ನರಹಂತಕ ವೀರಪ್ಪನ್ ಕಥೆ ಮುಗಿದು ದಶಕವೇ ಕಳೆದಿದೆ. ಆದರೆ ಆತನ ಸಹಚರರ ಅಧ್ಯಾಯ ಮಾತ್ರ ಇನ್ನೂ ಮುಗಿದಿಲ್ಲ. ಆತನ ತಂಡದಲ್ಲಿ ಕೆಲಸ ಮಾಡುತ್ತಿದ್ದ ಇನ್ನೂ ಕೆಲವು ಸಹಚರರು ಕರ್ನಾಟಕ, ತಮಿಳುನಾಡಿನ ಯಾವ್ಯಾವುದೋ ಭಾಗದಲ್ಲಿ ತಲೆಮರೆಸಿಕೊಂಡಿರಬಹುದು ಎಂಬ ಶಂಕೆಯಲ್ಲಿ  ಖಾಕಿ ಕಣ್ಗಾವಲಿಟ್ಟಿದೆ. ಚಾಮರಾಜನಗರ ಜಿಲ್ಲೆ ರಾಮಾಪುರ ಠಾಣೆ ಪೊಲೀಸರು ಮತ್ತಿಬ್ಬರು ವೀರಪ್ಪನ್ ಸಹಚರರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಚಾಮರಾಜನಗರ(ಸೆ.21): ಕಾಡುಗಳ್ಳ, ನರಹಂತಕ, ದಂತಚೋರ ವೀರಪ್ಪನ್. ಕರ್ನಾಟಕದ ಚಾಮರಾಜನಗರ ಹಾಗೂ ತಮಿಳುನಾಡಿನ ಗಡಿಭಾಗದಲ್ಲಿ ಅಟ್ಟಹಾಸ ಮೆರೆದು ತನ್ನ ಸಾಮ್ರಾಜ್ಯ ಕಟ್ಟಿಕೊಂಡಿದ್ದ. ಈತ ಜೀವಂತವಾಗಿ ಇದ್ದಷ್ಟು ಕಾಲ ಅರಣ್ಯ ಇಲಾಖೆ ಹಾಗೂ ಪೊಲೀಸರಿಗೆ ತಲೆನೋವಾಗಿದ್ದ. ಈತನ ಸೆರೆ ಹಿಡಿಯಲು ಎರಡು ರಾಜ್ಯದ ಸಿಬ್ಬಂದಿ ಹರಸಾಹಸ ಪಟ್ಟಿದ್ದರು. ಅಲ್ಲದೇ ಕಾರ್ಯಾಚರಣೆ ವೇಳೆ ಎಷ್ಟೋ ಮಂದಿ ಸಿಬ್ಬಂದಿ ತಮ್ಮ ಜೀವವನ್ನೇ ತ್ಯಾಗ ಮಾಡಿದ್ದರು. ಇಂತಹ ನಟೋರಿಯಸ್ ಕ್ರಿಮಿನಲ್ ಪೊಲೀಸರ ಎನ್ ಕೌಂಟರ್ ಗೆ ಬಲಿಯಾಗಿ ಹೋಗಿದ್ದಾನೆ. ಆತನ ಎನ್ ಕೌಂಟರ್ ಆದರೂ ತಲೆಮರೆಸಿಕೊಂಡಿರುವ ಆತನ ಸಹಚರಿಗಾಗಿ ಶೋಧ ನಡೆಯುತ್ತಲೇ ಇದೆ.

