ನವದೆಹಲಿ :  ಫ್ರಾನ್ಸ್‌ ಜತೆಗೆ ಭಾರತ ಸರ್ಕಾರ ಮಾಡಿಕೊಂಡ ರಫೇಲ್‌ ಯುದ್ಧ ವಿಮಾನ ಖರೀದಿ ಕುರಿತಾಗಿನ ಬಹುನಿರೀಕ್ಷಿತ ಮಹಾಲೇಖಪಾಲರ (ಸಿಎಜಿ) 157 ಪುಟಗಳ ವರದಿ ಸಂಸತ್ತಿನಲ್ಲಿ ಬುಧವಾರ ಮಂಡನೆಯಾಗಿದ್ದು, ಈ ಖರೀದಿ ದರವು ಹಿಂದಿನ ಯುಪಿಎ ಸರ್ಕಾರವು ಒಪ್ಪಂದ ಮಾಡಿಕೊಂಡ ದರಕ್ಕಿಂತ ಒಟ್ಟಾರೆ ಶೇ.2.86ರಷ್ಟುಅಗ್ಗವಾಗಿದೆ ಎಂದು ಹೇಳಿದೆ. 

ಸಿಎಜಿಯ ಈ ವರದಿಯಿಂದ ‘ರಫೇಲ್‌ ಖರೀದಿ ವ್ಯವಹಾರದಲ್ಲಿ ಯಾವುದೇ ಹಗರಣ ನಡೆದಿಲ್ಲ. ಇದರಿಂದ ದೇಶಕ್ಕೆ ಉಳಿತಾಯವೇ ಆಗಿದೆ’ ಎಂಬ ಸರ್ಕಾರದ ವಾದಕ್ಕೆ ಬಲ ಬಂದಂತಾಗಿದೆ. ಜೊತೆಗೆ ಯುದ್ಧ ವಿಮಾನ ಖರೀದಿಯಲ್ಲಿ ಭಾರೀ ಹಗರಣ ನಡೆದಿದೆ ಎಂದು ಸತತವಾಗಿ ಆರೋಪ ಮಾಡಿಕೊಂಡು ಬಂದಿದ್ದ ವಿಪಕ್ಷ ಕಾಂಗ್ರೆಸ್‌ಗೆ ಮುಖಭಂಗವಾಗಿದೆ.

ಆದರೆ ‘ಖರೀದಿ ದರ ಎಷ್ಟುಎಂಬುದನ್ನು ಬಹಿರಂಗಪಡಿಸಬೇಕು’ ಎಂಬ ಪ್ರತಿಪಕ್ಷಗಳ ಆಗ್ರಹಕ್ಕೆ ಸಿಎಜಿ ವರದಿ ಸೊಪ್ಪು ಹಾಕಿಲ್ಲ. ‘ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಶನ್‌ ಜತೆ ಮಾಡಿಕೊಂಡ ಈ ಒಪ್ಪಂದದ ದರವು ದೇಶದ ರಕ್ಷಣಾ ಹಿತದೃಷ್ಟಿಯಿಂದ ಗೌಪ್ಯವಾಗಿರಬೇಕು’ ಎಂಬ ‘ಒಪ್ಪಂದದ ಅಂಶ’ಗಳ ಅನ್ವಯ, ಖರೀದಿ ದರದ ಯಾವುದೇ ಮಹಾಲೇಖಪಾಲರ ವರದಿಯಲ್ಲಿ ಪ್ರಸ್ತಾಪವಾಗಿಲ್ಲ.

ಸಿಎಜಿ ವರದಿ ಮಂಡನೆ ಬಳಿಕ ನಿರೀಕ್ಷೆಯಂತೆ ಹೇಳಿಕೆ-ಪ್ರತಿಹೇಳಿಕೆಗಳ ಸಮರ ಆರಂಭವಾಗಿದೆ. ವರದಿಯನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತಿರಸ್ಕರಿಸಿದ್ದು, ‘ಇದು ಪರಿಪೂರ್ಣ ವರದಿ ಅಲ್ಲ. ಒಪ್ಪಂದದ ಸಮಾಲೋಚಕರು ಮಾಡಿದ್ದ ಕೆಲವು ಆಕ್ಷೇಪಣೆಗಳನ್ನು ವರದಿಯು ಉಲ್ಲೇಖಿಸಿಲ್ಲ. ‘ಈ ಒಪ್ಪಂದವು ಯುಪಿಎ ದರಕ್ಕಿಂತ ಅಗ್ಗ ಹಾಗೂ ತ್ವರಿತವಾಗಿ ಭಾರತಕ್ಕೆ ರಫೇಲ್‌ ವಿಮಾನಗಳು ಬರಲಿವೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರು ನೀಡುತ್ತಿದ್ದ ಹೇಳಿಕೆಗಳನ್ನೂ ಮಕಾಡೆ ಮಲಗಿಸಿದೆ. ಮೋದಿ ಮಾಡಿಕೊಂಡ ಹೊಸ ಒಪ್ಪಂದವು ಅನಿಲ್‌ ಅಂಬಾನಿಗೆ 30 ಸಾವಿರ ಕೋಟಿ ರು. ಲಾಭ ಮಾಡಿಕೊಡುವ ಉದ್ದೇಶ ಹೊಂದಿತ್ತಷ್ಟೇ’ ಎಂದು ಟೀಕಿಸಿದ್ದಾರೆ.

ಆದರೆ, ರಾಹುಲ್‌ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿ, ಸಿಎಜಿ ವರದಿಯನ್ನು ಕೇಂದ್ರ ಸರ್ಕಾರ ಸ್ವಾಗತಿಸಿದೆ. ‘ಮಹಾಝೂಠ್‌ಬಂಧನ್‌ (ಮಹಾಸುಳ್ಳುಗಾರರ) ಬಣ್ಣ ಮತ್ತೊಮ್ಮೆ ಬಟಾಬಯಲಾಗಿದೆ. ಸುಪ್ರೀಂ ಕೋರ್ಟ್‌ ಹೇಳುವುದೂ ತಪ್ಪು, ಸಿಎಜಿ ಹೇಳುವುದೂ ತಪ್ಪು. ಕೇವಲ ವಂಶಜ (ರಾಹುಲ್‌ ಗಾಂಧಿ) ಹೇಳೋದು ಮಾತ್ರ ನಿಜವೇ? ಸತ್ಯಮೇವ ಜಯತೆ’ ಎಂದು ಕೇಂದ್ರ ಸಚಿವ ಅರುಣ್‌ ಜೇಟ್ಲಿ ಅವರು ರಾಹುಲ್‌ ಗಾಂಧಿಗೆ ತಿರುಗೇಟು ನೀಡಿದ್ದಾರೆ.

ಸಿಎಜಿ ವರದಿಯಲ್ಲಿ ಏನಿದೆ? 

ಮಹಾಲೇಖಪಾಲರ ವರದಿಯು 2007ರಲ್ಲಿ ಯುಪಿಎ ಸರ್ಕಾರ ಮಾಡಿಕೊಂಡಿದ್ದ ಮೂಲ ಒಪ್ಪಂದ ಹಾಗೂ 2015ರಲ್ಲಿ ಮೋದಿ ಸರ್ಕಾರವು ಅದನ್ನು ಬದಲಿಸಿ ಮಾಡಿಕೊಂಡ ಒಪ್ಪಂದದ ದರಗಳ ತಾಳೆ ಹಾಕಿ ನೋಡಿದೆ. ಒಟ್ಟು 14 ಸಲಕರಣೆಗಳ ಖರೀದಿ ಒಪ್ಪಂದ ಇದಾಗಿದೆ. ಇದರಲ್ಲಿ 7 ಸಲಕರಣೆಗಳನ್ನು ಮೋದಿ ಸರ್ಕಾರವು 2007ಕ್ಕಿಂತ ಅಧಿಕ ದರದಲ್ಲಿ ಖರೀದಿಸಿದೆ. 3 ಸಲಕರಣೆಗಳನ್ನು 2007ರ ದರದಲ್ಲೇ ಕೊಂಡಿದೆ ಹಾಗೂ ಇತರ 4 ಸಲಕರಣೆಗಳನ್ನು 2007ಕ್ಕಿಂತ ಕಡಿಮೆ ದರದಲ್ಲಿ ಖರೀದಿ ಮಾಡಿದೆ ಎಂದಿದೆ. ಇದರಿಂದ ಒಟ್ಟಾರೆ ಶೇ.2.86ರಷ್ಟುಉಳಿತಾಯವಾಗಿದೆ ಎಂದಿದೆ. ಆ ಪ್ರಕಾರ ಈ ಕೆಳಕಂಡ ಅಂಶಗಳನ್ನು ಸಿಎಜಿ ವರದಿ ಪಟ್ಟಿಮಾಡಿದೆ.

