ಮೈಸೂರು[ಆ.05]: ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಜನ ಧನ್ ಬ್ಯಾಂಕ್ ಖಾತೆಗೆ ಈಗ ಭಾರೀ ಬೇಡಿಕೆ ಬಂದಿದೆ. 

ಜನ್ ಧನ್ ಖಾತೆಗೆ ಪ್ರಧಾನಿ ಮೋದಿಯವರು ಹಣ ತುಂಬುತ್ತಾರೆಂಬ ವದಂತಿಯೋ ಏನೋ‌ ಇಲ್ಲೊಂದು ಬ್ಯಾಂಕ್ ಮುಂದೆ ಜನ್ ಧನ್ ಖಾತೆ ತೆರೆಯಲು ಜನರ ನೂಕು ನುಗ್ಗಲು ನಿಯಂತ್ರಿಸಲಾಗುತ್ತಿಲ್ಲ. ಹೌದು ಸಾಂಸ್ಕೃತಿಕ ನಗರಿ ಮೈಸೂರಿನ ರಮಾವಿಲಾಸ ರಸ್ತೆಯ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮುಂದೆ ಅಕ್ಕಪಕ್ಕದ ಜಿಲ್ಲೆಗಳಿಂದ ಜನ ಪ್ರತ್ಯೇಕ ಗೂಡ್ಸ್ ವಾಹನಗಳಲ್ಲಿ ತಂಡೋಪ ತಂಡವಾಗಿ ಬಂದು ಖಾತೆ ತೆರೆಯಲು ಜಾತ್ರೆ ಸೇರುತ್ತಿದ್ದಾರೆ. 

ಜನರ ಜಾತ್ರೆಯಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದರೆ ಜನರನ್ನು ನಿಯಂತ್ರಿಸಲು ಬ್ಯಾಂಕ್ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ. ಇಡೀ ಮೈಸೂರಿನಲ್ಲಿ ಇದೊಂದೇ ಬ್ಯಾಂಕ್ ಮುಂದೆ ಜನರು ಈ ಪ್ರಮಾಣದಲ್ಲಿ ಜಾತ್ರೆ ಸೇರುತ್ತಿರುವುದು ಅನುಮಾನಕ್ಕೂ ಕಾರಣವಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆಲ್ಲೋದು‌ ಬಿಜೆಪಿಗೆ ಸವಾಲಿನ ಸಂಗತಿಯಾದರೆ, ಬ್ಯಾಂಕ್ ಮುಂದೆ ಜನ ಈ ಬಗೆಯಲ್ಲಿ ಕ್ಯೂ ನಿಲ್ಲುತ್ತಿರೋದು ಯಾಕೆ ಅನ್ನೋದೆ ಅರ್ಥವಾಗದ ಪ್ರಶ್ನೆಯಾಗಿದೆ.

ಜನ ಧನ್ ಖಾತೆಗೆ ಹಣ ತುಂಬುತ್ತೇವೆಂದು ಕೇಂದ್ರ ಸರ್ಕಾರ ಈ ತನಕ ಯಾವುದೇ ಅಧಿಕೃತ ಪ್ರಕಟಣೆ ನೀಡದಿದ್ದರೂ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಗೆ ಮಾತ್ರ ಜನ ಮುತ್ತಿಗೆ ಹಾಕುತ್ತಿರುವುದು ನಾನಾ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ. ಅಷ್ಟ ಕ್ಕೂ ಜನ ಧನ್ ಖಾತೆಯನ್ನು ಜೀರೋ ಬ್ಯಾಲೆನ್ಸ್ ನಲ್ಲೇ ತೆರೆಯಬೇಕು. ಇದಕ್ಕಾಗಿ ಬ್ಯಾಂಕ್ ಯಾವ ಶುಲ್ಕವನ್ನೂ ವಿಧಿಸುವಂತಿಲ್ಲ. 

ಆದರೂ ಇದೊಂದೇ ಬ್ಯಾಂಕ್ ನತ್ತ ಜನ ಆಕರ್ಷಿತರಾಗುತ್ತಿರೋದು ಯಾಕೆಂದು ಜನರನ್ನ‌ ಕೇಳಿದರೆ ಅದೆಲ್ಲಾ ನಮಗೆ ಗೊತ್ತಿಲ್ಲ. ಈ ಬ್ಯಾಂಕ್ ನಲ್ಲಿ ಖಾತೆ ತೆರೆದರೆ ಮೋದಿ ಅವರು ಹಣ ಹಾಕ್ತಾರಂತೆ, ನಮಗೆ ಅನುಕೂಲ ಆಗುತ್ತಂತೆ ಅಂತಾ ಜನ ಹೇಳಲಾರಂಭಿಸಿದ್ದಾರೆ. ಜನರಂತು ಪ್ರತಿನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಹರಿದು ಬರುತ್ತಿರುವುದು ಕಡಿಮೆಯಾಗುತ್ತಿಲ್ಲ. ಭಾನುವಾರವೂ ಬ್ಯಾಂಕ್ ತೆರೆದು ಕೆಲಸ ಮಾಡಬೇಕಾದ ಸ್ಥಿತಿಗೆ ಸಿಬ್ಬಂದಿ ಸಿಲುಕಿರುವುದಂತೂ ಸತ್ಯ.