ರಾಜ್ಯ ಸರ್ಕಾರದ ಹೋರಾಟಕ್ಕೆ ಬಿಗ್ ವಿಕ್ಟರಿ

President gives assent to SC ST promotions bill
Highlights

ರಾಜ್ಯದಲ್ಲಿ ಪರಿಶಿಷ್ಟಜಾತಿ ಹಾಗೂ ಪಂಗಡದ ನೌಕರರು ಮತ್ತು ಅಧಿಕಾರಿಗಳ ಬಡ್ತಿ ಮೀಸಲಾತಿಯನ್ನು ಮುಂದುವರೆಸಲು ರಾಜ್ಯ ಸರ್ಕಾರವು ಉಭಯ ಸದನಗಳಲ್ಲಿ ಅಂಗೀಕರಿಸಿದ್ದ ಎಸ್‌ಸಿ-ಎಸ್‌ಟಿ ನೌಕರರು ಹಾಗೂ ಅಧಿಕಾರಿಗಳ ಬಡ್ತಿ ಮೀಸಲಾತಿ ವಿಧೇಯಕ-2017ಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅಂಕಿತ ಹಾಕಿದ್ದಾರೆ.

ಬೆಂಗಳೂರು :  ರಾಜ್ಯದಲ್ಲಿ ಪರಿಶಿಷ್ಟಜಾತಿ ಹಾಗೂ ಪಂಗಡದ ನೌಕರರು ಮತ್ತು ಅಧಿಕಾರಿಗಳ ಬಡ್ತಿ ಮೀಸಲಾತಿಯನ್ನು ಮುಂದುವರೆಸಲು ರಾಜ್ಯ ಸರ್ಕಾರವು ಉಭಯ ಸದನಗಳಲ್ಲಿ ಅಂಗೀಕರಿಸಿದ್ದ ಎಸ್‌ಸಿ-ಎಸ್‌ಟಿ ನೌಕರರು ಹಾಗೂ ಅಧಿಕಾರಿಗಳ ಬಡ್ತಿ ಮೀಸಲಾತಿ ವಿಧೇಯಕ-2017ಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅಂಕಿತ ಹಾಕಿದ್ದಾರೆ.

ಈ ಮೂಲಕ ಎಸ್‌ಸಿ-ಎಸ್‌ಟಿ ನೌಕರರಿಗೆ ಬಡ್ತಿ ಮೀಸಲಾತಿ ಮುಂದುವರೆಸಲು ಹಿಂದಿನ ಕಾಂಗ್ರೆಸ್‌ ಸರ್ಕಾರ ನಡೆಸಿದ ಹೋರಾಟಕ್ಕೆ ಜಯ ಸಂದಂತಾಗಿದೆ. ಜತೆಗೆ, ಬಡ್ತಿ ಮೀಸಲಾತಿ ರದ್ದುಪಡಿಸಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪಿನಿಂದ ಹಿಂಬಡ್ತಿ ಭೀತಿಗೆ ಒಳಗಾಗಿದ್ದ 20 ಸಾವಿರಕ್ಕೂ ಹೆಚ್ಚು ನೌಕರರಿಗೆ ನೆಮ್ಮದಿ ದೊರೆತಂತಾಗಿದೆ.

ಆದರೆ, ರಾಷ್ಟ್ರಪತಿಗಳಿಂದ ಅಂಗೀಕಾರ ಪಡೆದ ರಾಜ್ಯ ಸರ್ಕಾರದ ವಿಧೇಯಕವನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಲು ಅವಕಾಶವಿದೆ. ಹೀಗಾಗಿ ಎಸ್‌ಸಿ, ಎಸ್‌ಟಿ ಮೀಸಲಾತಿ ಅನ್ವಯ ಮುಂಬಡ್ತಿ ಲಾಭ ಪಡೆದಿರುವ ಅಧಿಕಾರಿಗಳ ನೆಮ್ಮದಿಯ ಆಯಸ್ಸು ಎಷ್ಟುಎಂಬುದು ಕುತೂಹಲ ಕೆರಳಿಸಿದೆ.

