ದಸರಾ ಮಹೋತ್ಸವ ಉದ್ಘಾಟನೆಗೆ ನಿತ್ಯೋತ್ಸವ ಕವಿ ಪ್ರೊ.ನಿಸಾರ್ ಅಹ್ಮದ್ ಅವರನ್ನು ದಸರಾ ಸ್ವಾಗತ ಸಮಿತಿಯಿಂದ ಗುರುವಾರ ಅಧಿಕೃತವಾಗಿ ಆಹ್ವಾನಿಸಲಾಯಿತು.
ಮೈಸೂರು (ಸೆ.07): ದಸರಾ ಮಹೋತ್ಸವ ಉದ್ಘಾಟನೆಗೆ ನಿತ್ಯೋತ್ಸವ ಕವಿ ಪ್ರೊ.ನಿಸಾರ್ ಅಹ್ಮದ್ ಅವರನ್ನು ದಸರಾ ಸ್ವಾಗತ ಸಮಿತಿಯಿಂದ ಗುರುವಾರ ಅಧಿಕೃತವಾಗಿ ಆಹ್ವಾನಿಸಲಾಯಿತು.
ಮೈಸೂರು ಮಹಾನಗರ ಪಾಲಿಕೆ ಮೇಯರ್ ಎಂ.ಜೆ.ರವಿಕುಮಾರ್, ಜಿಲ್ಲಾಧಿಕಾರಿ ಡಿ.ರಂದೀಪ್ ಹಾಗೂ ದಸರಾ ಸ್ವಾಗತ ಸಮಿತಿ ಸದಸ್ಯರು ಬೆಂಗಳೂರಿನ ನಾಗರಬಾವಿಯಲ್ಲಿರುವ ಪ್ರೊ.ನಿಸಾರ್ ಅಹ್ಮದ್ ಅವರ ನಿವಾಸಕ್ಕೆ ತೆರಳಿ ಅವರನ್ನು ಅಧಿಕೃತವಾಗಿ ಆಹ್ವಾನಿಸಿದರು. ಸೆ.21 ರಂದು ಚಾಮುಂಡಿಬೆಟ್ಟದಲ್ಲಿ ಚಾಮುಂಡಿ ತಾಯಿಯ ಸನ್ನಿಧಿಯಲ್ಲಿ ದಸರಾ ಉದ್ಘಾಟನೆಯನ್ನು ತಾವು ನೆರವೇರಿಸಬೇಕು ಎಂದು ಪ್ರೊ. ನಿಸಾರ್ ಅವರ ಬಳಿ ಸ್ವಾಗತ ಸಮಿತಿ ಸದಸ್ಯರು ಕೇಳಿಕೊಂಡರು. ಅಲ್ಲದೆ, ಫಲತಾಂಬೂಲ ನೀಡಿ, ಶಾಲು ಹೊದಿಸಿ ಆಹ್ವಾನ ನೀಡಿದರು. ಈ ವೇಳೆ ಮಾತನಾಡಿದ ನಿಸಾರ್ ಅಹ್ಮದ್ ಅವರು, ಬಾಲ್ಯದಲ್ಲಿ ದೂರದಿಂದ ದಸರಾ ಮಹೋತ್ಸವ ನೋಡುತ್ತಿದ್ದೆವು. ಈಗ ದಸರಾ ಉದ್ಘಾಟನೆ ನೆರವೇರಿಸುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.
ಗಣ್ಯರಿಗೂ ಆಹ್ವಾನ: ಇದೇ ವೇಳೆ, ಸಿಎಂ ಸಿದ್ದರಾಮಯ್ಯ ಅವರನ್ನು ಫಲತಾಂಬೂಲ ನೀಡಿ ಶಾಲು, ಮೈಸೂರು ಪೇಟ ತೊಡಿಸಿ ಆಹ್ವಾನಿಸಲಾಯಿತು. ರಾಜ್ಯಪಾಲ ವಜೂಭಾಯಿ ರೂಡಾಭಾಯಿ ವಾಲಾ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುಬ್ರತೋ ಕಮಲ್ ಮುಖರ್ಜಿ, ರಾಜ್ಯದ ಮುಖ್ಯ ಕಾರ್ಯದರ್ಶಿ ಸುಭಾಶ್ ಚಂದ್ರ ಖುಂಟಿಯಾ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಯಿತು.
