ಉದ್ಯಮಿ ಪುತ್ರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪೊಲೀಸರ ವಶದಲ್ಲಿರುವ ಶಾಸಕ ಹ್ಯಾರಿಸ್ ಪುತ್ರ ಮಹಮದ್ ನಲಪಾಡ್‌ಗೆ ವಿಪರೀತ ಪಿಸ್ತೂಲ್ ಶೋಕಿ ಇತ್ತು ಎನ್ನಲಾಗಿದೆ.

ಬೆಂಗಳೂರು: ಉದ್ಯಮಿ ಪುತ್ರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪೊಲೀಸರ ವಶದಲ್ಲಿರುವ ಶಾಸಕ ಹ್ಯಾರಿಸ್ ಪುತ್ರ ಮಹಮದ್ ನಲಪಾಡ್‌ಗೆ ವಿಪರೀತ ಪಿಸ್ತೂಲ್ ಶೋಕಿ ಇತ್ತು ಎನ್ನಲಾಗಿದೆ.

ಗನ್ ಹೊಂದಲು ನಲಪಾಡ್ ಕಳೆದ ವರ್ಷ ನಗರ ಪೊಲೀಸ್ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದ. ತಾನು ಶಾಸಕರ ಪುತ್ರ, ಸ್ವಂತ ವ್ಯವಹಾರ ಹೊಂದಿದ್ದೇನೆ. ಸೂಕ್ತ ಆತ್ಮ ರಕ್ಷಣೆಗಾಗಿ ಪಿಸ್ತೂಲ್ ಹೊಂದಲು ಪರವಾನಗಿ ಬೇಕೆಂದು 2017 ರಲ್ಲಿ ಅರ್ಜಿ ಸಲ್ಲಿಸಿದ್ದ. ಇದನ್ನು ಪರಿಶೀಲನೆ ನಡೆಸಿದ್ದ ಪೊಲೀಸರು ಕಳೆದ ವರ್ಷವೇ ನಲಪಾಡ್‌ಗೆ ಪಿಸ್ತೂಲ್ ಹೊಂದಲು ಅನುಮತಿ ಸಹ ನೀಡಿದ್ದರು.

ನಲಪಾಡ್ ಪಿಸ್ತೂಲ್ ಬಗ್ಗೆ ಸಾಕಷ್ಟು ಶೋಕಿ ಹೊಂದಿದ್ದ. ಗನ್‌ಗಳನ್ನು ಕೊಂಡು ಅದನ್ನು ಇಟ್ಟುಕೊಳ್ಳುತ್ತಿದ್ದ. ಪಿಸ್ತೂಲ್ ಹಿಡಿದು ತನ್ನ ಸ್ನೇಹಿತನ ಹಣೆಗೆ ಇಟ್ಟು ಕೊಲ್ಲುವ ರೀತಿಯಲ್ಲಿ ಬೆದರಿಕೆವೊಡ್ಡುವ ನಲಪಾಡ್‌ನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಕೂಡ ವೈರಲ್ ಆಗಿದೆ. ಕೇವಲ ಗನ್‌ಮ್ಯಾನ್‌ಗಳನ್ನು ಮಾತ್ರ ಇಟ್ಟುಕೊಂಡು ಶೋಕಿ ಮಾಡುವುದಷ್ಟೇ ಅಲ್ಲ, ಜತೆಗೆ ಪಿಸ್ತೂಲ್ ಹೊಂದುವ ಶೋಕಿಕೊಂಡು ಹೊಂದಿದ್ದ.

ಹೀಗಾಗಿಯೇ ಪಿಸ್ತೂಲ್ ಹೊಂದಲು ಅನುಮತಿ ಪಡೆದಿದ್ದ ಎಂದು ತಿಳಿದು ಬಂದಿದೆ. ಪ್ರಭಾವಿ ಶಾಸಕರ ಪುತ್ರ ಹಾಗೂ ಆತ ಕೂಡ ವ್ಯವಹಾರ ನಡೆಸುತ್ತಿದ್ದ. ಆತ್ಮ ರಕ್ಷಣೆಗಾಗಿ ಪಿಸ್ತೂಲ್ ಹೊಂದು ಪರವಾನಗಿ ಕೇಳಿದ್ದ. ಈ ಕಾರಣಕ್ಕೆ ಅನುಮತಿ ನೀಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.