ಕೇಂದ್ರ ಸರ್ಕಾರದ ಮಹತ್ವದ ಯೋಜನೆಯೊಂದಕ್ಕೆ ಅನುದಾನವು ಸ್ಟಾಪ್ ಆಗಿದ್ದು ಇದೀಗ ಈ ಯೋಜನೆ ನಿಲ್ಲುವ ಭೀತಿ ಎದುರಾಗಿದೆ. 

ಬೆಂಗಳೂರು : ಕೃಷಿ ಭೂಮಿಯ ಸುತ್ತಲಿನ ಜಲಮೂಲಗಳ ಅಭಿವೃದ್ಧಿ ಮತ್ತು ಅಂತರ್ಜಲ ಮರುಪೂರಣ ಮಾಡುವುದೂ ಸೇರಿದಂತೆ ರೈತರ ಸಮಗ್ರ ಅಭಿವೃದ್ಧಿಗಾಗಿ ಪ್ರಾರಂಭವಾಗಿದ್ದ ‘ಕೃಷಿ ಸಿಂಚಾಯಿ’ ಯೋಜನೆಗೆ ಕೇಂದ್ರ ಸರ್ಕಾರ ಅನು​ದಾನ ನಿಲ್ಲಿ​ಸಿದ್ದು, ಈ ಯೋಜ​ನೆಯೇ ತಟ​ಸ್ಥ​ಗೊ​ಳ್ಳುವ ಭೀತಿ ಎದು​ರಾ​ಗಿ​ದೆ.

ಕೃಷಿ, ಹೈನುಗಾರಿಕೆ, ತೋಟಗಾರಿಕೆಯ ಅಭಿವೃದ್ಧಿಗಾಗಿ ಹಲವು ಕಾರ್ಯ​ಕ್ರ​ಮ​ಗ​ಳನ್ನು ರೂಪಿ​ಸುವ ಈ ಯೋಜ​ನೆಗೆ ಕೇಂದ್ರ ಸರ್ಕಾರ ಶೇ.60 ಅನುದಾನ ನೀಡುತ್ತಿತ್ತು. ರಾಜ್ಯ ಸರ್ಕಾರ ಶೇ.40ರಷ್ಟುವೆಚ್ಚ ಭರಿಸಬೇಕಾಗಿತ್ತು. ಆದರೆ, ಕೇಂದ್ರ ಸರ್ಕಾರ ಕಳೆದ ಆಗಸ್ಟ್‌ ತಿಂಗಳಿನಿಂದ ಅನುದಾನ ಬಿಡು​ಗಡೆ ನಿಲ್ಲಿ​ಸಿದೆ. ಅಲ್ಲದೆ, ಅನು​ದಾನ ಬಿಡು​ಗಡೆ ಮಾಡು​ವಂತೆ ರಾಜ್ಯ ಸರ್ಕಾ​ರದ ಮನ​ವಿ​ಯನ್ನು ಕೇಂದ್ರ ಗ್ರಾಮೀ​ಣಾ​ಭಿ​ವೃದ್ಧಿ ಇಲಾಖೆ ತಿರ​ಸ್ಕ​ರಿ​ಸಿದ್ದು, ಇನ್ನುಮುಂದೆ ಈ ಯೋಜ​ನೆಯನ್ನು ರಾಜ್ಯದ ಸಂಪ​ನ್ಮೂ​ಲ​ದಿಂದಲೇ ಮುನ್ನ​ಡೆ​ಸು​ವಂತೆ ಸೂಚಿ​ಸಿದೆ ಎಂದು ಕೃಷಿ ಇಲಾ​ಖೆಯ ಉನ್ನತ ಅಧಿ​ಕಾ​ರಿ​ಗಳು ‘ಕನ್ನ​ಡ​ಪ್ರಭ’ಕ್ಕೆ ತಿಳಿ​ಸಿ​ದ್ದಾ​ರೆ.

2017-18ನೇ ಸಾಲಿನಲ್ಲಿ ಕೃಷಿ ಸಿಂಚಾಯಿ ಯೋಜನೆಗೆ ಒಟ್ಟು 327.5 ಕೋಟಿ ನಿಗದಿ ಮಾಡಲಾಗಿತ್ತು. ಈ ಮೊತ್ತದಲ್ಲಿ ಕೇಂದ್ರದ ಅನುದಾನದಲ್ಲಿ 101.07 ಕೋಟಿ ರು.ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಇನ್ನುಳಿದ ಮೊತ್ತ ಬಿಡುಗಡೆ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾ​ರವು ರಾಜ್ಯಕ್ಕೆ ಬರೆ​ದಿ​ರುವ ಪತ್ರದಲ್ಲಿ ತಿಳಿಸಿದೆ.

