ಬಂಡೀಪುರ[ಜು.27]: ಕರ್ನಾಟಕ ಮತ್ತು ಕೇರಳ ರಾಜ್ಯಗಳನ್ನು ಸಂಪರ್ಕಿಸುವ ಬಂಡೀಪುರದ ರಾಷ್ಟ್ರೀಯ ಹೆದ್ದಾರಿ-766ರಲ್ಲಿ ರಾತ್ರಿ ಸಂಚಾರ ನಿಷೇಧದ ಬಗ್ಗೆ ವಯನಾಡು ಸಂಸದರೂ ಆಗಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸಂಸತ್ತಿನಲ್ಲಿ ಧ್ವನಿಯೆತ್ತಿದ್ದಾರೆ. ನಿಷೇಧದಿಂದಾಗಿ ಉತ್ತರ ಮಲಬಾರ್ ಪ್ರಾಂತ್ಯದ ಜನತೆಗೆ ಆಗಿರುವ ತೊಂದರೆಯ ಮಾಹಿತಿ ಕೇಂದ್ರ ಸರ್ಕಾರಕ್ಕೆ ಇದೆಯೇ? ಈ ಬಗ್ಗೆ ಸರ್ಕಾರದ ಪ್ರತಿಕ್ರಿಯೆ ಏನು ಎಂದು ಚುಕ್ಕೆ ಗುರುತಿಲ್ಲದ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಯಥಾ ಸ್ಥಿತಿ ಮುಂದುವರಿಸುವ ನಿಲುವನ್ನು ಪ್ರಕಟಿಸಿದ್ದಾರೆ.

ಸೌಹಾರ್ದಯುತ ಇತ್ಯರ್ಥಕ್ಕೆ ಸಿದ್ಧವೆ?: ವನ್ಯಜೀವಿಗಳಿಗೆ ತೊಂದರೆಯಾಗಂತೆ ರಾತ್ರಿ ಸಂಚಾರ ನಿಷೇಧವನ್ನು ಹಿಂತೆಗೆದುಕೊಳ್ಳುವ ಅಥವಾ ಪರ್ಯಾಯ ಮಾರ್ಗಗಳನ್ನು ಬಗ್ಗೆ ಕೇಂದ್ರ ಸರ್ಕಾರ ಚಿಂತಿಸುತ್ತಿದೆಯೇ, ಕೇರಳ ಸರ್ಕಾರ ಯಾವುದಾದರೂ ಪ್ರಸ್ತಾವನೆ ಸಲ್ಲಿಸಿದೆಯೆ? ಒಂದು ವೇಳೆ ಸಲ್ಲಿಸಿದ್ದರೆ ಕೇಂದ್ರ ಸರ್ಕಾರ ಯಾವ ಕ್ರಮ ಕೈಗೊಂಡಿದೆ? ರಾಷ್ಟ್ರೀಯ ಉದ್ಯಾನದಲ್ಲಿ ಪ್ರಾಣಿಗಳಿಗೆ ತೊಂದರೆಯಾಗದಂತೆ ಎಲಿವೇಟೆಡ್ ಕಾರಿಡಾರ್ ರಚಿಸುವ ಪ್ರಸ್ತಾವನೆಯ ಬಗ್ಗೆ ಕೇಂದ್ರದ ನಿಲುವೇನು? ಇಂತಹ ಪ್ರಸ್ತಾವನೆಯ ಕಾರ್ಯಾಸಾಧ್ಯತಾ ಅಧ್ಯಯನ ಮಾಡಲಾಗಿದೆಯೇ? ಕರ್ನಾಟಕ ಮತ್ತು ಕೇರಳದ ಮುಖ್ಯಮಂತ್ರಿಗಳನ್ನು ಕರೆದು ಸೌಹರ್ದಯುತವಾಗಿ ಸಮಸ್ಯೆ ಪರಿಹರಿಸಲು ಕೇಂದ್ರ ಸಿದ್ಧವಿದೆಯೇ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಪರ್ಯಾಯ ಮಾರ್ಗವಿದೆ: ಈ ಎಲ್ಲ ಪ್ರಶ್ನೆಗಳಿಗೆ ಚುಟುಕಾಗಿ ಉತ್ತರಿಸಿರುವ ಗಡ್ಕರಿ, 2009ರಲ್ಲಿ ಚಾಮರಾಜನಗರದ ಜಿಲ್ಲಾಧಿಕಾರಿ ರಾತ್ರಿ 9ರಿಂದ ಬೆಳಗ್ಗೆ 6ರವರಗೆ ರಾಷ್ಟ್ರೀಯ ಹೆದ್ದಾರಿ 766 ರಲ್ಲಿ ರಾತ್ರಿ ಸಂಚಾರ ನಿಷೇಧಿಸಿದೆ. ಇದನ್ನು ಕರ್ನಾಟಕ ಹೈಕೋರ್ಟ್ ಕೂಡ ಎತ್ತಿ ಹಿಡಿದಿದ್ದು ಕೇರಳ ಸಾರಿಗೆ ಇಲಾಖೆ ಈ ತೀರ್ಪನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಈ ಸಮಸ್ಯೆ ಪರಿಹಾರಕ್ಕೆ ಸುಪ್ರೀಂ ಕೋರ್ಟ್ ಭೂ ಸಾರಿಗೆ ಸಚಿವಾಲಯದ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದೆ.

2019ರ ಫೆ.೧೮ರಂದು ನಡೆದಿದ್ದ ಸಮಿತಿಯ ಸಭೆಯಲ್ಲಿ ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಸಂಬಂಧಿಸಿದಂತೆ ಯಥಾ ಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಶಿಫಾರಸು ಮಾಡಲಾಗಿದೆ. ಈಗಾಗಲೇ ಪರ್ಯಾಯ ಮಾರ್ಗ ಲಭ್ಯವಿದ್ದು, ಹೆದ್ದಾರಿ-766ರಲ್ಲಿ ರಾತ್ರಿ ವೇಳೆಯೂ ನಾಲ್ಕು ಬಸ್ ಮತ್ತು ತುರ್ತು ವಾಹನಗಳಿಗೆ ಸಂಚಾರ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ. ರಾಹುಲ್ ಗಾಂಧಿ ಅವರು ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ಕಲ್ಪಿಸಲು ಒಲವು ತೋರಿದ್ದನ್ನು ಪರಿಸರವಾದಿಗಳು ವಿರೋಧಿಸಿದ್ದಾರೆ.