ಬೆಂಗಳೂರು (ಸೆ. 30): ಅಂಚೆ ಮೂಲಕ ರವಾನಿಸುವ ಪತ್ರಗಳು (ವಸ್ತುಗಳು ಸೇರಿ) ಉಲ್ಲೇಖಿತ ವಿಳಾಸಕ್ಕೆ ತಲುಪದಿದ್ದಲ್ಲಿ ಅದಕ್ಕೆ ಸೂಕ್ತ ಕಾರಣ ತಿಳಿಸುವುದು ಅಂಚೆ ಇಲಾಖೆ ಜವಾಬ್ದಾರಿಯಾಗಿದೆ. ಆದ್ದರಿಂದ ಪತ್ರ ವಾಪಸ್ ಬಂದಲ್ಲಿ ಅದಕ್ಕೆ ಸೂಕ್ತ ಕಾರಣ ನೀಡುವಂತೆ ಕರ್ನಾಟಕ ವೃತ್ತದ ಎಲ್ಲ ಅಂಚೆ ಕಚೇರಿಗಳ ಸಿಬ್ಬಂದಿಗೆ ತಿಳಿಸಲು ಸುತ್ತೋಲೆ ಹೊರಡಿಸಬೇಕು ಎಂದು ‘ರಾಜ್ಯ ಗ್ರಾಹಕರ ಹಕ್ಕುಗಳ ವೇದಿಕೆ’ ಮುಖ್ಯಪೋಸ್ಟ್ ಮಾಸ್ಟರ್ ಜನರಲ್ ಅವರಿಗೆ ನಿರ್ದೇಶಿಸಿದೆ.

ಭಾರತ್ ಪೆಟ್ರೋಲಿಯಂ ಖಾಸಗೀಕರಣಕ್ಕೆ ಚಿಂತನೆ!

ಜೊತೆಗೆ, ಅಂಚೆ ಮೂಲಕ ರವಾನಿಸುವ ಪತ್ರಗಳು ಸಾಗುವ ಹಾದಿ (ಟ್ರ್ಯಾಕಿಂಗ್)ಯನ್ನು ಅಂತರ್ಜಾಲದ ಮೂಲಕ ನಿಗಾವಹಿಸಲು ಅಗತ್ಯ ವ್ಯವಸ್ಥೆ ಮಾಡಬೇಕು. ಜೊತೆಗೆ, ಪತ್ರ ನಿಗದಿತ ವ್ಯಕ್ತಿಗೆ ತಲುಪಿರುವ ಸಂಬಂಧ ರಸೀದಿ ಪಡೆದುಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದೆ. ಅಲ್ಲದೆ, ಈ ಆದೇಶದ ಅನುಷ್ಠಾನ ಸಂಬಂಧ ಕ್ರಮ ಕೈಗೊಂಡಿರುವ ಕುರಿತು ಮುಂದಿನ 45 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದೆ.

ಇತ್ತೀಚಿನ ದಿನಗಳಲ್ಲಿ ಅಂಚೆ ಮೂಲಕ ರವಾನಿಸುವ ಪತ್ರಗಳು ನಿಗದಿತ ವಿಳಾಸಕ್ಕೆ ತಲುಪದ ಆರೋಪ ಸಂಬಂಧ ಹಲವು ದೂರುಗಳು ದಾಖಲಾಗುತ್ತಿವೆ. ಅಲ್ಲದೆ, ಗ್ರಾಹಕರ ಹಕ್ಕುಗಳ ವೇದಿಕೆಯಿಂದ ಅಂಚೆಯ ಮೂಲಕ ಹಲವು ಪತ್ರಗಳನ್ನು ರವಾನಿಸುತ್ತಿದ್ದು, ಆ ಪತ್ರಗಳು ಸೂಕ್ತ ವಿಳಾಸಕ್ಕೆ ತಲುಪಿಲ್ಲ. ಕಚೇರಿಗೂ ವಾಪಸ್ ಬಂದಿಲ್ಲ. ಪತ್ರ ಎಲ್ಲಿದೆ, ಏನಾಗಿದೆ ಎಂಬುದು ಗೊತ್ತಾಗುತ್ತಿಲ್ಲ. ಆದ್ದರಿಂದ ಅಂತರ್ಜಾಲ ಟ್ರ್ಯಾಕಿಂಗ್ ವ್ಯವಸ್ಥೆಯನ್ನು
ಮತ್ತಷ್ಟು ಬಲಿಷ್ಠಗೊಳಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಿದೆ.