ನವದೆಹಲಿ[ಸೆ.30]: ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಮತ್ತು ಇಂಧನ ರಿಟೇಲಿಂಗ್‌ ಕಂಪನಿಯಾದ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿ. (ಬಿಪಿಸಿಎಲ್‌) ಅನ್ನು ಖಾಸಗೀಕರಣಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. 2003ರಲ್ಲಿ ಅಂದಿನ ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರ ಕೂಡಾ ಇಂಥದ್ದೊಂದು ನಿರ್ಧಾರಕ್ಕೆ ಬಂದಿತ್ತಾದರೂ, ಇಂಥ ಮಾರಾಟ ಪ್ರಕ್ರಿಯೆಗೂ ಮುನ್ನ ಸಂಸತ್ತಿನ ಅನುಮೋದನೆ ಪಡೆಯುವುದು ಕಡ್ಡಾಯ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿದ್ದ ಹಿನ್ನೆಲೆಯಲ್ಲಿ, ಪ್ರಸ್ತಾಪ ನನಗುದಿಗೆ ಬಿದ್ದಿತ್ತು.

ಇದೀಗ ಬಿಜೆಪಿಗೆ ಲೋಕಸಭೆಯಲ್ಲಿ ಬಹುಮತವಿದ್ದು, ರಾಜ್ಯಸಭೆಯಲ್ಲೂ ಮಹತ್ವದ ವಿಷಯಗಳಲ್ಲಿ ಬೆಂಬಲ ಪಡೆಯುವುದು ಸುಲಭವಾಗಿರುವ ಹಿನ್ನೆಲೆಯಲ್ಲಿ ಮತ್ತೆ ಬಿಪಿಸಿಎಲ್‌ ಅನ್ನು ವಿದೇಶಿ ಮತ್ತು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಬಿಪಿಸಿಎಲ್‌ನಲ್ಲಿ ಕೇಂದ್ರ ಸರ್ಕಾರ ಶೇ.53.3ರಷ್ಟುಷೇರುಪಾಲು ಹೊಂದಿದ್ದು, ಇದರಲ್ಲಿ ಬಹುಪಾಲು ಷೇರು ಮಾರಾಟ ಮಾಡಲು ಸರ್ಕಾರ ಚಿಂತಿಸಿದೆ. ಸರ್ಕಾರದ ಈ ನಿರ್ಧಾರವು ಪೆಟ್ರೋಲಿಯಂ ತೈಲೋತ್ಪನ್ನ ವಲಯದಲ್ಲಿ ಸರ್ಕಾರಿ ಸ್ವಾಮ್ಯದ ಕಂಪನಿಗಳು ಹೊಂದಿದ್ದ ಏಕಸ್ವಾಮ್ಯಕ್ಕೆ ಧಕ್ಕೆ ತರುವುದಲ್ಲದೆ, ಪ್ರಸಕ್ತ ವರ್ಷ 1.05 ಲಕ್ಷ ಕೋಟಿ ರು. ಬಂಡವಾಳ ಹಿಂಪಡೆಯುವ ಸರ್ಕಾರದ ಆಶಯಕ್ಕೂ ದೊಡ್ಡ ನೆರವು ನೀಡಲಿದೆ ಎಂದು ವಿಶ್ಲೇಷಿಸಲಾಗಿದೆ.

ಖಾಸಗೀಕರಣ ಏಕೆ?:

ಹಾಲಿ ದೇಶದ ಬಹುತೇಕ ಪೆಟ್ರೋಲಿಯಂ ಉತ್ಪನ್ನಗಳ ಬೇಡಿಕೆಯನ್ನು ಸರ್ಕಾರಿ ಸ್ವಾಮ್ಯದ ಕಂಪನಿಗಳೇ ಪೂರೈಸುತ್ತಿವೆ. ಈ ವಲಯದಲ್ಲಿ ಖಾಸಗಿ ವಲಯದ ಸ್ಪರ್ಧೆ ಇರದ ಕಾರಣ, ಇಡೀ ವಲಯದಲ್ಲಿ ಸ್ಪರ್ಧಾತ್ಮಕತೆಯ ಕೊರತೆ ಕಾಣಿಸುತ್ತಿದೆ. ಹೀಗಾಗಿ ವಿದೇಶಿ ಮತ್ತು ಖಾಸಗಿ ಕಂಪನಿಗಳಿಗೆ ಷೇರು ಪಾಲು ಮಾರಾಟ ಮಾಡಿದರೆ ವಲಯದಲ್ಲಿ ಸ್ಪರ್ಧಾತ್ಮಕತೆ ಹೆಚ್ಚುವುದರ ಜೊತೆಗೆ, ಹೊಸ ಹೊಸ ಸಂಗತಿಗಳ ಅವಿಷ್ಕಾರಕ್ಕೂ ಕಾರಣವಾಗುತ್ತದೆ ಎಂಬುದು ಸರ್ಕಾರದ ಲೆಕ್ಕಾಚಾರ.

