21 ವರ್ಷಗಳ ಬಳಿಕ ತಾಯಿ ಮಡಿಲು ಸೇರಿದ ಮಗ..!

Police Found A Mom's Kidnapped Son 21 Years Later
Highlights

ಇದೊಂತರಾ ಬಾಲಿವುಡ್ ಸಿನಿಮಾವನ್ನೇ ಮೀರಿಸುವ ನೈಜ ಕತೆ. ಮಗ ಕಳೆದು ಹೋದ 21 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಪಕ್ಕಾ ಫ್ಯಾಮಿಲಿ ಡ್ರಾಮಾ ಕತೆ ಇದು.

ಮೆಕ್ಸಿಕೋ(ಜೂ.2): ಇದೊಂತರಾ ಬಾಲಿವುಡ್ ಸಿನಿಮಾವನ್ನೇ ಮೀರಿಸುವ ನೈಜ ಕತೆ. ಮಗ ಕಳೆದು ಹೋದ 21ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಪಕ್ಕಾ ಫ್ಯಾಮಿಲಿ ಡ್ರಾಮಾ ಕತೆ ಇದು.

ಹೌದು, ಮಾರಿಯಾ ಮನಿಕಾ ಮತ್ತು ವೆಲೆಂಟಿನ್ ಹರ್ನಾಂಡೇಜ್ ಎಂಬ ಜೋಡಿ ತಮ್ಮ 18 ತಿಂಗಳ ಮಗ ಸ್ಟೀವ್ ಜೊತೆ ವಾಸವಿತ್ತು. ಒಂದು ದಿನ ಮಾರಿಯಾ ಕೆಲಸಕ್ಕೆಂದು ಹೊರಗಡೆ ಹೋದಾಗ ವೆಲೆಂಟಿನ್ ತನ್ನ ಮಗನನ್ನು ಕರೆದುಕೊಂಡು ಆಕೆಗೆ ಏನೂ ಹೇಳದೆ ಮೆಕ್ಸಿಕೋಗೆ ಬಂದು ನೆಲೆಸಿರುತ್ತಾನೆ.

ವೆಲೆಂಟಿನ್ ಮನೆ ಬಿಟ್ಟು ಹೊರಡುವಾಗ ತನ್ನ ಹಾಗೂ ಸ್ಟೀವ್ ಕುರಿತು ಯಾವುದೇ ಸುಳಿವು ಸಿಗದಂತೆ ಎಲ್ಲವನ್ನೂ ದೋಚಿಕೊಂಡು ಪರಾರಿಯಾಗಿರುತ್ತಾನೆ. ಮಾರಿಯಾ ಮರಳಿ ಮನೆಗೆ ಬಂದು ನೋಡಿದಾಗ ಗಂಡ ತನಗೆ ಮೋಸ ಮಾಡಿರುವುದು ಗೊತ್ತಾಗುತ್ತದೆ.

ಮಾರಿಯಾ ಈ ಕುರಿತು ತಕ್ಷಣವೇ ಪೊಲೀಸರಿಗೆ ದೂರು ನೀಡುತ್ತಾಳೆ. ಅಲ್ಲದೇ ತನ್ನ ಬಳಿ ಇರುವ ಸ್ಟೀವ್ ನ ಏಕೈಕ ಫೋಟೋ ನೀಡಿರುತ್ತಾಳೆ. ಕೇವಲ ಇದೊಂದೇ ಫೋಟೋದ ಸಹಾಯದಿಂದ ಸ್ಟೀವ್ ಬೆನ್ನತ್ತಿದ್ದ ಗುಪ್ತಚರ ಪೊಲೀಸರು ಬರೋಬ್ಬರಿ 21 ವರ್ಷಗಳ ಬಳಿಕ ಆತನನ್ನು ಪತ್ತೆ ಹಚ್ಚಿದ್ದಾರೆ.

ವೆಲೆಂಟಿನ್ ಮೆಕ್ಸಿಕೋಗೆ ಹಾರಿ ಹೋದ ಜಾಡು ಹಿಡಿದ ಗುಪ್ತಚರ ಪೊಲೀಸರು, ಕೊನೆಗೂ ಸ್ಟೀವ್ ನನ್ನು ಆತನ ತಾಯಿಯ ಮಡಿಲು ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಿತ್ರ ಸಂಗತಿ ಅಂದರೆ ತಾಯಿಯೇ ನಮ್ಮನ್ನು ಬಿಟ್ಟು ಹೋಗಿದ್ದಾಳೆ ಎಂದು ಸ್ಟೀವ್ ಗೆ ತಂದೆ ವೆಲೆಂಟಿನ್ ಸುಳ್ಳು ಕತೆ ಹೇಳಿದ್ದ.

ಸದ್ಯ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ, ಸ್ಟೀವ್ ಮತ್ತು ಮಾರಿಯಾಳ ಪುನರ್ ಮಿಲನಕ್ಕೆ ಸಂತೋಷ ವ್ಯಕ್ತಪಡಿಸಿದೆ. ಅಲ್ಲದೇ ಸತತ 21 ವರ್ಷಗಳ ಕಾಲ ಕಷ್ಟಪಟ್ಟು ಪ್ರಕರಣ ಭೇಧೀಸಿದ ಪೊಲೀಸರಿಗೂ ಕಾಯರ್ಯಕ್ಕೂ ಪ್ರಶಂಸೆ ವ್ಯಕ್ತಪಡಿಸಿದೆ.

loader