ಈ ಹಿನ್ನೆ​ಲೆ​ಯಲ್ಲಿ ಇಲಾ​ಖೆಯ ಅಧಿ​ಕಾ​ರಿ​ಗಳು ಯೋಜ​ನೆ​ಯನ್ನು ಮುಂದು​ವ​ರೆ​ಸಲು ರಾಜ್ಯ ಸರ್ಕಾ​ರದಿಂದಲೂ ಅನು​ದಾ​ನ​ಕ್ಕಾಗಿ ಮನವಿ ಮಾಡಿ​ದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಹಣಕಾಸು ಇಲಾಖೆ, ನರೇಗಾ ಯೋಜನೆಯ ಅನುದಾನ ಬಳಕೆ ಮಾಡಿಕೊಳ್ಳುವಂತೆ ಸೂಚಿಸಿದೆ. ಆದರೆ, ನರೇಗಾ ಯೋಜನೆಯ ಹಣ​ವನ್ನು ಕೃಷಿ ಸಿಂಚಾಯಿ ಯೋಜನೆಗೆ ಬಳಕೆ ಮಾಡಿಕೊಳ್ಳಲು ನಿಯ​ಮಾ​ವ​ಳಿ​ಯಲ್ಲಿ ಅವ​ಕಾ​ಶ​ವಿಲ್ಲ. ಪರಿ​ಣಾಮ ಯೋಜನೆ ತಟ​ಸ್ಥ​ಗೊಂಡಿದೆ ಎಂದು ಅಧಿ​ಕಾ​ರಿ​ಗಳು ಹೇಳು​ತ್ತಾ​ರೆ.

ಯೋಜನೆಯ ಉದ್ದೇಶ:

ಕೃಷಿ ಭೂಮಿಗೆ ಸರಳ ಹಾಗೂ ಸಮರ್ಥ ನೀರಾ​ವರಿ ಸೌಲಭ್ಯ ಒದ​ಗಿ​ಸುವ, ಲಭ್ಯ ನೀರನ್ನು ಸೂಕ್ತ​ವಾಗಿ ಬಳ​ಸುವ ವಿಧಾ​ನ​ಗಳಿಗೆ ಪ್ರೋತ್ಸಾಹ ನೀಡು​ವಂತಹ ಕಾರ್ಯ​ಕ್ರ​ಮ​ಗ​ಳನ್ನು ಜಾರಿಗೆ ತರು​ವುದು ಈ ಯೋಜ​ನೆಯ ಪ್ರಮುಖ ಗುರಿ.

ಅಲ್ಲದೆ, ಕೃಷಿ ಅಭಿ​ವೃ​ದ್ಧಿ​ಗಾಗಿ ಸಚಿವಾಲಯಗಳು, ಸಂಘ ಸಂಸ್ಥೆಗಳನ್ನು, ಸಂಶೋಧಕರು ಮತ್ತು ಹಣಕಾಸು ಸಂಸ್ಥೆಗಳನ್ನು ಒಗ್ಗೂಡಿಸುವುದು, ಈ ಎಲ್ಲ ಕ್ಷೇತ್ರಗಳಿಂದ ಕೃಷಿ ಮತ್ತು ನೀರಾವರಿಗೆ ಸಂಬಂಧಪಟ್ಟವಿಶೇಷ ವಿಧಾನಗಳು ಮತ್ತು ಮಾದರಿಗಳನ್ನು ವಿನ್ಯಾಸಪಡಿಸುವುದು, ಅವುಗಳನ್ನು ಕೃಷಿಯಲ್ಲಿ ಅಳವಡಿಸುವಂತೆ ರೈತರಿಗೆ ಉತ್ತೇಜನ ನೀಡುವುದು ಹಾಗೂ ಅದಕ್ಕೆ ಅಗತ್ಯವಾದ ಹಣಕಾಸು ನೆರವನ್ನು ಒದಗಿಸುವುದು ಯೋಜನೆಯ ಉದ್ದೇಶವಾಗಿತ್ತು.

ಕೃಷಿ ಸಿಂಚಾಯಿ ಯೋಜನೆಗೆ ಆಗಸ್ಟ್‌ ತಿಂಗಳಿನಿಂದ ಅನುದಾನ ಬಿಡುಗಡೆ ಮಾಡಿಲ್ಲ. ಇನ್ನುಮುಂದೆ ಅನುದಾನ ಬಿಡುಗಡೆ ಮಾಡಲು ಸಾಧ್ಯವಿಲ್ಲ, ರಾಜ್ಯದ ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಪತ್ರದ ಮೂಲಕ ತಿಳಿಸಿದೆ. ಇದರಿಂದ ಪ್ರಗತಿಯ ಹಂತದಲ್ಲಿದ್ದ ಯೋಜನೆ ಸ್ಥಗಿತಗೊಂಡಿದೆ.

- ಪ್ರಭಾಷ್‌ ಚಂದ್ರ ರೇ - ಜಲಾನಯನ ಇಲಾಖೆ ಆಯುಕ್ತ


ವರದಿ : ರಮೇಶ್‌ ಬನ್ನಿಕುಪ್ಪೆ