ಕಾವೇರಿಗೆ ಮತ್ತೊಂದು ಅಣೆಕಟ್ಟು ನಿರ್ಮಾಣ ಮಾಡಲು ಇದೀಗ ಕರ್ನಾಟಕ ಸರ್ಕಾರ ಸಿದ್ಧತೆ ನಡೆಸಿಕೊಂಡಿದೆ.  ಈ ಬಗ್ಗೆ ಕೇಂದ್ರವೂ ಸಹ ಒಪ್ಪಿಗೆ ನೀಡಬಹುದು ಎನ್ನುವ ಭರವಸೆಯನ್ನ ಹೊಂದಿದೆ. 

ಮಂಡ್ಯ: ಬೆಂಗಳೂರಿಗೆ ಕುಡಿಯುವ ನೀರು ಮತ್ತು ತಮಿಳುನಾಡಿಗೆ ಅಗತ್ಯವಾದಾಗ ನೀರು ಬಿಡಲು ಅನುಕೂಲವಾಗುವಂತೆ ಮೇಕೆದಾಟಿನಲ್ಲಿ ಹೊಸ ಅಣೆಕಟ್ಟೆ ಕಟ್ಟಲು ಸರ್ಕಾರ ಈಗಾಗಲೇ ಸಿದ್ಧತೆ ನಡೆಸಿದೆ. ಈ ಅಣೆಕಟ್ಟೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಜೆಟ್‌ನಲ್ಲೂ ಘೋಷಣೆ ಮಾಡಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಮಂಗಳವಾರ ತಿಳಿಸಿದರು. 

ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಚಿವ ಶಿವಕುಮಾರ್, ಮೇಕೆದಾಟು ಆಣೆಕಟ್ಟು ನಿರ್ಮಾಣಕ್ಕೆ ಯಾವುದೇ ತಕರಾರು ಇಲ್ಲ ಎಂದು ಭಾವಿಸಿದ್ದೇವೆ. ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಲಿದೆ ಎಂಬ ವಿಶ್ವಾಸವಿದೆ. ಈ ಯೋಜನೆ ಪೂರ್ಣಗೊಂಡರೆ ನಮಗೆ ಸುಲಭವಾಗಿ ಕುಡಿಯುವ ನೀರಿನ ಅಗತ್ಯ ಪೂರೈಸಿದಂತಾಗುತ್ತದೆ. ನೀರಿನ ಅಭಾವ ತೋರಿದಾಗ ತಮಿಳುನಾಡಿಗೆ ನೀರು ಬಿಡಲು ಅನುವಾಗುತ್ತದೆ ಎಂದು
ತಿಳಿಸಿದರು.

ಪ್ರತಿಕ್ರಿಯೆಗೆ ನಕಾರ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ರಮ್ಯಾ ಅಥವಾ ಅಂಬರೀಶ್ ಅವರನ್ನು ಕಣಕ್ಕಿಳಿಸುತ್ತೀರಾ ಎಂಬ ಪ್ರಶ್ನೆಗೆ ಸಚಿವರು, ನಾನು ಪ್ರತಿಕ್ರಿಯಿಸುವುದಿಲ್ಲ ಎಂದಷ್ಟೇ ಹೇಳಿದರು.