Add Asianetnews Kannada as a Preferred SourcegooglePreferred

ವೀರಪ್ಪನ್ ಹತ್ಯೆಯಾಗಿ ದಶಕವಾದರೂ ಪೊಲೀಸರು ಮಾತ್ರ ಆತನ ಸಹಚರರಿಗಾಗಿ ಹುಡುಕಾಟ ನಡೆಸುತ್ತಲೇ ಬಂದಿದ್ದಾರೆ. ಇದೀಗ ಚಾಮರಾಜನಗರದ ರಾಮಾಪುರ ಪೊಲೀಸರು ಆತನ ಸಹಚರರು ಎನ್ನಲಾದ ಶಿವಸ್ವಾಮಿ ಹಾಗೂ ಮುರುಗೇಶ್ ಎಂಬುವರನ್ನ ಬಂಧಿಸಿರುವುದರ ಮೂಲಕ ಕಾಡುಗಳ್ಳನ ಗ್ಯಾಂಗ್ ನಲ್ಲಿದ್ದವರನ್ನ ಸಂಪೂರ್ಣವಾಗಿ ಮಟ್ಟಹಾಕಲು ಮುಂದಾಗಿದ್ದಾರೆ.

ಸಾಮಾನ್ಯವಾಗಿ ಒಬ್ಬ ವ್ಯಕ್ತಿ ವಿರುದ್ಧ ಠಾಣೆಯಲ್ಲಿ ಒಮ್ಮೆ ಪ್ರಕರಣ ದಾಖಲಾಯಿತು ಎಂದರೆ ತನಿಖೆ ಆರಂಭ ಎಂದೇ ಅರ್ಥ. ಒಂದು ವೇಳೆ ಆತ ಆರೋಪಿಯಾಗಿ ತಲೆಮರೆಸಿಕೊಂಡರೆ 7 ವರ್ಷದ ತನಕ ಹುಡುಕಾಟ ನಡೆದು, ಬಳಿಕ ಪತ್ತೆಯಾಗದ ಆರೋಪಿ ಎಂದು ಪೊಲೀಸರು ಫೈಲ್ ಸೃಷ್ಟಿಸುತ್ತಾರೆ. ಬಳಿಕ ಬಂದ ಪೊಲೀಸ್ ಅಧಿಕಾರಿಗಳು ಬಾಕಿ ಉಳಿದ ಪ್ರಕರಣಗಳತ್ತ ಕಣ್ಣು ಹಾಯಿಸುತ್ತಲೇ ಇರುತ್ತಾರೆ. ಈ ಪ್ರಕರಣದಲ್ಲಿ ಸಹ ಇದೇ ರೀತಿಯಾಗಿದ್ದು ಇಬ್ಬರು ಆರೋಪಿಗಳನ್ನು ರಾಮಾಪುರ ಪೊಲೀಸರು ಬಂಧಿಸಿದ್ದಾರೆ.

ವೀರಪ್ಪನ್ ಸಾವಿನ ಜಿದ್ದು ಇನ್ನೂ ಅವರ ಸಹಚರರರಲ್ಲಿ ಇದೆ ಅವರು ಯಾವಾಗ ಏನು ಬೇಕಾದ್ರೂ ಮಾಡಬಹುದು, ಕೂಡಲೇ ಅವರನ್ನೆಲ್ಲಾ ಬಂಧಿಸಬೇಕು ಅಂತಾ ನಿವೃತ್ತ ಪೊಲೀಸ್ ಅಧಿಕಾರಿ ಸಂಗ್ರಾಮ್ ಸಿಂಗ್ ಹೇಳಿದ್ದಾರೆ.

ಒಟ್ಟಾರೆ ಚಾಮರಾಜನಗರ ಜಿಲ್ಲಾ ಪೊಲೀಸರ ಫೈಲಿನಲ್ಲಿ ಇಂದಿಗೂ ವೀರಪ್ಪನ್ ಸಹಚರರ ಪ್ರಕರಣ ಜೀವಂತವಾಗಿದ್ದು, ಇನ್ನೆಷ್ಟು ಮಂದಿ ಪೊಲೀಸರ ಫೈಲಿನಲ್ಲಿ ಬಾಕಿ ಇದ್ದಾರೋ ಅವರೆಲ್ಲಾ ಮತ್ತಷ್ಟು ಕಂಟಕಪ್ರಾಯವಾಗುವ ಮೊದಲೇ ಮಟ್ಟಹಾಕಿದರೆ ಒಳ್ಳೆಯದು.