‘ಶೂನ್ಯ’ ದರ ವ್ಯತ್ಯಾಸ

- ಹಾರಲು ಸಿದ್ಧಸ್ಥಿತಿಯಲ್ಲಿರುವ ರಫೇಲ್‌ ಯುದ್ಧವಿಮಾನಗಳ, 2007 ಹಾಗೂ 2015 ಖರೀದಿ ಮೊತ್ತ ಒಂದೇ ತೆರನಾಗಿದೆ. ಇದರಲ್ಲಿ ಯಾವುದೇ ವ್ಯತ್ಯಾಸವಿಲ್ಲ. (ಎನ್‌ಡಿಎ ಸರ್ಕಾರವು ಹಾರಲು ಸಿದ್ಧಸ್ಥಿತಿಯಲ್ಲಿರುವ ಯುದ್ಧವಿಮಾನಗಳ ಖರೀದಿ ದರವು ಯುಪಿಎಗಿಂತ ಶೇ.9ರಷ್ಟುಕಮ್ಮಿ ಇದೆ ಎಂದು ವಾದಿಸಿತ್ತು.)

- ವಿಮಾನ ಸಿದ್ಧಪಡಿಸುವಿಕೆಗೆ ಸಂಬಂಧಿಸಿದ ಹಾಗೂ ರೋಲ್‌ ಈಕ್ವಿಪ್‌ಮೆಂಟ್‌ಗಳ 2007ರ ದರಕ್ಕೂ 2015ರ ದರಕ್ಕೂ ಯಾವುದೇ ವ್ಯತ್ಯಾಸವಿಲ್ಲ.

- ಸಿಮ್ಯುಲೇಟರ್‌ ಹಾಗೂ ಸ್ಟಿಮ್ಯುಲೇಟರ್‌ ತರಬೇತಿ ನಿರ್ವಹಣೆ ಕುರಿತಾದ 2007 ಹಾಗೂ 2015ರ ದರಗಳಿಗೂ ಯಾವುದೇ ವ್ಯತ್ಯಾಸವಿಲ್ಲ.

ಸಿಎಜಿ ಆಕ್ಷೇಪಗಳು

ಸಿಎಜಿ ವರದಿಯು ಒಟ್ಟಾರೆ ರಫೇಲ್‌ ಖರೀದಿಯಿಂದ ದೇಶದ ಬೊಕ್ಕಸಕ್ಕೆ ಶೇ.2.86ರಷ್ಟುಹಣ ಉಳಿತಾಯವಾಗಿದೆ ಎಂದು ಹೇಳಿದೆಯಾದರೂ ಕೆಲವು ಆಕ್ಷೇಪಗಳನ್ನೂ ವ್ಯಕ್ತಪಡಿಸಿದೆ. ಈ ಆಕ್ಷೇಪಗಳು ‘ದರ ದುಬಾರಿಯಾಯಿತು’ ಎಂಬ ಕಾಂಗ್ರೆಸ್‌ ಆಕ್ಷೇಪಗಳನ್ನು ಪುಷ್ಟೀಕರಿಸುತ್ತದೆ.

ಯುಪಿಎ ಸರ್ಕಾರ ಮಾಡಿಕೊಂಡ ಒಪ್ಪಂದದಲ್ಲಿ ಡಸಾಲ್ಟ್‌ ಏವಿಯೇಶನ್‌ ಕಂಪನಿಯು ಒಟ್ಟಾರೆ ಒಪ್ಪಂದದಲ್ಲಿ ಶೇ.25ರಷ್ಟುಹಣಕಾಸು ಖಾತರಿ ನೀಡಿತ್ತು. ಆದರೆ ಮೋದಿ ಸರ್ಕಾರ ಮಾಡಿಕೊಂಡ ಹೊಸ ಒಪ್ಪಂದದಲ್ಲಿ ಹಣಕಾಸು ಖಾತರಿ ಇಲ್ಲ. ಇದರಿಂದ ಡಸಾಲ್ಟ್‌ ಏವಿಏಶನ್‌ಗೆ ಲಾಭವಾಗಿದೆ ಎಂದು ವರದಿ ಅಸಮಾಧಾನ ವ್ಯಕ್ತಪಡಿಸಿದೆ.

‘ಒಪ್ಪಂದದಲ್ಲಿ ಬ್ಯಾಂಕ್‌ ಗ್ಯಾರಂಟಿ ಪಡೆಯಬೇಕು’ ಎಂಬ ಕೇಂದ್ರ ಕಾನೂನು ಸಚಿವಾಲಯದ ಸಲಹೆಯನ್ನು ಮೋದಿ ಸರ್ಕಾರ ಕಡೆಗಣಿಸಿತು ಎಂದಿದೆ ಸಿಎಜಿ ವರದಿ. ಬ್ಯಾಂಕ್‌ ಖಾತರಿ ಇದ್ದರೆ, ಒಪ್ಪಂದದ ಅಂಶಗಳ ಉಲ್ಲಂಘನೆ ಆದ ಸಂದರ್ಭದಲ್ಲಿ ಪರಿಹಾರ ಮೊತ್ತವನ್ನು ಪಡೆಯಲು ಭಾರತಕ್ಕೆ ಅವಕಾಶ ಲಭಿಸುತ್ತಿತ್ತು.

