ಪ್ರಸುತ ಮನುಷ್ಯ ಉಳಿವಿಗೆ ವನ್ಯ ಜೀವಿಗಳು ಮತ್ತು ಅರಣ್ಯ ಪರಿಸರವನ್ನು ಸಂರಕ್ಷಣೆ ಮಾಡುವ ದುಸ್ಥಿತಿಗೆ ತಲುಪಿದ್ದೇವೆ ಎಂದು ವನ್ಯಜೀವಿ ಸಂರಕ್ಷಣೆ ಅಭಿಯಾನದ ರಾಯಭಾರಿ ನಟ ಪ್ರಕಾಶ್ ರೈ ವಿಷಾದ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಪ್ರಸುತ ಮನುಷ್ಯ ಉಳಿವಿಗೆ ವನ್ಯ ಜೀವಿಗಳು ಮತ್ತು ಅರಣ್ಯ ಪರಿಸರವನ್ನು ಸಂರಕ್ಷಣೆ ಮಾಡುವ ದುಸ್ಥಿತಿಗೆ ತಲುಪಿದ್ದೇವೆ ಎಂದು ವನ್ಯಜೀವಿ ಸಂರಕ್ಷಣೆ ಅಭಿಯಾನದ ರಾಯಭಾರಿ ನಟ ಪ್ರಕಾಶ್ ರೈ ವಿಷಾದ ವ್ಯಕ್ತಪಡಿಸಿದ್ದಾರೆ.
ನಗರದ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಮಂಗಳವಾರ ನಡೆದ ವೈದ್ಯ ವಿದ್ಯಾರ್ಥಿಗಳೊಂದಿಗೆ ವನ್ಯ ಜೀವಿ ಸಂರಕ್ಷಣೆ ವಿಷಯ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವನ್ಯಜೀವಿ ಸಂರಕ್ಷಣೆ ಕೆಲಸ ಕೇವಲ ಅರಣ್ಯ ಇಲಾಖೆ ಹಾಗೂ ಸರ್ಕಾರಕ್ಕೆ ಸೇರಿದ್ದು ಎಂದು ಯಾರೂ ಸಹ ಭಾವಿಸಬಾರದು. ವನ್ಯ ಜೀವಿ ಸಂರಕ್ಷಣೆಯ ಕಾರ್ಯದಲ್ಲಿ ಪ್ರತಿಯೊಬ್ಬರು ಸಕ್ರಿಯರಾಗಿ ಪಾಲ್ಗೊಳ್ಳಬೇಕು. ಆಗ ಮಾತ್ರ ರಾಜ್ಯದ ಅತ್ಯಮೂಲ್ಯ ವನ್ಯ ಜೀವಿ ಸಂಪತ್ತು ಮತ್ತು ಅರಣ್ಯ ಪರಿಸರವನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಕರೆ ನೀಡಿದರು.
ಪ್ರಸ್ತುತ ಮನುಷ್ಯನ ಉಳಿವು ಹಾಗೂ ಬೆಳವಣಿಗಾಗಿ ವನ್ಯ ಜೀವಿಗಳು ಮತ್ತು ಅರಣ್ಯ ಪರಿಸರವನ್ನು ಸಂರಕ್ಷಿಸಿಕೊಳ್ಳಬೇಕಾದ ದುಸ್ಥಿತಿಗೆ ನಾವೆಲ್ಲರೂ ಬಂದು ತಲುಪಿದ್ದೇವೆ. ಇದು ಅತ್ಯಂದು ದೌಭಾಗ್ಯ. ಈಗಾಗಲಾದರೂ ಪ್ರತಿಯೊಬ್ಬರು ಎಚ್ಚರಗೊಳ್ಳಬೇಕಿದೆ. ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿಗಳು ನಿತ್ಯ ಸಾವಿರಾರು ಜನರೊಂದಿಗೆ ವ್ಯವಹರಿಸುತ್ತಾರೆ. ಹೀಗಾಗಿ ತಮ್ಮನ್ನು ಭೇಟಿಯಾದ ಪ್ರತಿಯೊಬ್ಬರಿಗೂ ವನ್ಯ ಜೀವಿಯ ಸಂರಕ್ಷಣೆ ಕಾರ್ಯದ ಮಹತ್ವ ಹಾಗೂ ಪ್ರಯೋಜನದ ಸಂದೇಶವನ್ನು ಮನಮುಟ್ಟುವಂತೆ ತಿಳಿಸಬೇಕು. ಆ ಮೂಲಕ ವನ್ಯ ಜೀವಿ ಸಂಪತ್ತಿನ ರಕ್ಷಣೆಗೆ ತಮ್ಮ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ 650ಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳು ಪಾಲ್ಗೊಂಡು, ನಟ ಪ್ರಕಾಶ್ ರೈ ಅವರಲ್ಲಿ ವನ್ಯ ಜೀವಿ ಮತ್ತು ಪರಿಸರ ಕುರಿತು ಹಲವು ಪ್ರಶ್ನೆ ಕೇಳಿ ಉತ್ತರ ಪಡೆದರು.
ಈ ವೇಳೆ ವಿಕ್ಟೋರಿಯಾ ಆಸ್ಪತ್ರೆಯ ಅಧೀಕ್ಷಕ ಸತೀಶ್ ಆಡಳಿತಾಧಿಕಾರಿ ಸೌಮ್ಯಾ ಗೌಡ, ಕಾಲೇಜು ವಿದ್ಯಾರ್ಥಿ ಸಂಘದ ಮುಖಂಡ ಆನಂದ್ ಮತ್ತಿತರರು ಉಪಸ್ಥಿತರಿದ್ದರು.
