ಅಮೇಥಿ(ಜು.10): ಲೋಕಸಭೆ ಚುನಾವಣೆಯಲ್ಲಿ ಅಮೇಥಿಯಲ್ಲಿ ಹೀನಾಯ ಸೋಲು ಕಂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣಾ ಸೋಲಿನ ಬಳಿಕ ಇದೇ ಮೊದಲ ಬಾರಿಗೆ ಅಮೇಥಿಗೆ ಭೇಟಿ ನೀಡಿದ್ದಾರೆ.

ದಿನವಿಡಿ ವಿವಿಧ ಕಾಯಕ್ರಮಗಳಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ, ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಕ್ಷೇತ್ರದ ಜನರೊಂದಿಗೆ ಸಮಾಲೋಚನೆ ನಡೆಸಿ ಗಮನ ಸೆಳೆದರು.

ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, ತಾವು ಅಮೇಥಿ ಸಂಸದನಲ್ಲದಿದ್ದರೂ, ಕ್ಷೇತ್ರಕ್ಕೆ ನಿಯಮಿತವಾಗಿ ಭೇಟಿ ನೀಡುವುದಾಗಿ ಹೇಳಿದರು. ಈ ಕ್ಷೇತ್ರ ತಮ್ಮ ಪಾಲಿಗೆ ಸ್ವಂತ ಮನೆಯಂತೆ ಇದ್ದು, ಇಲ್ಲಿನ ಜನರ ಪ್ರೀತಿ ವಿಶ್ವಾಸ ಪಡೆಯಲು ಆಗಾಗ ಕ್ಷೇತ್ರಕ್ಕೆ ಬರುವುದಾಗಿ ರಾಹುಲ್ ತಿಳಿಸಿದರು.

ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಾಹುಲ್ ಗಾಂಧಿ ಅವರನ್ನು, ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಸುಮಾರು 52,000 ಮತಗಳಿಂದ ಸೋಲಿಸಿದ್ದರು.