ಸಂಸತ್‌ ಅನುಮತಿ ಅಗತ್ಯ: 1976ರಲ್ಲಿ ಅಂದಿನ ಬರ್ಮಾ ಶೆಲ್‌ ಕಂಪನಿಯನ್ನು ಸಂಸತ್ತಿನಲ್ಲಿ ಕಾಯ್ದೆ ಅಂಗೀಕರಿಸುವ ಮೂಲಕ ರಾಷ್ಟ್ರೀಕರಣಗೊಳಿಸಲಾಗಿತ್ತು. ಹೀಗಾಗಿ ಇಂಥ ಕಂಪನಿಗಳನ್ನು ಮತ್ತೆ ಖಾಸಗಿಗೆ ಮಾರಾಟ ಮಾಡಲು ಸಂಸತ್ತಿನ ಅನುಮೋದನೆ ಅಗತ್ಯ ಎಂದು 2003ರಲ್ಲಿ ಸುಪ್ರೀಂಕೋರ್ಟ್‌ ಆದೇಶ ಹೊರಡಿಸಿತ್ತು. 2003ರಲ್ಲಿ ಅಟಲ್‌ ಸರ್ಕಾರ ತನ್ನ ಪಾಲಿನ ಶೇ.53ರಷ್ಟುಷೇರಲ್ಲಿ ಶೇ. 34.1ರಷ್ಟುಷೇರನ್ನು ಮಾರಾಟ ಮಾಡಲು ಮುಂದಾದಾಗ ರಿಲಯನ್ಸ್‌ ಇಂಡಸ್ಟ್ರೀಸ್‌, ಬ್ರಿಟನ್‌ನ ಬಿಪಿ, ಕುವೈತ್‌ ಪೆಟ್ರೋಲಿಯಂ, ಮಲೇಷ್ಯಾದ ಪೆಟ್ರೋನಾಸ್‌, ಸೌದಿಯ ಶೆಡಲ್‌ ಆಮ್‌ರ್‍ಕೋ ಮತ್ತು ಎಸ್ಸಾರ್‌ ಆಯಿಲ್‌ ಕಂಪನಿಗಳು ಆಸಕ್ತಿ ವ್ಯಕ್ತಪಡಿಸಿದ್ದವು. ಆದರೆ ಸುಪ್ರೀಂ ತೀರ್ಪಿನಿಂದಾಗಿ ಇಡೀ ಪ್ರಕ್ರಿಯೆಗೆ ಬ್ರೇಕ್‌ ಬಿದ್ದಿತ್ತು.

ಬಿಪಿಸಿಎಲ್‌ ಹಿನ್ನೆಲೆ

1920ರಲ್ಲಿ ರಾಯಲ್‌ ಡಚ್‌ ಶೆಲ್‌ ಮತ್ತು ಬುರ್ಮಾ ಆಯಿಲ್‌ ಕಂಪನಿ ಮತ್ತು ಭಾರತದ ಏಷ್ಯಾಟಿಕ್‌ ಪೆಟ್ರೋಲಿಯಂ ಕಂಪನಿಗಳು ಜಂಟಿಯಾಗಿ ಬರ್ಮಾ ಶೆಲ್‌ ಕಂಪನಿ ಸ್ಥಾಪಿಸಿದ್ದವು. 1976ರಲ್ಲಿ ಅಂದಿನ ಭಾರತ ಸರ್ಕಾರ ಈ ಕಂಪನಿಯನ್ನು ರಾಷ್ಟ್ರೀಕರಣಗೊಳಿಸಿತ್ತು. ಹಾಲಿ ಬಿಪಿಸಿಎಲ್‌ ದೇಶದ 4 ಸ್ಥಳಗಳಲ್ಲಿ ತೈಲ ಸಂಸ್ಕರಣಾ ಘಟಕಗಳನ್ನು ಹೊಂದಿದ್ದು, ಅವುಗಳ ಮೂಲಕ 38.3 ದಶಲಕ್ಷ ಟನ್‌ ಕಚ್ಚಾತೈಲವನ್ನು ಇಂಧನವಾಗಿ ಪರಿವರ್ತಿಸುವ ಕೆಲಸ ಮಾಡುತ್ತಿದೆ. ಜೊತೆಗೆ ಕಂಪನಿಯು 15078 ಪೆಟ್ರೋಲ್‌ ಬಂಕ್‌, 6004 ಎಲ್‌ಪಿಜಿ ವಿತರಣಾ ಕೇಂದ್ರಗಳನ್ನು ಹೊಂದಿದೆ.

38.3 ದಶಲಕ್ಷ ಟನ್‌: ಬಿಪಿಸಿಎಲ್‌ ಕಚ್ಚಾತೈಲ ಸಂಸ್ಕರಣಾ ಸಾಮರ್ಥ್ಯ

15078: ಬಿಪಿಸಿಎಲ್‌ ಹೊಂದಿರುವ ಪೆಟ್ರೋಲ್‌ ಬಂಕ್‌ಗಳ ಸಂಖ್ಕೆ

6004: ಬಿಪಿಸಿಎಲ್‌ ಹೊಂದಿರುವ ಎಲ್‌ಪಿಜಿ ವಿತರಣಾ ಘಟಕಗಳು

249.4 ದಶಲಕ್ಷ ಟನ್‌: ಭಾರತದ ಒಟ್ಟು ಕಚ್ಚಾತೈಲ ಸಂಸ್ಕರಣಾ ಸಾಮರ್ಥ್ಯ

65,554: ಭಾರತದಲ್ಲಿ ಇರುವ ಒಟ್ಟು ಪೆಟ್ರೋಲ್‌ ಬಂಕ್‌ಗಳ ಸಂಖ್ಯೆ

24026: ಭಾರತದಲ್ಲಿರುವ ಒಟ್ಟು ಎಲ್‌ಪಿಜಿ ವಿತರಣಾ ಘಟಕಗಳು

ಶೇ.53.3: ಬಿಪಿಸಿಎಲ್‌ನಲ್ಲಿ ಕೇಂದ್ರ ಸರ್ಕಾರ ಹೊಂದಿರುವ ಷೇರು