ನವದೆಹಲಿ[ಮೇ.30]: ಲೋಕಸಭಾ ಚುನಾವಣೆಯ ಆಘಾತಕಾರಿ ಸೋಲಿನ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿರುವ ರಾಹುಲ್‌ ಗಾಂಧಿ, ಈ ನಿರ್ಧಾರದಿಂದ ಹಿಂದೆ ಸರಿಯುವ ಮಾತೇ ಇಲ್ಲ. ತಮ್ಮ ನಿರ್ಧಾರ ಅಚಲ ಎಂದು ಸ್ಪಷ್ಪಪಡಿಸಿದ್ದಾರೆ. ಜೊತೆಗೆ ಈ ಸಂಬಂಧ ಇದೀಗ ಪಕ್ಷದ ನಾಯಕರ ಜೊತೆ ಮಾತುಕತೆ ನಡೆಸುವುದನ್ನೂ ಬಿಟ್ಟಿದ್ದಾರೆ. ಕಳೆದ 3 ದಿನಗಳಲ್ಲಿ ಕೆಲವೇ ಕೆಲವರನ್ನು ಮಾತ್ರವೇ ಭೇಟಿಯಾಗಿರುವ ರಾಹುಲ್‌, ಈ ಸಂದರ್ಭದಲ್ಲಿ ರಾಜೀನಾಮೆ ವಿಷಯ ಬಿಟ್ಟು ಬೇರೆ ವಿಷಯಗಳನ್ನು ಮಾತ್ರವೇ ಚರ್ಚಿಸಿದ್ದಾರೆ. ರಾಜೀನಾಮೆ ವಿಷಯದಲ್ಲಿ ಮಾತುಕತೆಯ ಪೂರ್ಣ ಹೊಣೆಯನ್ನು ಅವರು ತಮ್ಮ ಸೋದರಿ ಪ್ರಿಯಾಂಕಾ ವಾದ್ರಾಗೆ ವಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಂಗಳವಾರ ರಾಹುಲ್‌ ಗಾಂಧಿ, ಕೇವಲ ತಮ್ಮ ತಾಯಿ ಸೋನಿಯಾ, ಸೋದರಿ ಪ್ರಿಯಾಂಕಾ, ಪಕ್ಷದ ವಕ್ತಾರ ರಣದೀಪ್‌ ಸುರ್ಜೇವಾಲಾ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಜೊತೆ ಮಾತ್ರವೇ ಮಾತುಕತೆ ನಡೆಸಿದ್ದಾರೆ. ಉಳಿದಂತೆ ತಮ್ಮ ಭೇಟಿಗೆ ಬಂದಿದ್ದ ಅಶೋಕ್‌ ಗೆಹ್ಲೋಟ್‌, ಸಚಿನ್‌ ಪೈಲಟ್‌ ಸೇರಿದಂತೆ ಹಲವು ನಾಯಕರ ಜೊತೆ ಮಾತನಾಡಲು ಪ್ರಿಯಾಂಕರನ್ನೇ ರಾಹುಲ್‌ ಕೂರಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಸೋಲಿನ ಬಳಿಕ ಮುದ್ದಿನ 'ಪಿಡಿ'ಯೊಂದಿಗೆ ರಾಗಾ ಜಾಲಿ ರೈಡ್: ಪೋಟೋ ವೈರಲ್

ಈ ನಡುವೆ ತಮ್ಮ ನಿರ್ಧಾರಕ್ಕೆ ರಾಹುಲ್‌ ಗಟ್ಟಿಯಾಗಿ ಅಂಟಿಕೊಂಡಿರುವುದರಿಂದ ಚಿಂತಾಕ್ರಾಂತರಾಗಿರುವ ಪಕ್ಷದ ಹಲವು ನಾಯಕರು ಬುಧವಾರ, ದೆಹಲಿಯಲ್ಲಿನ ರಾಹುಲ್‌ ನಿವಾಸದ ಮುಂದೆ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಕೂಡಲೇ ರಾಹುಲ್‌ ತಮ್ಮ ನಿರ್ಧಾರಂದ ಹಿಂದೆ ಸರಿಯಬೇಕು ಎಂದು ದೆಹಲಿ ಕಾಂಗ್ರೆಸ್‌ ಘಟಕದ ನಾಯಕರು ಒತ್ತಾಯಿಸಿದ್ದಾರೆ. ಹೀಗೆ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್‌ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದರು.

ಈ ನಡುವೆ ಬುಧವಾರ ಮಧ್ಯಾಹ್ನ ಪಕ್ಷದ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಜಗದೀಶ್‌ ಟೈಟ್ಲರ್‌ ಸೇರಿದಂತೆ ಹಲವು ನಾಯಕರು ರಾಹುಲ್‌ ಮನೆ ಮುಂದೆ ಸೇರಿ, ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡುವ ಯತ್ನ ನಡೆಸಿದರಾದರೂ ಅದು ಫಲಕೊಡಲಿಲ್ಲ. ಸ್ವತಃ ಸೋನಿಯಾ ಅತ್ಯಾಪ್ತೆ, ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್‌ ಭೇಟಿಗೆ ಬಂದರೂ ರಾಹುಲ್‌ ಮಾತುಕತೆ ನಡೆಸಿಲ್ಲ.