ಪತಿಯನ್ನು ತೊರೆದಿದ್ದ ಮಂಡ್ಯ ಮೂಲದ ರತ್ನ ಎಂಬಾಕೆ 6ನೇ ತರಗತಿ ಓದುತ್ತಿದ್ದ 10 ವರ್ಷದ ಮಗಳೊಂದಿಗೆ ಪ್ರತ್ಯೇಕವಾಗಿ ಮಲ್ಲಸಂದ್ರದಲ್ಲಿ ವಾಸಿಸುತ್ತಿದ್ದಳು.

ಬೆಂಗಳೂರು(ಜ.8): ಬಾಲಕಿಯೊಬ್ಬಳು ಹೆತ್ತ ತಾಯಿ ನೀಡುತ್ತಿದ್ದ ಕಷ್ಟವನ್ನು ಸಹಿಸಲಾರದೆ 'ನನ್ನ ಮಮ್ಮಿಯಂಥ ಮಮ್ಮಿ ಮುಂದೆ ಹುಟ್ಟಬಾರದು,ನನಗೆ ಬಂದ ಕಷ್ಟ ಯಾರಿಗೂ ಬರಬಾರದು' ಎಂದು ಪೊಲೀಸರಿಗೆ ನೀಡಿರುವ ಹೇಳಿಕೆಯಿದು.

ಸ್ವಂತ ತಾಯಿಯೇ ತನ್ನ ಮಗಳನ್ನು ತನ್ನೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದ ವ್ಯಕ್ತಿಯೊಬ್ಬನ ಜೊತೆ ಮದುವೆ ಮಾಡಲು ಹೊರಟಿದ್ದಾಳೆ. ಮದುವೆಗೆ ಒಪ್ಪದ ಕಾರಣಕ್ಕಾಗಿ ತನ್ನ ಮಗಳಿಗೆ ಕೊಡಬಾರದ ಹಿಂಸೆಯನ್ನು ಸಹ ನೀಡಿದ್ದಾಳೆ. ನಗರದ ಮಲ್ಲಸಂದ್ರದಲ್ಲಿ ಘಟನೆ ನಡೆದಿದ್ದು, ಪೀಣ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ತಾಯಿ ರತ್ನ, ಪ್ರಿಯತಮ ಮಂಜನನ್ನು ಬಂಧಿಸಿ ಬಾಲಕಿಯನ್ನು ರಕ್ಷಿಸಿದ್ದಾರೆ.

ಘಟನೆ ನಡೆದಿರುವುದು ಹೀಗೆ: ಪತಿಯನ್ನು ತೊರೆದಿದ್ದ ಮಂಡ್ಯ ಮೂಲದ ರತ್ನ ಎಂಬಾಕೆ 6ನೇ ತರಗತಿ ಓದುತ್ತಿದ್ದ 10 ವರ್ಷದ ಮಗಳೊಂದಿಗೆ ಪ್ರತ್ಯೇಕವಾಗಿ ಮಲ್ಲಸಂದ್ರದಲ್ಲಿ ವಾಸಿಸುತ್ತಿದ್ದಳು. ಪಾಂಡವಪುರದ ಕೊಲೆ ಪ್ರಕರಣವೊಂದರ ಆರೋಪಿಯಾದ ಮಂಜ ಎಂಬುವನೊಂದಿಗೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದಳು. ಮಂಜು ವಿರುದ್ಧ ಶ್ರೀರಂಗಪಟ್ಟಣ ಹಾಗೂ ಪಾಂಡವಪುರದಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಜೊತೆಗೆ ಈತನೊಂದಿಗೆ ಮಗಳನ್ನು ಕೊಟ್ಟು ವಿವಾಹ ಮಾಡಲು ನಿರ್ಧರಿಸಿ ಶಾಲೆಗೆ ಹೋದ ಬಾಲಕಿಯನ್ನು ಮಂಡ್ಯದಲ್ಲಿರುವ ತಾತ ಮೃತಪಟ್ಟಿದ್ದಾರೆಂದು ಸುಳ್ಳು ಹೇಳಿ ಮಂಡ್ಯದ ಲಾಡ್ಜ್'ನಲ್ಲಿ ಒಂದು ತಿಂಗಳ ಕಾಲ ಇರಿಸಿಕೊಂಡು ಅನೈತಿಕ ಸಂಬಂಧ ಹೊಂದಿದ ಮಂಜನನ್ನು ಮದುವೆಯಾಗು ಎಂದು ದೈಹಿಕವಾಗಿ ಹಿಂಸಿಸಿದ್ದಾಳೆ. ಜೊತೆಗೆ ಮಾದೇಶ ಬೆಟ್ಟದಲ್ಲಿ ಮದುವೆಗೂ ಯತ್ನಿಸಿದ್ದಾರೆ. ನೆರೆ ಮನೆಯ ಅಜ್ಜಿಯ ಸಹಕಾರದಿಂದ ಬಾಲಕಿ ತಂದೆಯ ಮಡಿಲು ಸೇರಿದ್ದಾಳೆ. ಈ ಸಂಬಂಧ ಮಾನವ ಹಕ್ಕು ಹೋರಾಟಗಾರರ ಸಹಾಯ ಪಡೆದು ಬೆಂಗಳೂರಿನ ಪೀಣ್ಯ ಠಾಣೆಗೆ ದೂರು ನೀಡಿದ್ದಾರೆ. ಪೀಣ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಮಗಳಿಗೆ ಮೋಸ ಮಾಡಲು ಹೊರಟ ತಾಯಿ ರತ್ನ ಪ್ರಿಯತಮ ಮಂಜನನ್ನು ಜೈಲಿಗೆ ಕಳುಹಿಸಿದ್ದಾರೆ.ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.