ಮಥುರಾ(ಸೆ.11): ಪ್ಲ್ಯಾಸ್ಟಿಕ್ ಬಳಕೆ ನಿಲ್ಲಿಸುವಂತೆ ಆ.15 ರ ತಮ್ಮ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಿ ಮೋದಿ ಕೆಂಪುಕೋಟೆಯಿಂದ ದೇಶಕ್ಕೆ ಕರೆ ಕೊಟ್ಟಿದ್ದರು. ಆದರೆ ಸುಮ್ಮನೆ ಹೇಳಿ ಮರೆಯವುದು ಮೋದಿ ಜಾಯಮಾನವಲ್ಲ. 

ಇತರರಿಗೆ ಬುದ್ಧಿವಾದ ಹೇಳುವ ಜೊತೆಗೆ ತಾವೂ ಅದನ್ನು ಪಾಲಿಸುವ ಜಾಯಮಾನವುಳ್ಳ ಪ್ರಧಾನಿ ಮೋದಿ, ಅದರಂತೆ ಉತ್ತರಪ್ರದೇಶದ ಮಥುರಾದಲ್ಲಿ ಸ್ವಚ್ಛತಾ ಕರ್ಮಚಾರಿಗಳೊಂದಿಗೆ ಸೇರಿ ಪ್ಲ್ಯಾಸ್ಟಿಕ್ ಕಸವನ್ನು ಬೇರ್ಪಡಿಸಿ ಇಡೀ ದೇಶಕ್ಕೆ ಪ್ಲ್ಯಾಸ್ಟಿಕ್ ಬಳಕೆಗೆ ಅಂತ್ಯ ಹಾಡುವಂತೆ ಸಂದೇಶ ರವಾನಿಸಿದ್ದಾರೆ.

ಮಥುರಾದಲ್ಲಿ ನಡೆದ ‘ಸ್ವಚ್ಛತಾ ಹೀ ಸೇವಾ’(ಸ್ವಚ್ಛತೆಯೇ ಸೇವೆ)ಕಾರ್ಯಕ್ರಮದಲ್ಲಿ ಪೌರ ಕಾರ್ಮಿಕರೊಂದಿಗೆ ಸೇರಿ ಪ್ರಧಾನಿ ಮೋದಿ ಪ್ಲ್ಯಾಸ್ಟಿಕ್ ಕಸವನ್ನು ಬೇರ್ಪಡಿಸಿ ಗಮನ ಸೆಳೆದರು.

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಪ್ಲ್ಯಾಸ್ಟಿಕ್ ಬಳಕೆಯನ್ನು ನಿಷೇಧಿಸುವ ಕಾಲ ಸನ್ನಿಹಿತವಾಗಿದ್ದು, ಸಿಂಗಲ್ ಯೂಸ್ ಪ್ಲ್ಯಾಸ್ಟಿಕ್ ಬಳಕೆಯನ್ನು ಕೊನೆಗಾಣಿಸಲು ಜನರ ಸಹಕಾರ ಕೋರಿದರು.

2022ರಲ್ಲಿ ಸಿಂಗಲ್ ಯೂಸ್ ಪ್ಲ್ಯಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.