ನ್ಯಾಯಧೀಶರು ಸುದ್ದಿ ಗೋಷ್ಠಿ ನಡೆಸಿದ್ದು ತಪ್ಪು: ನ್ಯಾ.ಸಂತೋಷ ಹೆಗ್ಡೆ

First Published 12, Jan 2018, 1:35 PM IST
press conference of supreme court judges is wrong says Santhosh Hegde
Highlights

ನ್ಯಾಯಾಂಗದಲ್ಲಿರೋ ಸಮಸ್ಯೆಯನ್ನು ಸಾರ್ವಜನಿಕವಾಗಿ ಸುದ್ದಿ ಗೋಷ್ಠಿ ಮೂಲಕ ನಾಲ್ವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹೇಳಿಕೊಂಡಿದ್ದು ತಪ್ಪೆನ್ನುತ್ತಾರೆ ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ.

ಬೆಂಗಳೂರು: ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಪೀಠದ ನಾಲ್ವರು ನ್ಯಾಯಾಧೀಶರು ಸುದ್ದಿ ಗೋಷ್ಠಿ ನಡೆಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿರುವುದು ಸಾಕಷ್ಟು ಚರ್ಚೆಗಳಿಗೆ ಗ್ರಾಸವಾಗಿದೆ. ಇದಲ್ಲದೇ ಬೇರೆ ಮಾರ್ಗವಿದ್ದರೂ, ಈ ರೀತಿ ಸಾರ್ವಜನಿಕವಾಗಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿರುವುದು ತಪ್ಪೆಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಸಹ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಸಮಸ್ಯೆಗಳು ಇಲ್ಲವೆಂದಲ್ಲ. ಎಲ್ಲೆಡೆ ಇದೆ. ಆದರೆ, ನ್ಯಾಯಾಂಗದ ಮೇಲೆ ಜನರಿಗೆ ಸಾಕಷ್ಟು ನಂಬಿಕೆ ಇದೆ. ನ್ಯಾಯಾಲಯದ ಮಿತಿಯೊಳಗೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿತ್ತು. ಈ ರೀತಿ ಜನರ ಮುಂದೆ ಬರಬಾರದಿತ್ತು. ಎಷ್ಟೇ ನೊಂದಿದ್ದರೂ, ಸಂಸ್ಥೆಯ ಗೌರವವನ್ನು ಉಳಿಸಿಕೊಳ್ಳಬೇಕಿತ್ತು,' ಎಂದು ನ್ಯಾ.ಸಂತೋಷ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'70 ವರ್ಷದಲ್ಲಿ ಸುಪ್ರೀಂ ಕೋರ್ಟಿಗೆ ನ್ಯಾಯಾಂಗದ ಬಗ್ಗೆ ಬಹಳ ಕಾಳಜಿ ಇಟ್ಟುಕೊಂಡಿದೆ. ನ್ಯಾಯಾಧೀಶರ ಬಗ್ಗೆಯೂ ಕಾಳಜಿ ಇದೆ. ಈ ರೀತಿ ಅಲ್ಲಿಯ ಸಮಸ್ಯೆಗಳನ್ನು ಬಹಿರಂಗಗೊಳಿಸುವುದು ತಪ್ಪು. ಇದರಿಂದ ಜನರಿಗೆ ನ್ಯಾಯಾಂಗದ ಮೇಲೆ ನಂಬಿಕೆ ಹೊರಟು ಹೋಗುತ್ತದೆ,' ಎಂದಿದ್ದಾರೆ.

'ತಮ್ಮ ಕುಟುಂಬದ ಸಮಸ್ಯೆಯನ್ನು ಈ ರೀತಿ ಬಹಿರಂಗವಾಗಿ ಹೇಳಿಕೊಳ್ಳಬಾರದಿತ್ತು. ಮೊದಲಿನಿಂದಲೂ ಕೇಂದ್ರದೊಂದಿಗೆ ಈ ರೀತಿಯ ತಿಕ್ಕಾಟ ಸಹಜ. ಅದಕ್ಕೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕಿತ್ತು,' ಎಂದು ಅವರು ಹೇಳಿದ್ದಾರೆ.

'ಈ ಸಂಸ್ಥೆ ಮೇಲೆ ಮತ್ತೆ ಜನರಿಗೆ ನಂಬಿಕೆ ಬರಬೇಕಾದರೆ ಹೆಚ್ಚು ಕಾಲ ತೆಗೆದುಕೊಳ್ಳುತ್ತದೆ. ಇಂಥ ಘಟನೆಗಳಿಂದ ಮತ್ತಷ್ಟು ನಂಬಿಕೆಯನ್ನು ಕಳೆಯುತ್ತದೆ. ಇದರ ಹೊರತಾಗಿಯೂ ಸಂಸ್ಥೆ ಗೌರವ ಉಳಿಸಲು, ಜನರ ನಂಬಿಕೆ ಉಳಿಸಲು ಈ ನ್ಯಾಯಾಧೀಶರು ಬೇರೆ ಮಾರ್ಗವನ್ನು ಕಂಡುಕೊಳ್ಳಬೇಕಿತ್ತು. ಮುಖ್ಯನ್ಯಾಯಾಧೀಶರ ವಿರುದ್ಧ ಕ್ರಮ ಕೈಗೊಳ್ಳಲು ಬೇರೆ ರೀತಿಯ ಕಾನೂನು ವ್ಯವಸ್ಥೆ ಇದೆ,' ಎಂದರು.

'ಕಾನೂನು ಮಂತ್ರಿಗಳ ಸಮ್ಮುಖದಲ್ಲಿ ಈ ನ್ಯಾಯಾಧೀಶರು ತಮ್ಮ ಆರೋಪಗಳನ್ನು ಹೇಳಿಕೊಳ್ಳಬಹುದಿತ್ತು. ಆದರೆ, ಸಾರ್ವಜನಿಕ ಮುಂದೆ ಬಂದಿದ್ದರಿಂದ ಸಮಸ್ಯೆ ಬಿಗಡಾಯಿಸುತ್ತೇ ವಿನಾಃ, ಇದರಿಂದ ಯಾವ ಪರಿಹಾರವೂ ಸಿಗುವುದಿಲ್ಲ. ಕೇಂದ್ರ ಸರಕಾರವೇ ಕ್ರಮ ಕೈಗೊಳ್ಳಬೇಕಾದಿದ್ದೂ, ಇದೇ ಅಂತಿಮ ಮಾರ್ಗವಾಗಿರಲಿಲ್ಲ,' ಎಂದು ಅವರು ಹೇಳಿದ್ದಾರೆ.
 

loader