ಇದೇ ವೇಳೆ ಭಾರತದ ಅಗತ್ಯಕ್ಕೆ ತಕ್ಕಂತೆ ಹೆಚ್ಚುವರಿಯಾಗಿ ರಫೇಲ್‌ ಯುದ್ಧವಿಮಾನಗಳಿಗೆ ಸಲಕರಣೆ ಜೋಡಿಸಲಾಗಿದೆ ಎಂಬ ಕೇಂದ್ರ ಸರ್ಕಾರದ ಸಮರ್ಥನೆಯನ್ನೂ ಸಿಎಜಿ ತಿರಸ್ಕರಿಸಿದೆ. 4 ಹೆಚ್ಚುವರಿ ಸಲಕರಣೆಗಳ ಜೋಡಣೆ ಅನಗತ್ಯವಾಗಿತ್ತು ಎಂದಿದೆ.

ಇನ್ನು 2007ರಲ್ಲಿ ಮಾಡಿಕೊಂಡ ಒಪ್ಪಂದದಲ್ಲಿ ಬೆಂಗಳೂರಿನ ಎಚ್‌ಎಎಲ್‌ಗೆ ರಫೇಲ್‌ ತಂತ್ರಜ್ಞಾನದ ಹಸ್ತಾಂತರ ಮಾಡುವ ಪ್ರಸ್ತಾಪವಿತ್ತು. ಆದರೆ ಮೋದಿ ಸರ್ಕಾರದ ಒಪ್ಪಂದದಲ್ಲಿ ಈ ಪ್ರಸ್ತಾಪ ಇಲ್ಲವೇ ಇಲ್ಲ.

2007, 2015ರ ಒಪ್ಪಂದಗಳಲ್ಲಿನ ವ್ಯತ್ಯಾಸವೇನು?

2007ರಲ್ಲಿ ಯುಪಿಎ ಸರ್ಕಾರ 126 ಯುದ್ಧವಿಮಾನ ಖರೀದಿಸಲು ಒಪ್ಪಿತ್ತು.  26 ಪೈಲಟ್‌ಗಳು, 76 ತಾಂತ್ರಿಕ ಸಿಬ್ಬಂದಿಗೆ ತರಬೇತಿ ನೀಡಲು ವಿಮಾನ ಸಿದ್ಧಪಡಿಸುವ ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಶನ್‌ ಒಪ್ಪಿತ್ತು.

2015ರಲ್ಲಿ 126ರ ಬದಲು 36 ಸಂಪೂರ್ಣ ಸನ್ನದ್ಧ ಸ್ಥಿತಿಯಲ್ಲಿರುವ ರಫೇಲ್‌ ಯುದ್ಧವಿಮಾನ ಮಾತ್ರ ಖರೀದಿಸಲು ಮೋದಿ ಸರ್ಕಾರ ನಿರ್ಧರಿಸಿತು. 27 ಪೈಲಟ್‌ಗಳು, 146 ತಂತ್ರಜ್ಞರು ಹಾಗೂ ಇಬ್ಬರು ಎಂಜಿನಿಯರ್‌ಗಳಿಗೆ ತರಬೇತಿ ನೀಡಲು ಡಸಾಲ್ಟ್‌ ಏವಿಯೇಶನ್‌ ಒಪ್ಪಿತ್ತು.

ಕಾಂಗ್ರೆಸ್‌ ಆಕ್ಷೇಪ ಏನಿತ್ತು?

ಯುಪಿಎ ಸರ್ಕಾರ 2007ರಲ್ಲಿ 520 ಕೋಟಿ ರು.ಗೆ ಒಂದು ವಿಮಾನ ಖರೀದಿಸಲು ನಿರ್ಧರಿಸಿತ್ತು. ಆದರೆ ಮೋದಿ ಸರ್ಕಾರ ಒಂದು ವಿಮಾನಕ್ಕೆ 1600 ಕೋಟಿ ರು. ನೀಡುತ್ತಿದೆ. ಅಲ್ಲದೆ, ವಿಮಾನಗಳ ಸಂಖ್ಯೆಯನ್ನೂ 126ರಿಂದ 36ಕ್ಕೆ ಮೋದಿ ಸರ್ಕಾರ ಇಳಿಸಿದೆ ಎಂಬುದು ಕಾಂಗ್ರೆಸ್‌ ಆಕ್ಷೇಪವಾಗಿತ್ತು. ಆದರೆ ವಿಮಾನ ಖರೀದಿ ದರದ ಬಗ್ಗೆ ಸಿಎಜಿ ವರದಿಯಲ್ಲಿ ಪ್ರಸ್ತಾಪವಿಲ್ಲ.