ಪುರಿ ದೇಗುಲದಲ್ಲಿ ರಾಷ್ಟ್ರಪತಿಗೆ ಅಪಮಾನ

President Ramnath Kovind And First Lady Harassed
Highlights

ಮೂರು ತಿಂಗಳ ಹಿಂದೆ ಒಡಿಶಾದ ಪುರಿಯಲ್ಲಿರುವ ಪ್ರಸಿದ್ಧ ಜಗನ್ನಾಥ ದೇಗುಲಕ್ಕೆ ಭೇಟಿ ನೀಡಿದ್ದಾಗ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಹಾಗೂ ಅವರ ಪತ್ನಿ ಸವಿತಾ ಅವರಿಗೆ ಅಪಮಾನ ಮಾಡಲಾಗಿತ್ತು ಎಂಬ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಪುರಿ ಜಿಲ್ಲಾಡಳಿತ ತನಿಖೆ ಆರಂಭಿಸಿದೆ.

ನವದೆಹಲಿ: ಮೂರು ತಿಂಗಳ ಹಿಂದೆ ಒಡಿಶಾದ ಪುರಿಯಲ್ಲಿರುವ ಪ್ರಸಿದ್ಧ ಜಗನ್ನಾಥ ದೇಗುಲಕ್ಕೆ ಭೇಟಿ ನೀಡಿದ್ದಾಗ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಹಾಗೂ ಅವರ ಪತ್ನಿ ಸವಿತಾ ಅವರಿಗೆ ಅಪಮಾನ ಮಾಡಲಾಗಿತ್ತು ಎಂಬ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತು ಪುರಿ ಜಿಲ್ಲಾಡಳಿತ ತನಿಖೆ ಆರಂಭಿಸಿದೆ.

ಮಾ.18ರಂದು ರಾಷ್ಟ್ರಪತಿಗಳು ಪತ್ನಿ ಸಮೇತ ಪುರಿ ಜಗನ್ನಾಥ ದೇಗುಲಕ್ಕೆ ಭೇಟಿ ನೀಡಿದ್ದರು. ಈ ವೇಳೆ ಗರ್ಭಗುಡಿಯ ಸಮೀಪ ಕೋವಿಂದ್‌ ಅವರ ದಾರಿಗೆ ದೇಗುಲದ ಕೆಲವು ಸೇವಕರು ಅಡ್ಡಬಂದಿದ್ದರು. ಅಲ್ಲದೆ ರಾಷ್ಟ್ರಪತಿಗಳು ಹಾಗೂ ಅವರ ಪತ್ನಿ ಸವಿತಾ ಅವರನ್ನು ಕೆಲವರು ಸೇವಕರು ತಳ್ಳಿದ್ದರು. ಇದಾದ ಮರುದಿನವೇ ಅಂದರೆ ಮಾ.19ರಂದು ರಾಷ್ಟ್ರಪತಿ ಭವನವು ಪುರಿ ದೇಗುಲದಲ್ಲಿನ ಸೇವಕರ ನಡವಳಿಕೆ ಬಗ್ಗೆ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿ ಟಿಪ್ಪಣಿಯೊಂದನ್ನು ರವಾನಿಸಿತ್ತು. ದೇಗುಲದ ಆಡಳಿತ ಮಂಡಳಿ ಮರುದಿನವೇ ಸಭೆ ಸೇರಿ ಈ ವಿಚಾರ ಚರ್ಚೆ ನಡೆಸಿತ್ತು. ಅಂದು ನಡೆದಿದ್ದ ಸಭೆಯ ಟಿಪ್ಪಣಿಗಳು ಇದೀಗ ಬಹಿರಂಗವಾಗಿವೆ.

ಆಗಿದ್ದಾದರೂ ಏನು?:  ಮಾ.18ರಂದು ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ಬೆಳಗ್ಗೆ 6.35ರಿಂದ 8.40ರವರೆಗೆ ಸಾರ್ವಜನಿಕರಿಗೆ ಪುರಿ ದೇಗುಲದ ಪ್ರವೇಶ ನಿರ್ಬಂಧಿಸಲಾಗಿತ್ತು. ದೇಗುದಲ್ಲಿರುವ ಕೆಲವೇ ಕೆಲವು ಸೇವಕರು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ರಾಷ್ಟ್ರಪತಿಗಳ ಜತೆ ಇರಲು ಅವಕಾಶ ಕಲ್ಪಿಸಲಾಗಿತ್ತು. ದೇಗುಲದೊಳಗಿನ ರತ್ನ ಸಿಂಹಾಸನದ ಬಳಿ ಕೋವಿಂದ್‌ ಅವರು ತೆರಳಿದಾಗ ಅವರಿಗೆ ಒಬ್ಬ ಸೇವಕ ಜಾಗವನ್ನೇ ಬಿಡಲಿಲ್ಲ. ಇದೇ ವೇಳೆ ಕೋವಿಂದ್‌ ಹಾಗೂ ಅವರ ಪತ್ನಿಯನ್ನು ಕೆಲವು ಸೇವಕರು ತಳ್ಳಾಡಿದ್ದರು ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ. ಈ ಘಟನೆ ಸಂಬಂಧ ಮೂವರು ಸೇವಕರಿಗೆ ಶೋಕಾಸ್‌ ನೋಟಿಸ್‌ ಜಾರಿಗೊಳಿಸಲು ದೇಗುಲದ ಆಡಳಿತ ಮಂಡಳಿ ನಿರ್ಧರಿಸಿದೆ.

ಗಾಂಧಿ, ಇಂದಿರಾಗೂ ತಡೆ ಒಡ್ಡಿದ್ದ ಪುರಿ ದೇಗುಲ

ಪುರಿಯ ಜಗನ್ನಾಥ ದೇಗುಲದಲ್ಲಿ ಗಣ್ಯಾತಿಗಣ್ಯ ವ್ಯಕ್ತಿಗಳಿಗೆ ಈ ರೀತಿ ಅಪಮಾನ ಆಗುತ್ತಿರುವುದು ಇದೇ ಮೊದಲಲ್ಲ. ರಾಷ್ಟ್ರಪತಿ ಮಹಾತ್ಮ ಗಾಂಧಿ ಅವರು ಮುಸ್ಲಿಮರು, ಹರಿಜನರು ಹಾಗೂ ದಲಿತರ ಜತೆ ದೇಗುಲಕ್ಕೆ ಬಂದಾಗ ಅವರಿಗೆ ತಡೆಯೊಡ್ಡಲಾಗಿತ್ತು. 1984ರಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರು ಭೇಟಿ ನೀಡಿದ್ದಾಗ, ಅವರು ಪಾರ್ಸಿ ಸಮುದಾಯದ ವ್ಯಕ್ತಿಯನ್ನು ವಿವಾಹವಾಗಿದ್ದಾರೆ ಎಂಬ ಕಾರಣಕ್ಕೆ ಪ್ರವೇಶ ನಿರಾಕರಿಸಲಾಗಿತ್ತು.

loader