧಿ ಇಲ್ಲಿಗೆ ಬಂದು ನಮ್ಮನ್ನು ಮಾತನಾಡಿಸಿ ಸಾಂತ್ವನ ಹೇಳಿ ಧೈರ್ಯ ತುಂಬಿದ್ದು ನಿಜಕ್ಕೂ ಖುಷಿ ಆಯ್ತು ಎಂದು ಶಿವಣ್ಣ ಹೇಳಿದ್ದಾರೆ.
ಬೆಂಗಳೂರು(ಜೂನ್ 12): ರಾಜ್ಯಕ್ಕೆ ಭೇಟಿ ನೀಡಿರುವ ಕಾಂಗ್ರೆಸ್ ಉಪನಾಯಕ ರಾಹುಲ್ ಗಾಂಧಿ ಇಂದು ದಿವಂಗತ ಪಾರ್ವತಮ್ಮ ರಾಜಕುಮಾರ್ ಅವರ ಮನೆಗೂ ತೆರಳಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಬಿಡುವಿಲ್ಲದ ವೇಳಾಪಟ್ಟಿಯಲ್ಲೂ ರಾಹುಲ್ ಗಾಂಧಿ ಸಮಯ ನೀಡಿ ಪಾರ್ವತಮ್ಮನವರ ಮನೆಗೆ ಭೇಟಿ ನೀಡಿದ್ದು ರಾಜ್ ಕುಟುಂಬದ ಸದಸ್ಯರಿಗೆ ಖುಷಿ ತಂದಿತು.
ಡಾ| ರಾಜ್ ಮನೆಗೆ ರಾಹುಲ್ ಭೇಟಿ ನೀಡುವ ಕುರಿತು ನಿನ್ನೆಯಿಂದಲೂ ಸುದ್ದಿ ಇತ್ತು. ರಾಜ್ ಕುಟುಂಬವನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂಬ ಸುದ್ದಿಯೂ ಸಣ್ಣದಾಗಿ ಕೇಳಿಬಂದಿತ್ತು. ಆದರೆ, ರಾಜ್ ಕುಟುಂಬದವರು ಈ ಸುದ್ದಿಯನ್ನು ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ. ರಾಹುಲ್ ಗಾಂಧಿ ತಮ್ಮ ಮನೆಗೆ ಭೇಟಿ ನೀಡಿದ್ದು ಯಾವುದೇ ರಾಜಕೀಯ ಉದ್ದೇಶದಿಂದಲ್ಲ ಎಂದು ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸಾವಿನ ಮನೆಯಲ್ಲಿ ರಾಜಕೀಯ ಮಾತಾಡುವುದೇನಿದೆ? ಅಮ್ಮನನ್ನು ಕಳೆದುಕೊಂಡು ಎರಡು ವಾರ ಆಗಿದೆ ಅಷ್ಟೆ. ಇಂಥ ಸಂದರ್ಭದಲ್ಲಿ ಯಾರೂ ರಾಜಕೀಯ ವಿಚಾರ ಚರ್ಚಿಸುವುದಿಲ್ಲ. ರಾಹುಲ್ ಗಾಂಧಿ ಇಲ್ಲಿಗೆ ಬಂದು ನಮ್ಮನ್ನು ಮಾತನಾಡಿಸಿ ಸಾಂತ್ವನ ಹೇಳಿ ಧೈರ್ಯ ತುಂಬಿದ್ದು ನಿಜಕ್ಕೂ ಖುಷಿ ಆಯ್ತು ಎಂದು ಶಿವಣ್ಣ ಹೇಳಿದ್ದಾರೆ.
ರಾಹುಲ್ ಗಾಂಧಿ ತಮ್ಮ ಮನೆಗೆ ಭೇಟಿ ನೀಡಿದ್ದು ತಮಗೆ ಹೆಮ್ಮೆಯ ಸಂಗತಿ ಎಂದು ಪುನೀತ್ ರಾಜಕುಮಾರ್ ಬಣ್ಣಿಸಿದ್ದಾರೆ. ಅವರು ಬಂದದ್ದು ಅಮ್ಮನಿಗೆ ಗೌರವ ಸಲ್ಲಿಸೋಕೆ. ಇದನ್ನ ನಾವು ತುಂಬಾ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ ಎಂದು ಹೇಳಿದ ಪುನೀತ್, ಅಂತ್ಯಸಂಸ್ಕಾರದ ವೇಳೆ ಸರಕಾರ ಮತ್ತು ಮಾಧ್ಯಮಗಳು ತೋರಿದ ಪ್ರೀತಿ ಕಂಡು ಬಹಳ ಖುಷಿಯಾಯಿತು. ತಾವು ವೈಯಕ್ತಿಕವಾಗಿ ಅಮ್ಮನನ್ನು ಕಳೆದುಕೊಂಡಿದ್ದರೂ ನಿಮ್ಮೆಲ್ಲರ ಮನದಲ್ಲಿದ್ದಾರೆಂಬುದು ಸಂತೋಷದ ಸಂಗತಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇನ್ನು, ರಾಘವೇಂದ್ರ ರಾಜಕುಮಾರ್ ಈ ಬಗ್ಗೆ ಮಾತನಾಡಿ, ತಮ್ಮ ತಾಯಿಗೆ ಗೌರವ ಸಲ್ಲಿಸಲು ಬಂದ ರಾಹುಲ್ ಗಾಂಧಿಗೆ ಧನ್ಯವಾದ ಅರ್ಪಿಸಿದ್ದಾರೆ. "ನನಗೆ ಸ್ಟ್ರೋಕ್ ಆಗಿದ್ದರ ಬಗ್ಗೆ ರಾಹುಲ್ ಅವರಿಗೆ ಮೊದಲೇ ಮಾಹಿತಿ ಇತ್ತು. ಚಿಕಿತ್ಸೆ ಮುಂದುವರಿಸುವಂತೆ ಸಲಹೆ ನೀಡಿದರು. ನಿಮ್ಮ ಆರೋಗ್ಯ ಸುಧಾರಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆಂದ್ರು... ಜೊತೆಗೆ ನಾವು ಮೂವರು ಸೋದರರ ಜೊತೆ ಅವರು ಫೋಟೋವನ್ನೂ ತೆಗೆಸಿಕೊಂಡರು," ಎಂದು ರಾಘಣ್ಣ ಹೇಳಿದ್ದಾರೆ.