2002ರಲ್ಲಿ ರಾಜ್ಯ ಸರ್ಕಾರ ಹೊಸದಾಗಿ ಬಡ್ತಿ ಮೀಸಲಾತಿ ಕಾಯ್ದೆ ಜಾರಿಗೊಳಿಸಿತ್ತು. ಇದರ ಪ್ರಕಾರ ಸೇವಾ ಹಿರಿತನದ ಮೇಲೆ ಬಡ್ತಿ ನೀಡದೆ ಮೀಸಲಾತಿ ಆಧಾರದ ಮೇಲೆ ನೀಡಲಾಗುತ್ತಿತ್ತು. ಇದರಿಂದ ಎಲ್ಲಾ ಹಿರಿಯ ಹುದ್ದೆಗಳು ಮೀಸಲಾತಿ ಲಾಭ ಪಡೆಯುವವರ ಪಾಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಬಿ.ಕೆ. ಪವಿತ್ರ ಹಾಗೂ ಮತ್ತಿತರರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು. ಅವರ ಮನವಿ ಆಧಾರದ ಮೇಲೆ ಬಡ್ತಿ ಮೀಸಲಾತಿಯಿಂದ ಸಾಮಾನ್ಯ ವರ್ಗದವರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ 2017ರ ಫೆಬ್ರವರಿಯಲ್ಲಿ ಸುಪ್ರೀಂಕೋರ್ಟ್‌ ಆದೇಶಿಸಿತ್ತು. ಜತೆಗೆ 2002ರ ಬಡ್ತಿ ಮೀಸಲಾತಿ ನಿಯಮ ರದ್ದುಗೊಳಿಸಿತ್ತು.

ಅಲ್ಲದೆ, ಏಪ್ರಿಲ್‌ 19,2017ರೊಳಗಾಗಿ ಪರಿಷ್ಕೃತ ಜ್ಯೇಷ್ಠತಾ ಪಟ್ಟಿಸಿದ್ಧಪಡಿಸಿ ಆದೇಶಿಸಲು ಸೂಚನೆ ನೀಡಿತ್ತು. ಹಿಂಬಡ್ತಿ ನೀಡಿದ ಬಳಿಕ ತೆರವಾಗುವ ಹುದ್ದೆಗಳಿಗೆ ಪರಿಷ್ಕೃತ ಜ್ಯೇಷ್ಠತಾ ಪಟ್ಟಿಪ್ರಕಾರ ಸೇವಾ ಹಿರಿತನದ ಮೇರೆಗೆ ಮುಂಬಡ್ತಿ ನೀಡುವಂತೆ ಆದೇಶಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮೀಸಲಾತಿ ಆಧಾರದ ಮೇಲೆ ಬಡ್ತಿ ಪಡೆದಿದ್ದ ಎಸ್‌ಸಿ-ಎಸ್‌ಟಿ ಅಧಿಕಾರಿಗಳು ಹಿಂಬಡ್ತಿ ಭೀತಿಗೆ ಗುರಿಯಾಗಿದ್ದರು.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಬಡ್ತಿ ಮೀಸಲಾತಿ ಮುಂದುವರೆಸಲು ಹೊಸ ವಿಧೇಯಕ ಮಂಡಿಸಿ ಉಭಯ ಸದನಗಳಲ್ಲಿ ಸರ್ಕಾರ ಅಂಗೀಕಾರ ಪಡೆದಿತ್ತು. ಇದೀಗ ರಾಷ್ಟ್ರಪತಿಗಳ ಅಂಗೀಕಾರದಿಂದ ಹಿಂಬಡ್ತಿ ಭೀತಿಯಲ್ಲಿದ್ದವರು ನಿರಾಳರಾಗುವಂತಾಗಿದೆ. ಹೊಸ ವಿಧೇಯಕದಲ್ಲಿ 2002ರ ನಿಯಮ ರದ್ದತಿಯಿಂದ ಹಿಂಬಡ್ತಿ ಪಡೆಯುವ ಅಧಿಕಾರಿಗಳಿಗೆ ಸಂಖ್ಯಾಧಿಕ (ಸೂಪರ್‌ನ್ಯೂಮರರಿ) ಹುದ್ದೆ ಸೃಷ್ಟಿಮೂಲಕ ಬಡ್ತಿ ಕಾಯ್ದಿರಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದ ಹೆಚ್ಚುವರಿ ಆರ್ಥಿಕ ಹೊರೆಯೂ ಉಂಟಾಗಲಿದೆ ಎಂದು ತಿಳಿದುಬಂದಿದೆ.

