ಶ್ರೀನಗರ(ಆ.24): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಬಳಿಕ, ಕಣಿವೆಗೆ ಭೇಟಿ ನೀಡುವ ಪ್ರತಿಪಕ್ಷಗಳ ಒತ್ತಸೆಗೆ ಸ್ಥಳೀಯ ಆಡಳಿತ ಸೊಪ್ಪು ಹಾಕಿಲ್ಲ.

ವಿಶೇಷ ಸ್ಥಾನಮಾನ ರದ್ದತಿ ಘೋಷಣೆ ಬೆನ್ನಲ್ಲೇ ಜಾರಿ ಮಾಡಲಾಗಿದ್ದ ನಿಷೇಧಾಜ್ಞೆ ಕಾಶ್ಮೀರ ಭಾಗದಲ್ಲಿ ಇನ್ನೂ ಮುಂದುವರೆದಿದೆ. ಈ ಹಿನ್ನೆಲೆಯಲ್ಲಿ ಯಾರನ್ನೂ ಕಣಿವೆ ಒಳಗೆ ಬಿಡಲು ಸ್ಥಳೀಯ ಆಡಳಿತ ಸುತಾರಾಂ ತಯಾರಿಲ್ಲ.

ಕಣಿವೆಗೆ ಭೇಟಿ ನೀಡಲು ಪ್ರಯತ್ನಿಸಿದ ಹಲವು ಪ್ರತಿಪಕ್ಷ ನಾಯಕರನ್ನು ಈಗಾಗಲೇ ಶ್ರೀನಗರ ವಿಮಾನ ನಿಲ್ದಾಣದಲ್ಲೇ ತಡೆದು ವಾಪಸ್ ಕಳುಹಿಸಲಾಗಿದೆ.

ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಗುಲಾಂ ನಬಿ ಆಜಾದ್. ಆನಂದ್ ಶರ್ಮಾ, ಸಿಪಿಐನ ಡಿ ರಾಜಾ, ಸಿಪಿಎಂನ ಸೀತಾರಾಂ ಯೆಚೂರಿ, ಆರ್‌ಜೆಡಿಯ ಮನೋಜ್ ಝಾ, ಟಿಎಂಸಿಯ ದಿನೇಶ್ ತ್ರಿವೇದಿ, ಡಿಎಂಕೆಯ ತಿರುಚಿ ಸಿವಾ ಹಾಗೂ ಎನ್‌ಸಿಪಿ ನಾಯಕರ ನಿಯೋಗ ಕಾಶ್ಮೀರ ಭೇಟಿಗೆ ತೆರಳಿದೆ.

ನಾವು ಜವಾಬ್ದಾರಿಯುತ ಪ್ರತಿಪಕ್ಷದ ಸ್ಥಾನದಲ್ಲಿದ್ದು, ಯಾರೂ ಕಾನೂನನ್ನು ಮುರಿಯಲು ಅಲ್ಲಿಗೆ ತೆರಳುತ್ತಿಲ್ಲ. ವಿಶೇಷ ಸ್ಥಾನಮಾನ ರದ್ದತಿ ಬಳಿಕ ಕಣಿವೆಯ ಸ್ಥಿತಿಗತಿ ಅರಿಯಲಷ್ಟೇ ತೆರಳುತ್ತಿದ್ದೇವೆ ಎಂದು ಈಗಾಗಲೇ ನಿಯೋಗ ಸ್ಪಷ್ಟಪಡಿಸಿದೆ.

ಆದರೆ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಕಣಿವೆಗೆ ಭೇಟಿ ನೀಡದಂತೆ ಸ್ಥಳೀಯ ಆಡಳಿತ ಮನವಿ ಮಾಡಿದ್ದು, ಸಾರ್ವಜನಿಕ ಹಿತಾಸಕ್ತಿ ಹಾಗೂ ಭಧ್ರತೆಯ ಕಾರಣಕ್ಕೆ ಭೇಟಿಯ ನಿರ್ಧಾರ ಹಿಂಪಡೆಯುವಂತೆ ನಿಯೋಗಕ್ಕೆ ಮನವಿ ಮಾಡಿದೆ.

ಈಗಾಗಲೇ ರಾಹಹುಲ್ ಗಾಂಧಿ ನೇತೃತ್ವದ ನಿಯೋಗ ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದು, ರಾಜ್ಯಪಾಲರು ಏನು ಆದೇಶ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.