ಪ್ಲಾಸ್ಟಿಕ್ ವಿರುದ್ಧ ಮೋದಿ ಸಮರ: ಅ. 2ರಂದು ಜನಾಂದೋಲನಕ್ಕೆ ಕರೆ!
ಪ್ಲಾಸ್ಟಿಕ್ ವಿರುದ್ಧ ಮೋದಿ ಸಮರ| ಪ್ಲಾಸ್ಟಿಕ್ ಮುಕ್ತ ಭಾರತಕ್ಕಾಗಿ ಅ.2ರಂದು ಜನಾಂದೋಲನಕ್ಕೆ ಪ್ರಧಾನಿ ಕರೆ| ದೇಶದಲ್ಲಿನ ಪ್ಲಾಸ್ಟಿಕ್ ಅನ್ನು ದೀಪಾವಳಿಯೊಳಗೆ ವಿಲೇವಾರಿ ಮಾಡಲು ಸಲಹೆ| ಮನ್ ಕೀ ಬಾತ್‌ನಲ್ಲಿ ಪ್ಲಾಸ್ಟಿಕ್ ವಿಷಯ ಪ್ರಸ್ತಾಪ
ನವದೆಹಲಿ[ಆ.26]: 5 ವರ್ಷಗಳ ಹಿಂದೆ ಸ್ವಚ್ಛ ಭಾರತ ಎಂಬ ಸಮೂಹ ಆಂದೋಲನವನ್ನು ಅ.2ರಂದು ಆರಂಭಿಸಿ ಕ್ರಾಂತಿಕಾರಕ ಬದಲಾವಣೆ ತಂದ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ಗಾಂಧಿ ಜಯಂತಿಯಂದು ಮತ್ತೊಂದು ಜನಾಂದೋಲನ ಪ್ರಾರಂಭಿಸಲು ಮುಂದಾಗಿದ್ದಾರೆ. ಆ.2ರಂದು ಗಾಂಧೀಜಿ ಅವರ 150ನೇ ಜನ್ಮ ವರ್ಷಾಚರಣೆ ಇದ್ದು, ಆ ದಿನವನ್ನು ಪ್ಲಾಸ್ಟಿಕ್ ಮುಕ್ತ ಭಾರತ ದಿನವಾಗಿ ಆಚರಿಸುವಂತೆ ದೇಶವಾಸಿಗಳಿಗೆ ಕರೆ ಕೊಟ್ಟಿದ್ದಾರೆ.
ಅಲ್ಲದೆ, ಈಗಾಗಲೇ ದೇಶದಲ್ಲಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ದೀಪಾವಳಿಯೊಳಗೆ ಸುರಕ್ಷಿತವಾಗಿ ವಿಲೇವಾರಿ ಮಾಡಲು ಹೊಸ ದಾರಿಗಳನ್ನು ಹುಡುಕುವಂತೆ ನಗರಪಾಲಿಕೆ, ಎನ್‌ಜಿಒ ಹಾಗೂ ಕಾರ್ಪೋರೆಟ್ ಕ್ಷೇತ್ರಕ್ಕೆ ಸಲಹೆ ಮಾಡಿದ್ದಾರೆ.
ಗ್ರಿಲ್ಸ್’ಗೆ ಹಿಂದಿ ಹೇಗೆ ಅರ್ಥವಾಯ್ತು?: ಮನ್ ಕಿ ಬಾತ್’ನಲ್ಲಿ ಮೋದಿ ಉತ್ತರ ಕೊಟ್ಟಾಯ್ತು!
ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ನಲ್ಲಿ ಭಾನುವಾರ ಮಾತನಾಡಿದ ಅವರು, ಸೆ.11ರಿಂದ ವಾರ್ಷಿಕ ‘ಸ್ವಚ್ಛತೆಯೂ ಸೇವೆ’ ಅಭಿಯಾನ ನಡೆಯಲಿದೆ. ಅದರಲ್ಲಿ ಜನರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಪ್ಲಾಸ್ಟಿಕ್ ವಿರುದ್ಧ ಹೊಸ ಕ್ರಾಂತಿ:
ಈ ವರ್ಷ ಅ.2ರಂದು ಬಾಪು ಅವರ 150ನೇ ಜನ್ಮದಿನ ಆಚರಣೆ ಮಾಡುತ್ತಿದ್ದೇವೆ. ಬಯಲು ಬಹಿರ್ದೆಸೆ ಮುಕ್ತ ಭಾರತವನ್ನು ನಾವು ಅವರಿಗೆ ಅರ್ಪಿಸುವುದಷ್ಟೇ ಅಲ್ಲ, ಪ್ಲಾಸ್ಟಿಕ್ ವಿರುದ್ಧ ಹೊಸ ಕ್ರಾಂತಿಗೆ ಬುನಾದಿ ಹಾಕಬೇಕು. ಅದನ್ನು ದೇಶಾದ್ಯಂತ ಜನರೇ ಮಾಡಬೇಕು. ಹೀಗಾಗಿ ಸಮಾಜದ ಎಲ್ಲ ಸ್ತರದ ಜನರೂ ಈ ವರ್ಷದ ಗಾಂಧಿ ಜಯಂತಿಯನ್ನು ಭಾರತ ಮಾತೆಯನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸುವ ದಿನವನ್ನಾಗಿಸಬೇಕು ಎಂದು ಕರೆ ನೀಡಿದರು.
ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ, ದಾಸ್ತಾನು ಮಾಡಲು ಎಲ್ಲ ನಗರಪಾಲಿಕೆ, ನಗರಸಭೆ, ಜಿಲ್ಲಾಡಳಿತ, ಗ್ರಾಮ ಪಂಚಾಯಿತಿ, ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು. ಈ ರೀತಿ ಸಂಗ್ರಹವಾದ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಕಾರ್ಪೋರೆಟ್ ವಲಯ ಹೊಸ ದಾರಿಗಳನ್ನು ಹುಡುಕಬೇಕು. ಆ ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡಬಹುದು. ಇಂಧನವಾಗಿ ಪರಿವರ್ತಿಸಬಹುದು. ಈ ಮೂಲಕ ಮುಂಬರುವ ದೀಪಾವಳಿಯೊಳಗೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವ ಕಾಯಕ ಪೂರ್ಣಗೊಳಿಸಬೇಕು ಎಂದು ಹೇಳಿದರು. ಈ ವರ್ಷ ದೀಪಾವಳಿ ಅ.27ರಂದು ಬರಲಿದೆ.
ಬಹ್ರೇನ್‌ನ ಶ್ರೀಕೃಷ್ಣ ದೇವಾಲಯದ ಪುನರಾಭಿವೃದ್ಧಿಗೆ ಪ್ರಧಾನಿ ಚಾಲನೆ!
2ನೇ ಅವಧಿಗೆ ಆಯ್ಕೆಯಾದ ಬಳಿಕ ಮೊದಲ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ್ದ ಮೋದಿ ಅವರು, ಒಂದೇ ಸಲ ಬಳಸಿ ಎಸೆಯುವ ಪ್ಲಾಸ್ಟಿಕ್ ಅನ್ನು ನಿರ್ಮೂಲನೆ ಮಾಡುವಂತೆ ಹಾಗೂ ಅಂಗಡಿದಾರರು ಗ್ರಾಹಕರಿಗೆ ಪರಿಸರ ಸ್ನೇಹಿ ಚೀಲಗಳನ್ನು ನೀಡುವಂತೆ ಮನವಿ ಮಾಡಿದ್ದರು.
ಮೋದಿ ಹಿಂದಿ ಬೆಯರ್ ಗ್ರಿಲ್ಸ್‌ಗೆ ಅರ್ಥವಾಗಿದ್ದು ಹೇಗೆ?
