ತಮ್ಮ 46 ವರ್ಷಗಳ ರಾಜಕೀಯ ಜೀವನದಲ್ಲಿ  ಕಾಂಗ್ರೆಸ್'ನಿಂದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ,ಕೇಂದ್ರ ಸಚಿವ,ರಾಜ್ಯಪಾಲ, ಸ್ಪೀಕರ್  ಸೇರಿದಂತೆ ಹಲವು ಹುದ್ದೆಗಳನ್ನು ಪಡೆದ ಹಿರಿಯ ನಾಯಕನಿಗೆ 84ರ ಇಳಿ ವಯಸ್ಸಿನಲ್ಲಿ ಪಕ್ಷ ಏಕೆ ಬೇಡವಾಯ್ತು ಎಂಬುದರ ಬಗ್ಗೆ ಕೆಲವೊಂದು ಕಾರಣಗಳನ್ನು ನೀಡಿದ್ದಾರೆ.

ನವದೆಹಲಿ(ಮಾ.23): ಮಾಜಿ ಮುಖ್ಯಮಂತ್ರಿ ಹಾಲಿ ಬಿಜೆಪಿ ನಾಯಕ ಎಸ್.ಎಂ. ಕೃಷ್ಣ ಅವರ ಕಾಂಗ್ರೆಸ್ ನಿರ್ಗಮನ ಹಾಗೂ ಬಿಜೆಪಿ ಸೇರ್ಪಡೆಯ ಬಗ್ಗೆ ತಮ್ಮ ಮನಸಿನಲ್ಲಿದ್ದ ತುಮುಲಗಳನ್ನು ಸಂಕ್ಷಿಪ್ತವಾಗಿ ಹೇಳಿಕೊಂಡಿದ್ದಾರೆ.

ತಮ್ಮ 46 ವರ್ಷಗಳ ರಾಜಕೀಯ ಜೀವನದಲ್ಲಿ ಕಾಂಗ್ರೆಸ್'ನಿಂದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ,ಕೇಂದ್ರ ಸಚಿವ,ರಾಜ್ಯಪಾಲ, ಸ್ಪೀಕರ್ ಸೇರಿದಂತೆ ಹಲವು ಹುದ್ದೆಗಳನ್ನು ಪಡೆದ ಹಿರಿಯ ನಾಯಕನಿಗೆ 84ರ ಇಳಿ ವಯಸ್ಸಿನಲ್ಲಿ ಪಕ್ಷ ಏಕೆ ಬೇಡವಾಯ್ತು ಎಂಬುದರ ಬಗ್ಗೆ ಕೆಲವೊಂದು ಕಾರಣಗಳನ್ನು ನೀಡಿದ್ದಾರೆ.

* ಸಮರ್ಥವಲ್ಲದ ಒಂದೇ ಕುಟುಂಬದ ಆಡಳಿತ ಪಕ್ಷಕ್ಕೆ ಕೆಡುಕು

ಮೊದಲೆಲ್ಲ ಒಂದೇ ಕುಟುಂಬದ ಸದಸ್ಯರು ಆಡಳಿತದ ಚುಕ್ಕಾಣಿ ಹಿಡಿದರೂ ಪಕ್ಷ ಹಾಗೂ ರಾಷ್ಟ್ರವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದರು. ದಕ್ಷರು, ನಿಷ್ಠಾವಂತರಿಗೆ ಅಧಿಕಾರ ನೀಡುತ್ತಿದ್ದರು. ಆದರೆ ಈಗೆಲ್ಲ ಪರಿಸ್ಥಿತಿ ಬದಲಾಗಿದೆ. ಜನರು ಬದಲಾಗಿದ್ದಾರೆ. ಸೋನಿಯಾ ಗಾಂಧಿ ಕಾಲದಲ್ಲಿಯೂ ನನಗೆ ಪಕ್ಷದಲ್ಲಿ ನನಗೆ ಆರಾಮದಾಯಕ ಪರಿಸ್ಥಿತಿಯಿತ್ತು. ಆದರೆ ಕಳೆದ 3 ವರ್ಷಗಳಿಂದ ಈಗಿರುವ ನಾಯಕರಿಗೆ ನಾನು ಬೇಡವಾಗಿದ್ದೇನೆ.

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾರ್ಯವೈಖರಿಯಿಂದ ಬೇಸರವಾಗಿದೆಯೇ ?

* ರಾಜಕೀಯ ಒಂದು ಗಂಭೀರ ವ್ಯವಹಾರ ಕ್ಷೇತ್ರ. ಇದು ಹಿಟ್ ಆ್ಯಂಡ್ ರನ್ ಅಥವಾ ತಾತ್ಕಾಲಿಕವಾಗಿ ಕೆಲಸ ನಿರ್ವಹಿಸುವವರಿಗೆ ಸಾಧ್ಯವಾಗುವುದಿಲ್ಲ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿಯವರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

*ನೀವು ಹಲವು ವರ್ಷಗಳಿಂದ ಇಂದಿರಾ ಗಾಂಧಿ,ರಾಜೀವ್ ಗಾಂಧಿ ಆಡಳಿತದಲ್ಲಿ ಅವರೊಂದಿಗೆ ಅತ್ಯಂತ ನಿಕಟ ಸಂಬಂಧ ಹೊಂದಿದ್ದಿರಿ ಅವರು ಕೂಡ ಒಂದೇ ಕುಟುಂಬದವರು ತಾನೆ ?

ಅವರೆಲ್ಲ ಒಂದೇ ಕುಟುಂಬದವರಾದರೂ ಸಮರ್ಥ ಆಡಳಿತಗಾರರಾಗಿದ್ದರು. ಇಂದಿರಾ ಗಾಂಧಿ ಹತ್ಯೆಯಾದ ನಂತರ ನಾನು ಸೇರಿದಂತೆ ಕಾಂಗ್ರೆಸ್'ನ ಹಲವು ನಾಯಕರು ರಾಜೀವ್ ಅವರು ಅಧಿಕಾರ ವಹಿಸಿಕೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದೆವು. ರಾಜೀವ್ ನಿರರ್ಗಳ ಮಾತುಗಾರರಾಗಿದ್ದರು. ಜನರೊಂದಿಗೆ ಹತ್ತಿರವಾಗಿದ್ದರು. ಆದರೆ ಪ್ರಧಾನಿ ಸ್ಥಾನದಿಂದ ನಿರ್ಗಮಿಸಿದ ನಂತರ ಕೆಲವೊಂದು ಪರಿಸ್ಥಿತಿಗಳನ್ನು ನಿರ್ವಹಿಸಲು ಕಷ್ಟವಾಯಿತು.

* ರಾಹುಲ್ ಗಾಂಧಿ ಜೊತೆ ಪಕ್ಷದಲ್ಲಿರುವ ಸಮಸ್ಯೆಗಳ ಬಗ್ಗೆ ನೀವಾಗಲಿ ಇತರ ಹಿರಿಯ ನಾಯಕರಾಗಲಿ ದನಿಯತ್ತಿದ್ದೀರಾ ?

 ಅದಕ್ಕೆ ಅವಕಾಶವೆ ಎಲ್ಲದೆ? ಈ ಕಾರಣಕ್ಕಾಗಿ ತುಂಬ ದಿನಗಳಿಂದ ನಾನು ಪಕ್ಷಕ್ಕೆ ಸಲಹೆಗಳನ್ನು ನೀಡುವುದನ್ನು ನಿಲ್ಲಿಸಿದ್ದೇನೆ. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಕಠಿಣ ಹಾಗೂ ವೇಗದ ಕಾರ್ಯವೈಖರಿಯನ್ನು ನೋಡಿದರೆ ಯಾರಿಗಾದರೂ ಹೆಮ್ಮೆಯನಿಸುತ್ತದೆ.

*ಎಲ್ಲ ಪ್ರಮುಖ ಹುದ್ದೆಗಳನ್ನು ಅನುಭವಿಸಿ ನಂತರ ನೀವು ಪಕ್ಷವನ್ನು ಬಿಡುತ್ತಿದ್ದೀರಿ ಎಂದು ಹಲವು ಹಿರಿಯ ಕಾಂಗ್ರೆಸ್ ನಾಯಕರು ನಿಮ್ಮನ್ನು ತೆಗಳುತ್ತಿದ್ದಾರಲ್ಲ ?

ಈ ದೃಷ್ಟಿಯಿಂದ ನೋಡುವುದಕ್ಕೆ ಸಾಧ್ಯವೇ ಇಲ್ಲ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಅಭಿವೃದ್ಧಿಗೆ ನನ್ನ ಕೊಡುಗೆಯೂ ಅಪಾರವಾಗಿದೆ. ರಾಜ್ಯದಲ್ಲಿ ನಾನು 1999ರಿಂದ 2004ರವರೆಗೆ ಮುಖ್ಯಮಂತ್ರಿಯಾಗಿದ್ದೆ. 1999ರಲ್ಲಿ ನಾನಿರದಿದ್ದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವೇ ಇರುತ್ತಿರಲಿಲ್ಲ.

(ಮಾಹಿತಿ:ಹಿಂದೂಸ್ತಾನ್ ಟೈಮ್ಸ್)