ಅಮೇಥಿ(ಮಾ.03): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸ್ವಕ್ಷೇತ್ರ ಅಮೇಥಿಯಲ್ಲಿ ಕಲಾಶ್ನಿಕೋವ ರೈಫಲ್ಸ್ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.

ಕಲಾಶ್ನಿಕೋವ್ ರೈಫಲ್ಸ್‌ ಘಟಕದಲ್ಲಿ ಅತ್ಯಾಧುನಿಕ ಎಕೆ-203 ರೈಫಲ್‌ಗಳನ್ನು ಉತ್ಪಾದಿಸಲಾಗುತ್ತಿದ್ದು, ಭಯೋತ್ಪಾದಕರು ಮತ್ತು ಮಾವೋವಾದಿಗಳ ವಿರುದ್ಧ ಹೋರಾಡಲು ನಮ್ಮ ಯೋಧರಿಗೆ ಹೊಸ ಶಕ್ತಿ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಕಾಂಗ್ರೆಸ್ ಭದ್ರಕೋಟೆಯಲ್ಲೇ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡ ಮೋದಿ, 2007ರಲ್ಲೇ ಈ ಕಾರ್ಖಾನೆಗೆ ಶಂಕುಸ್ಥಾಪನೆ ಮಾಡಿ 2010ರಲ್ಲಿ ಕಾಮಗಾರಿ ಆರಂಭವಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಅಂದಿನ ಸರ್ಕಾರ ಈ ಕಾರ್ಖಾನೆಯಲ್ಲಿ ಯಾವ ಬಗೆಯ ಆಯುಧವನ್ನು ಉತ್ಪಾದಿಸಬೇಕೆಂದೇ ನಿರ್ಧರಿಸಿರಲಿಲ್ಲ ಎಂದು ಟೀಕಿಸಿದರು. 

ಭಾರತ ಮತ್ತು ರಷ್ಯಾದ ಜಂಟಿ ಸಹಭಾಗಿತ್ವದಲ್ಲಿ ಕೋರ್ವಾ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ಈ ಆಯುಧವನ್ನು ತಯಾರಿಸಲಾಗುತ್ತಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಆತ್ಮೀಯ ಮಿತ್ರ ಎಂದು ಕರೆದ ಪ್ರಧಾನಿ ಮೋದಿ, ಪುಟಿನ್ ಅವರ ಸಹಕಾರದಿಂದ ಅತಿ ಶೀಘ್ರವಾಗಿ ಈ ಜಂಟಿ ಸಹಭಾಗಿತ್ವದ ಉದ್ಯಮ ಸಾಧ್ಯವಾಯಿತು ಎಂದು ಕೃತಜ್ಞತೆ ಸಲ್ಲಿಸಿದರು.