ಹಿಂಬಡ್ತಿ ಮುಂದೂಡಲು ತೀವ್ರ ಕಸರತ್ತು:

ಚುನಾವಣೆ ಸಮಯದಲ್ಲಿ ಎಸ್‌ಸಿ, ಎಸ್‌ಟಿ ಅಧಿಕಾರಿಗಳು ಹಿಂಬಡ್ತಿಗೊಂಡರೆ ಸರ್ಕಾರಕ್ಕೆ ಕೆಟ್ಟಹೆಸರು ಬರುತ್ತದೆ ಎಂಬ ಕಾರಣಕ್ಕೆ ಹಿಂಬಡ್ತಿ ಮುಂದೂಡಲು ಸರ್ಕಾರ ತೀವ್ರ ಕಸರತ್ತು ನಡೆಸಿತ್ತು.

ಮೊದಲು ಪರಿಷ್ಕೃತ ಜ್ಯೇಷ್ಠತಾ ಪಟ್ಟಿಸಿದ್ಧಪಡಿಸಲು ಆರು ತಿಂಗಳು ಸಮಯಾವಕಾಶ ಬೇಕು ಎಂದು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿತ್ತು. ಆದರೆ, ಮನವಿಯನ್ನು ಸುಪ್ರೀಂಕೋರ್ಟ್‌ ಮಾ.20ರಂದು ತಿರಸ್ಕರಿಸಿತ್ತು. ಕೂಡಲೇ ಜ್ಯೇಷ್ಠತಾ ಪಟ್ಟಿಸಿದ್ಧಪಡಿಸುವಂತೆಯೂ ಕಟ್ಟುನಿಟ್ಟಾಗಿ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಹಿಂಬಡ್ತಿ ಪ್ರಕ್ರಿಯೆ ಆರಂಭಿಸದಿದ್ದರೆ ನ್ಯಾಯಾಂಗ ನಿಂದನೆಗೆ ಗುರಿಯಾಗುವ ಭೀತಿಯಲ್ಲಿದ್ದ ಸರ್ಕಾರವು, ಇದರ ನಡುವೆಯೂ ಚುನಾವಣೆ ನೀತಿ ಸಂಹಿತೆ ಮುಂದಿಟ್ಟುಕೊಂಡು ಚುನಾವಣೆ ಮುಗಿಯುವರೆಗೆ ಹಿಂಬಡ್ತಿ- ಮುಂಬಡ್ತಿ ಪ್ರಕ್ರಿಯೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಯತ್ನಿಸಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಸುಪ್ರೀಂಕೋರ್ಟ್‌ ನ್ಯಾಯಪೀಠ, ನ್ಯಾಯಾಲಯದ ಆದೇಶ ಪಾಲನೆ ವಿಷಯ ಆಗಿರುವುದರಿಂದ ನೀತಿ ಸಂಹಿತೆ ಅಡ್ಡಿ ಬರುವುದಿಲ್ಲ ಎಂದು ಹೇಳಿತ್ತು.

