Asianet Suvarna News Asianet Suvarna News

ದೇಶದ 50 ಕೋಟಿ ಕುಟುಂಬಕ್ಕೆ 5 ಲಕ್ಷ ಚಿಕಿತ್ಸಾ ವೆಚ್ಚ

ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಆಯುಷ್ಮಾನ್ ಭಾರತ ಯೋಜನೆಯು ವಿಶ್ವದಲ್ಲೇ ಅತಿ ದೊಡ್ಡ ಸರ್ಕಾರಿ ಪ್ರಾಯೋಜಿತ ಆರೋಗ್ಯ ಯೋಜನೆಯಾಗಿದೆ. ಕೆನಡಾ, ಮೆಕ್ಸಿಕೋ ಮತ್ತು ಅಮೆರಿಕವನ್ನು ಸೇರಿಸಿದರೆ ಒಟ್ಟಿಗೆ ಎಷ್ಟು ಜನಸಂಖ್ಯೆಯಾಗುತ್ತದೋ ಅಷ್ಟು ಸಂಖ್ಯೆಯ ಫಲಾನುಭವಿಗಳು ಈ ಯೋಜನೆಯಲ್ಲಿ ಸೇರ್ಪಡೆಯಾಗಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ. 
 

PM Modi inaugurated Modicare scheme
Author
Bengaluru, First Published Sep 24, 2018, 8:34 AM IST

ರಾಂಚಿ: ಪ್ರಧಾನಿ ನರೇಂದ್ರ ಮೋದಿ ಅವರು ‘ಮೋದಿ ಕೇರ್’ ಎಂದೇ ಜನಜನಿತವಾಗಿರುವ ಭಾನುವಾರ ಆಯುಷ್ಮಾನ್ ಭಾರತ ಯೋಜನೆಯನ್ನು ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಲೋಕಾರ್ಪಣೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು, ‘ಬಡವರ ಸೇವೆಗೈಯುವಲ್ಲಿ ಇದೊಂದು ಭಾರಿ ಬದಲಾವಣೆ ತರುವ ಕ್ರಮ’ ಎಂದು ಶ್ಲಾಘಿಸಿದರು. 

‘ಆಯುಷ್ಮಾನ್ ಭಾರತ ಯೋಜನೆಯು ವಿಶ್ವದಲ್ಲೇ ಅತಿ ದೊಡ್ಡ ಸರ್ಕಾರಿ ಪ್ರಾಯೋಜಿತ ಆರೋಗ್ಯ ಯೋಜನೆಯಾಗಿದೆ. ಕೆನಡಾ, ಮೆಕ್ಸಿಕೋ ಮತ್ತು ಅಮೆರಿಕವನ್ನು ಸೇರಿಸಿದರೆ ಒಟ್ಟಿಗೆ ಎಷ್ಟು ಜನಸಂಖ್ಯೆಯಾಗುತ್ತದೋ ಅಷ್ಟು ಸಂಖ್ಯೆಯ ಫಲಾನುಭವಿಗಳು ಈ ಯೋಜನೆಯಲ್ಲಿ ಸೇರ್ಪಡೆಯಾಗಿದ್ದಾರೆ’ ಎಂದರು. 

 ಈ ಸಂದರ್ಭದಲ್ಲೂ ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಳ್ಳುವುದನ್ನು ಮರೆಯದ ಮೋದಿ, ‘ಹಿಂದಿನ ಸರ್ಕಾರಗಳು ಮತ ಬ್ಯಾಂಕ್  ರಾಜಕೀಯದಲ್ಲಿ ನಿರತವಾಗಿದ್ದವು. ಅವು ಬಡವರ ಸಬಲೀಕರಣವನ್ನು ಮರೆತಿದ್ದವು. ಈಗ ಬಿಜೆಪಿ ಸರ್ಕಾರವು ಬಡವರ ಸಬಲೀಕರಣದಲ್ಲಿ ನಿರತವಾಗಿದೆ’ ಎಂದರು.

ಇನ್ನು ಆಯುಷ್ಮಾನ್ ಯೋಜನೆಯಲ್ಲಿನ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದ ಪ್ರಧಾನಿ, ‘ಸುಮಾರು 1300 ವ್ಯಾಧಿಗಳು ಈ ಯೋಜನೆಯ ಅಡಿ  ಬರುತ್ತವೆ. ಹೃದಯ ಕಾಯಿಲೆ, ಮೂತ್ರಪಿಂಡ ಕಾಯಿಲೆ, ಸಕ್ಕರೆ ಕಾಯಿಲೆ, ಪಿತ್ತಕೋಶ ಕಾಯಿಲೆಗಳು ಆಯುಷ್ಮಾನ್ ಯೋಜನೆಯ ಅಡಿ ಬರುತ್ತವೆ’ ಎಂದು ವಿವರಿಸಿದರು. ಈ ಯೋಜನೆಯನ್ನು ಮೋದಿ ಕೇರ್ ಎಂದು ಕರೆಯುತ್ತಾರೆ. ಆದರೆ ಬಡವರ ಸೇವೆ ಮಾಡಲು ನನಗೆ ಇದೊಂದು ಉತ್ತಮ ಅವಕಾಶ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆಯ ಲಾಭ ದೊರಕುತ್ತದೆ. 

ಈ ಯೋಜನೆಯ ಜಾರಿಗೆ ಸಹಕರಿಸಿದ ಅಧಿಕಾರಿಗಳಿಗೆ 50 ಕೋಟಿ ಬಡವರ ಆಶೀರ್ವಾದ ಲಭಿಸಲಿದೆ ಎಂದರು. ಶ್ರೀಮಂತರಿಗೆ ದೊರಕುವ ಎಲ್ಲ ಆರೋಗ್ಯ ಸವಲತ್ತುಗಳು ಬಡವರಿಗೂ ದೊರಕಬೇಕು ಎಂಬ ಇರಾದೆ ತಮ್ಮದು. ಈ ಯೋಜನೆಯು ಯಾವುದೇ ಜಾತಿ ಆಧರಿತವಾಗಿಲ್ಲ. ಎಲ್ಲ ಜಾತಿ-ವರ್ಗದವರಿಗೆ ಇದರ ಸವಲತ್ತು ದೊರೆಯುತ್ತದೆ. ವಿಶ್ವದಲ್ಲೇ ಮಾದರಿ ಆರೋಗ್ಯ ಯೋಜನೆಯಾಗಿ ಇದು ಹೊರಹೊಮ್ಮಲಿದೆ ಎಂದು ವಿವರಿಸಿದರು. ಆಯುಷ್ಮಾನ್ ಭಾರತದ ಅಡಿ ಬರಲು ಯಾರೂ ನೋಂದಣಿ ಮಾಡಿಕೊಳ್ಳಬೇಕಿಲ್ಲ. ಇದರ ಸವಲತ್ತು ಲಭಿಸುವಂತಾಗಲು ಹೆಲ್ತ್ ಕಾರ್ಡ್ ನೀಡಲಾಗುತ್ತದೆ. ಯೋಜನೆಯ ಹೆಚ್ಚಿನ ಮಾಹಿತಿ ಪಡೆಯಲು ಟೋಲ್ ಫ್ರೀ ಸಂಖ್ಯೆಯನ್ನು ಕೊಡಲಾಗುತ್ತದೆ ಎಂದು ಅವರು ವಿವರಿಸಿದರು.

Follow Us:
Download App:
  • android
  • ios