ತುಮಕೂರು[ಫೆ.18]  ಪುಲ್ವಾಮಾದಲ್ಲಿ ಉಗ್ರರ ದಾಳಿಯಲ್ಲಿ ಯೋಧರು ಪ್ರಾಣ ಕಳೆದುಕೊಂಡಿದ್ದಕ್ಕೆ ಇಡೀ ದೇಶವೇ ಕಣ್ಣೀರು ಸುರಿಸುತ್ತಿದೆ.  ಘಟನೆಯ ಸಮೀಪವೇ ಇದ್ದ ತುಮಕೂರಿನ ಯೋಧ ಎಂ.ಸಾಧಿಕ್ ಘೋರ ಪ್ರಕರಣದ ವೇಳೆ ಏನಾಯಿತು ಎಂಬುದನ್ನು ತೆರೆದಿಟ್ಟಿದ್ದಾರೆ.

‘ನಾನು ಪುಲ್ವಾಮಾ ದಿಂದ 12  ಕಿಮೀ ದೂರದಲ್ಲಿ ಇದ್ದೆ. ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದೆ. ಘಟನೆ ತುಂಬಾ ಭಯಾನಕ ಹಾಗೂ ಘೋರವಾಗಿತ್ತು. ಯೋಧರ‌ ಛಿದ್ರ ‌ಛಿದ್ರ ದೇಹ ನೋಡಿ ಕರುಳು  ಹಿಂಡುತ್ತಿತ್ತು. ಮಂಡ್ಯದ ಹುತಾತ್ಮ ಯೋಧನ ಪರಿಚಯ  ನನಗೆ ಇರಲಿಲ್ಲ. ಅವರದ್ದು ಬೇರೆ ಯೂನಿಟ್ ಆಗಿತ್ತು. ಆತ್ಮಾಹುತಿ ಮಾಡಿಕೊಂಡ ಉಗ್ರ ಆದಿಲ್ ಅಹಮದ್ ವಾಸ ಇದ್ದ ಸ್ಥಳ ಕೂಡಾ ನೋಡಿದ್ದೆನೆ. ಆತ ಕಾಶ್ಮೀರದ ವಾಸಿ. ಕಾಶ್ಮೀರದಲ್ಲಿ ಸ್ಥಳೀಯ ಉಗ್ರರ ಸಂಖ್ಯೆ ಹೆಚ್ಚಿದೆ’

ಕರ್ನಾಟಕದಲ್ಲೇ ಕೇಳಿಬಂತು ದೇಶವಿರೋಧಿ ಘೋಷಣೆ

ಕಾಶ್ಮೀರದ ಸ್ಥಳೀಯ ಉಗ್ರರೊಂದಿಗೆ ನಿತ್ಯ ಹೆಣಗಾಟ ಮಾಡುತ್ತೇವೆ. ಉಗ್ರರಿಂದಾಗಿ ಘೋರ ವಾತಾವರಣ ಕಾಶ್ಮೀರದಲ್ಲಿ ನಿರ್ಮಾಣ ಆಗಿದೆ. ಸರ್ಕಾರದ ಆದೇಶ ಹೊರಡಿಸಿದರೆ ನಮ್ಮ ಸಹೋದ್ಯೋಗಿಗಳನ್ನು ಕೊಂದವರನ್ನು ನಾವು ಸುಮ್ಮನೆ ಬಿಡಲ್ಲ. ಆ ದಿನವನ್ನೆ ಎದುರು ನೋಡುತಿದ್ದೇವೆ’ ಎಂದು ಆಕ್ರೋಶ ಭರಿತ ಮಾತುಗಳನ್ನು ಹೊರಹಾಕಿದ್ದಾರೆ.

ರಜೆ ನಿಮಿತ್ತ ಇಂದು ತುಮಕೂರಿಗೆ ಬಂದ ಸಾಧಿಕ್ ಮಾಧ್ಯಮದೊಂದಿಗೆ ಮಾತನಾಡಿದರು. ಈ ಬಾರಿಯ ಶೌರ್ಯ ಪ್ರಶಸ್ತಿ ಪುರಸ್ಕೃತ ಸಾದಿಕ್ ಜಮ್ಮು ಕಾಶ್ಮೀರದಲ್ಲಿಯೇ ದೇಶದ ಗಡಿ ಕಾಯುವ ಕೆಲಸ ಮಾಡುತ್ತಿದ್ದಾರೆ.