ನಂತರ ಹಿಂಬಡ್ತಿ ಭೀತಿಯಲ್ಲಿದ್ದ ನೌಕರರ ಹಿತ ಕಾಯಲು ಮುಂದಾಗಿದ್ದ ರಾಜ್ಯ ಸರ್ಕಾರ, ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಿತ್ತು. ಬಡ್ತಿಯಲ್ಲಿ ಮೀಸಲಾತಿ ನೀಡಿದ ಕ್ರಮ ಸಮರ್ಥಿಸಿಕೊಳ್ಳಲು ಪರಿಶಿಷ್ಟಜಾತಿಯವರ ಹಿಂದುಳಿದಿರುವಿಕೆ, ಬಡ್ತಿ ಮೀಸಲಾತಿ ಪಡೆದ ನೌಕರರ ಶೇಕಡಾವಾರು ಪ್ರಮಾಣ, ಆಡಳಿತದ ಕಾರ್ಯದಕ್ಷತೆ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಲು ಈಗಿನ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿ ವರದಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿ ಬಡ್ತಿ ಮೀಸಲಾತಿಯನ್ನು ಸಮರ್ಥಿಸಿಕೊಂಡಿತ್ತು. ಆದರೆ, ಅದನ್ನು ನ್ಯಾಯಾಲಯ ಒಪ್ಪಿರಲಿಲ್ಲ.

ವಿಧೇಯಕದ ಮೂಲಕ ಹೋರಾಟ:

ಇದಕ್ಕೂ ಮೊದಲು ಸುಪ್ರೀಂಕೋರ್ಟ್‌ ತೀರ್ಪಿಗೆ ವಿರುದ್ಧವಾಗಿ ಹಾಗೂ ಬಡ್ತಿ ಮೀಸಲಾತಿ ಪರವಾಗಿ ನಿಂತ ಸಿದ್ದರಾಮಯ್ಯ ನೇತೃತ್ವದ ಅಂದಿನ ಸರ್ಕಾರವು ಆಗಸ್ಟ್‌ 17ರಂದು ಸಚಿವ ಸಂಪುಟ ಸಭೆ ನಡೆಸಿ ಸುಗ್ರೀವಾಜ್ಞೆ ಮೂಲಕ ಬಡ್ತಿ ಮೀಸಲಾತಿ ಮುಂದುವರೆಸಲು ಮುಂದಾಗಿತ್ತು.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ರಾಜ್ಯಪಾಲ ವಿ.ಆರ್‌.ವಾಲಾ, ಇಂತಹ ವಿಷಯಗಳ ಬಗ್ಗೆ ಸುಗ್ರೀವಾಜ್ಞೆ ಮೂಲಕ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ. ಹೀಗಾಗಿ ಉಭಯ ಸದನಗಳಲ್ಲಿ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು 2017ರ ನವೆಂಬರ್‌ನಲ್ಲಿ ಬೆಳಗಾವಿ ಅಧಿವೇಶನದಲ್ಲಿ ಬಡ್ತಿ ಮೀಸಲಾತಿ ಮುಂದುವರೆಸುವ ವಿಧೇಯಕ ಮಂಡಿಸಿ ಉಭಯ ಸದನಗಳಲ್ಲಿ ಅಂಗೀಕಾರ ಪಡೆದಿತ್ತು. ಅಲ್ಲದೆ, ವಿಧೇಯಕಕ್ಕೆ ಅಂಗೀಕಾರ ಸೂಚಿಸುವಂತೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಖುದ್ದು ರಾಜ್ಯಪಾಲರನ್ನು ಭೇಟಿ ಮಾಡಿ ಅಂಗೀಕಾರಕ್ಕಾಗಿ ಮನವಿ ಮಾಡಿದ್ದರು. ಆದರೆ, ರಾಜ್ಯಪಾಲ ವಿ.ಆರ್‌.ವಾಲಾ ಅವರು ಬಡ್ತಿ ಮೀಸಲಾತಿಯನ್ನು ಸುಪ್ರೀಂಕೋರ್ಟ್‌ ರದ್ದುಪಡಿಸಿದ್ದರೂ ರಾಜ್ಯ ಸರ್ಕಾರ ವಿಧೇಯಕ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಇದು ಕಾನೂನಿಗೆ ಸಂಬಂಧಿಸಿದ ವಿಚಾರ ಎಂಬ ಕಾರಣ ನೀಡಿ ವಿಧೇಯಕವನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿದ್ದರು. ಈಗ ವಿಧೇಯಕಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿರುವುದರಿಂದ ಕಳೆದ ಸರ್ಕಾರ ನಿಲುವಿಗೆ ಗೆಲುವು ದೊರೆತಂತಾಗಿದೆ.