ನವದೆಹಲಿ: ವನ್ಯಜೀವಿ ಸಾಹಸಗಾರ ಬೆಯರ್ ಗ್ರಿಲ್ಸ್ ಅವರು ಡಿಸ್ಕವರಿ ಚಾನೆಲ್‌ನಲ್ಲಿ ನಡೆಸಿಕೊಡುವ ‘ಮ್ಯಾನ್ ವರ್ಸಸ್ ವೈಲ್ಡ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮದುದ್ದಕ್ಕೂ ಹಿಂದಿಯಲ್ಲೇ ಮಾತನಾಡಿದ್ದರು. ಅದು ಬೆಯರ್ ಗ್ರಿಲ್ಸ್ ಅವರಿಗೆ ಅರ್ಥವಾಯಿತಾ? ಎಂಬ ಪ್ರಶ್ನೆ ಕಾರ್ಯಕ್ರಮ ವೀಕ್ಷಿಸಿದ ಎಲ್ಲರಿಗೂ ಕಾಡಿರಬಹುದು. ಅದಕ್ಕೆ ಸ್ವತಃ ಮೋದಿ ಅವರ ಉತ್ತರ ನೀಡಿದ್ದಾರೆ.
ನಾನು ಹಿಂದಿಯಲ್ಲಿ ಮಾತನಾಡಿದ್ದು ತಕ್ಷಣವೇ ಇಂಗ್ಲಿಷ್‌ಗೆ ಅನುವಾದಗೊಳ್ಳುತ್ತಿತ್ತು. ಇದಕ್ಕಾಗಿ ಬೆಯರ್ ಅವರು ತಮ್ಮ ಕಿವಿಯಲ್ಲಿ ಪುಟ್ಟಕಾರ್ಡ್‌ಲೆಸ್ ಉಪಕರಣವೊಂದನ್ನು ಇಟ್ಟುಕೊಂಡಿದ್ದರು. ಇದರಿಂದಾಗಿ ಸಂವಹನ ಸುಲಭವಾಯಿತು. ಇದು ತಂತ್ರಜ್ಞಾನದ ಅದ್ಭುತ ಅಂಶ ಎಂದು ಮೋದಿ ಅವರು ‘ಮನ್ ಕೀ ಬಾತ್’ನಲ್ಲಿ ವಿವರಿಸಿದ್ದಾರೆ. ಅಲ್ಲದೆ, ಬೆಯರ್ ಗ್ರಿಲ್ಸ್ ಹಿಂದಿ ಅರ್ಥ ಮಾಡಿಕೊಳ್ಳಲು ಹೇಗೆ ಸಾಧ್ಯ ಎಂದು ಜನರು ಹಿಂಜರಿಕೆಯಿಂದಲೇ ತಮ್ಮನ್ನು ಕೇಳಿದ್ದುಂಟು ಎಂದೂ ಹೇಳಿಕೊಂಡಿದ್ದಾರೆ.
29ಕ್ಕೆ ‘ಫಿಟ್ ಇಂಡಿಯಾ’
ಯುವ ಕ್ರೀಡಾಪಟುಗಳನ್ನು ಶೋಧಿಸಿ, ಪ್ರೋತ್ಸಾಹಿಸಲು ‘ಖೇಲೋ ಇಂಡಿಯಾ’ ಎಂಬ ಅಭಿಯಾನ ಆರಂಭಿಸಿದ್ದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ದೇಶದ ಜನರ ಆರೋಗ್ಯ ವೃದ್ಧಿಗೆ ‘ಫಿಟ್ ಇಂಡಿಯಾ’ ಎಂಬ ಕಾರ್ಯಕ್ರಮ ಆರಂಭಿಸಲು ಮುಂದಾಗಿದೆ. ಈ ಕುರಿತ ವಿವರಗಳನ್ನು ಆ.29ರಂದು ನೀಡುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ.