ಆರ್‌ಎಸ್‌ಎಸ್ ಬಿಟ್ಟು, ಬೇರೆ ಸಂಸ್ಥೆಯನ್ನು ಗೌರವಿಸುವುದು ಮೋದಿಗೆ ಗೊತ್ತಿಲ್ಲ: ರಾಹುಲ್ ಗಾಂಧಿ

Prime Ministers model of leadership is that of a dictator says Rahul Gandhi
Highlights

ಸರ್ವಾಧಿಕಾರಿ ಧೋರಣೆ ತಾಳುವ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಹಾಗೂ ಹಣದಿಂದ ಜನರನ್ನು ಕೊಳ್ಳಬಹುದು ಎಂದು ಭಾವಿಸಿದ್ದರು. ಆದರೆ, ಕರ್ನಾಟಕದಲ್ಲಿ ಅವರ ಆಶಯ ಈಡೇರಲಿಲ್ಲ. ಉತ್ತರ ಭಾರತದಲ್ಲಿ ಗೆದ್ದಂತೆ, ಬಿಜೆಪಿಗೆ ದಕ್ಷಿಣ ಭಾರತದಲ್ಲಿಯೂ ವಿಜಯದ ಪತಾಕೆ ಹಾರಿಸಲು ಸಾಧ್ಯವಾಗಲಿಲ್ಲ. ವಿಶ್ವಾಸ ಮತವನ್ನು ಯಾಚಿಸುವ ಮುನ್ನವೇ ಯಡಿಯೂರಪ್ಪ ರಾಜೀನಾಮೆ ನೀಡಿದ್ದು, ಇದಕ್ಕೆ ರಾಹುಲ್ ಗಾಂಧಿ ನೀಡಿರುವ ಪ್ರತಿಕ್ರಿಯೆ ಏನು?

ಹೊಸದಿಲ್ಲಿ: ಬಿಜೆಪಿ ಶಾಸಕರು ಮತ್ತು ಸ್ಪೀಕರ್ ಏನು ಬೇಕಾದರೂ ಮಾಡಬಹುದು ಎಂದು ತಿಳಿದಿದ್ದರು. ಜನಾದೇಶವನ್ನು ಅನರ್ಹಗೊಳಿಸಬಹುದೆಂದು ಕೊಂಡಿದ್ದರು. ಆದರೆ, ಭಾರತದಲ್ಲಿ ಪ್ರಜೆಗಳೇ ರಾಜರು, ಅಧಿಕಾರ ಅಥವಾ ಹಣದಿಂದ ದೇಶವನ್ನು ಆಳುವುದು ಅಸಾಧ್ಯ, ಎಂಬುವುದು ಸಾಬೀತಾಗಿದೆ, ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ಕರ್ನಾಟಕದಲ್ಲಿ ವಿಶ್ವಾಸ ಮತ ಯಾಚಿಸುವ ಮುನ್ನವೇ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. 

'ರಾಷ್ಟ್ರ ಮಟ್ಟದಲ್ಲಿಯೂ ಪ್ರತಿಪಕ್ಷಗಳೊಂದಿಗೆ ಕೈ ಜೋಡಿಸಿ, ಬಿಜೆಪಿಯನ್ನು ಸೋಲಿಸುತ್ತೇವೆ,' ಎಂದು ರಾಹುಲ್ ಭರವಸೆ ನೀಡಿದ್ದಾರೆ.

 

 

'ಕರ್ನಾಟಕದ ವಿಧಾನಸಭೆಯಲ್ಲಿ ರಾಷ್ಟ್ರ ಗೀತೆ ಹಾಡುವ ಮುನ್ನವೇ ಬಿಜೆಪಿ ಶಾಸಕರು, ಸ್ಪೀಕರ್ ಸದನದಿಂದ ಎದ್ದು ಹೋಗಿದ್ದಾರೆ. ಆರ್‌ಎಸ್‌ಎಸ್ ಹೊರತುಪಡಿಸಿ ಯಾವುದೇ ಸಂಸ್ಥೆಗೂ ಗೌರವಿಸಬಾರದೆಂಬುವುದು ಪ್ರಧಾನಿ ಸೇರಿ ಬಿಜೆಪಿಯ ಧೋರಣೆ. ಮಾಧ್ಯಮ ಸೇರಿ, ದೇಶದ ಎಲ್ಲ ಉನ್ನತ ಸಂಸ್ಥೆಗಳ ಮೇಲೂ ಬಿಜೆಪಿ ದಾಳಿ ನಡೆಸುತ್ತಿದೆ. ದೇಶದ ಸುಪ್ರೀಂ ಕೋರ್ಟ್, ಜನರು ಹಾಗೂ ಶಾಸಕರ ಮುಂದೆ ಅವರೇನೂ ಅಲ್ಲವೆಂಬುವುದು ಇದೀಗ ಸಾಬೀತಾಗಿದೆ,' ಎಂದು ಆರೋಪಿಸಿದರು.

'ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಕೊಂಡು ಕೊಳ್ಳಲು ಅಮಿತ್ ಶಾ ಹಾಗೂ ಪ್ರಧಾನಿ ಯತ್ನಿಸಿದರು. ಭ್ರಷ್ಟಚಾರ ಮುಕ್ತ ದೇಶವನ್ನಾಗಿಸುವುದಾಗಿ ಹೇಳಿದ ಪ್ರಧಾನಿಯೇ ಭ್ರಷ್ಟಾಚಾರ ಹೆಚ್ಚಿಸಲು ಮುಂದಾಗಿದ್ದಾರೆ,' ಎಂದರು.

'ಕಾಂಗ್ರೆಸ್ ಹಾಗೂ ಜೆಡಿಎಸ್ ಒಂದಾಗಿ, ದೇಶದ ಜನರ ಮೇಲೆ ನಡೆಯುತ್ತಿರುವ ಆಕ್ರಮಣವನ್ನು ನಿಲ್ಲಿಸುತ್ತೇವೆ. ದೇಶವನ್ನು ಸಕಲ ರೀತಿಯಲ್ಲಿಯೂ ರಕ್ಷಿಸಲು ಪಣ ತೊಡುತ್ತೇವೆ,' ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು.
 

loader