20 ಸಾವಿರ ನೌಕರರು ನಿರಾಳ

ರಾಜ್ಯ ಸರ್ಕಾರ ಅಂಗೀಕರಿಸಿದ್ದ ವಿಧೇಯಕಕ್ಕೆ ರಾಷ್ಟ್ರಪತಿಗಳು ಅಂಗೀಕಾರ ಹಾಕಿರುವ ಹಿನ್ನೆಲೆಯಲ್ಲಿ ಪರಿಷ್ಕೃತ ಜ್ಯೇಷ್ಠತಾ ಪಟ್ಟಿಆಧಾರದ ಮೇಲೆ ಹಿಂಬಡ್ತಿ ಹಾಗೂ ಮುಂಬಡ್ತಿ ಪಡೆದಿದ್ದ ನೌಕರರ ಹುದ್ದೆಗಳಲ್ಲಿ ಮತ್ತೆ ವ್ಯತ್ಯಾಸ ಉಂಟಾಗಲಿದೆ.

ಬಡ್ತಿ ಮೀಸಲಾತಿ ರದ್ದಾಗಿದ್ದರಿಂದ 20 ಸಾವಿರ ನೌಕರರು ಹಿಂಬಡ್ತಿ ಪಡೆಯಬೇಕಾಗಿ ಬಂತು. ಈ ಪ್ರಕ್ರಿಯೆ ಕೂಡಾ ಬಹುತೇಕ ಪೂರ್ಣಗೊಂಡಿತ್ತು. ಇದೀಗ ರಾಷ್ಟ್ರಪತಿಗಳು ವಿಧೇಯಕಕ್ಕೆ ಅಂಕಿತ ಹಾಕಿರುವುದರಿಂದ ಹಿಂಬಡ್ತಿ ಭೀತಿಯಿಂದ ನೌಕರರು ತಾತ್ಕಾಲಿಕವಾಗಿ ಪಾರಾದಂತಾಗಿದೆ.

ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸಾರ್ವಜನಿಕ ಉದ್ದಿಮೆ, ಆಯೋಗ, ನಿಗಮ, ಮಂಡಳಿ ಮತ್ತು ಸರ್ಕಾರದ ಅನುದಾನ ಪಡೆಯುವ ಸಂಸ್ಥೆಗಳ ಎಸ್‌ಸಿ, ಎಸ್‌ಟಿ ನೌಕರರ ಹುದ್ದೆಗಳ ಮೇಲೆ ಪರಿಣಾಮ ಬೀರಲಿದೆ. ಅಲ್ಲದೆ, ಎರಡು ಹಂತ ಕೆಳಗೆ ಹೋಗಬೇಕಾಗಿದ್ದ ಹಿರಿಯ ಅಧಿಕಾರಿಗಳು ಸಹ ಪಾರಾಗಿದ್ದಾರೆ. ಉದಾ: ಮುಖ್ಯ ಎಂಜಿನಿಯರ್‌ ಆಗಿರುವವರು ಎರಡು ಹಂತ ಕೆಳಗೆ ಹಿಂಬಡ್ತಿ ಪಡೆದು, ಕಾರ್ಯಪಾಲಕ ಎಂಜಿನಿಯರ್‌ ಹುದ್ದೆಗೆ ಹೋಗಬೇಕಾಗುತ್ತದೆ. ಇಂತಹ ಅಪಾಯದಿಂದ ಬಡ್ತಿ ಮೀಸಲಾತಿ ಫಲಾನುಭವಿಗಳು ಪಾರಾಗಿದ್ದಾರೆ.
 
ಹಿಂಬಡ್ತಿ ಆಗಿರುವವರು ಮತ್ತೆ ಮುಂದಕ್ಕೆ

ಇತ್ತೀಚೆಗಷ್ಟೇ ಪರಿಷ್ಕೃತ ಜ್ಯೇಷ್ಠತಾ ವರದಿ ಆಧಾರದ ಮೇಲೆ ಹಿಂಬಡ್ತಿಗೆ ಗುರಿಯಾಗಿದ್ದ ಅಧಿಕಾರಿಗಳು ಮತ್ತೆ ಹಿಂದಿನ ಹುದ್ದೆಗೆ ವಾಪಸಾಗಲಿದ್ದಾರೆ. ಇದಕ್ಕಾಗಿ ಪರಿಷ್ಕೃತ ಜ್ಯೇಷ್ಠತಾ ಪಟ್ಟಿಯನ್ನು ಪುನರ್‌ಪರಿಶೀಲನೆಗೆ ಒಳಪಡಿಸಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ವಿಧೇಯಕಕ್ಕೆ ರಾಷ್ಟ್ರಪತಿಗಳ ಅಂಗೀಕಾರ ದೊರೆತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸರ್ಕಾರದ ಹಂತದಲ್ಲಿ ಸಭೆ ನಡೆಸಲಾಗುವುದು. ಬಳಿಕ ಯಾವ ರೀತಿಯಲ್ಲಿ ಹಿಂಬಡ್ತಿ ಪಡೆದವರಿಗೆ ನ್ಯಾಯ ಒದಗಿಸಬಹುದು ಎಂಬುದನ್ನು ಚರ್ಚಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟಪಂಗಡದ ನೌಕರರಿಗೆ ಮುಂಬಡ್ತಿ ನೀಡುವ ವಿಷಯದಲ್ಲಿ ಹಿಂದಿನ ನಮ್ಮ ಸರ್ಕಾರ ಅಂಗೀಕರಿಸಿದ್ದ ವಿಧೇಯಕಕ್ಕೆ ಅಂಕಿತ ಹಾಕಿರುವ ರಾಷ್ಟ್ರಪತಿಯವರ ಕ್ರಮವನ್ನು ಸ್ವಾಗತಿಸುತ್ತೇನೆ. ಪರಿಶಿಷ್ಟಜಾತಿ, ಪಂಗಡದ ನೌಕರರ ಹಿತ ಕಾಯುವ ನಿರ್ಧಾರದ ಪರವಾಗಿ ನಿಂತಿದ್ದಕ್ಕೆ ರಾಷ್ಟ್ರಪತಿಯವರಿಗೆ ಧನ್ಯವಾದ ಸಲ್ಲಿಸುತ್ತೇನೆ.

- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ


ಬಡ್ತಿ ಮೀಸಲಾತಿ ವಿಧೇಯಕಕ್ಕೆ ರಾಷ್ಟ್ರಪತಿಗಳು ಅಂಗೀಕಾರ ಹಾಕಿರುವ ಬಗ್ಗೆ ಪತ್ರ ಬಂದಿದೆ. ಈ ಹಿನ್ನೆಲೆಯಲ್ಲಿ ಹಿಂಬಡ್ತಿಗೆ ಗುರಿಯಾಗಿದ್ದವರು ತಮ್ಮ ಹಿಂದಿನ ಸ್ಥಾನಕ್ಕೆ ವಾಪಸಾಗಲಿದ್ದಾರೆ. ಮೀಸಲಾತಿ ಆಧಾರದ ಮೇಲೆ ಬಡ್ತಿ ಪಡೆದವರ ಸ್ಥಾನಗಳು ಅಬಾಧಿತವಾಗಲಿವೆ. ಹೀಗಾಗಿ ಹಿಂಬಡ್ತಿ ಹಾಗೂ ಮುಂಬಡ್ತಿ ಜ್ಯೇಷ್ಠತಾ ಪಟ್ಟಿಯನ್ನು ಪುನರ್‌ಪರಿಶೀಲನೆಗೆ ಒಳಪಡಿಸಬೇಕು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರತ್ಯೇಕ ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು.

- ಕೆ. ರತ್ನಪ್ರಭಾ, ಸರ್ಕಾರದ ಮುಖ್ಯ ಕಾರ್ಯದರ್ಶಿ

loader