Asianet Suvarna News Asianet Suvarna News

ಸ್ಕೀಯಿಂಗ್’ನಲ್ಲಿ ಇತಿಹಾಸ ಬರೆದ ಅಂಚಲ್ ತಂದೆಯಿಂದ ಮೋದಿಗೆ ಪ್ಯಾರಾಗ್ಲೈಡಿಂಗ್ ಪಾಠ

ಸ್ಕೀಯಿಂಗ್‌ನಲ್ಲಿ ಮೊದಲ ಅಂತಾರಾಷ್ಟ್ರೀಯ ಪದಕ ಗೆದ್ದು ಇತಿಹಾಸ ಬರೆದ, ಹಿಮಾಚಲ ಪ್ರದೇಶದ ಅಂಚಲ್ ಠಾಕೂರ್‌ರ ತಂದೆ ರೋಶನ್ ಲಾಲ್ ಠಾಕೂರ್, ಪ್ರಧಾನಿ ನರೇಂದ್ರ ಮೋದಿಗೆ ಪ್ಯಾರಾಗ್ಲೈಡಿಂಗ್ ಕಲಿಸಿದ್ದರಂತೆ.

PM Modi Had Passion For Paragliding And Guess Who Taught Him

ಮನಾಲಿ (ಜ.12): ಸ್ಕೀಯಿಂಗ್‌ನಲ್ಲಿ ಮೊದಲ ಅಂತಾರಾಷ್ಟ್ರೀಯ ಪದಕ ಗೆದ್ದು ಇತಿಹಾಸ ಬರೆದ, ಹಿಮಾಚಲ ಪ್ರದೇಶದ ಅಂಚಲ್ ಠಾಕೂರ್‌ರ ತಂದೆ ರೋಶನ್ ಲಾಲ್ ಠಾಕೂರ್, ಪ್ರಧಾನಿ ನರೇಂದ್ರ ಮೋದಿಗೆ ಪ್ಯಾರಾಗ್ಲೈಡಿಂಗ್ ಕಲಿಸಿದ್ದರಂತೆ.ಕಳೆದ ನವೆಂಬರ್‌ನಲ್ಲಿ ಹಿಮಾಚಲದಲ್ಲಿ ಚುನಾವಣಾ ಪ್ರಚಾರ ಭಾಷಣದ ವೇಳೆ, ಮೋದಿ ತಾವು 2 ದಶಕಗಳ ಹಿಂದೆ ರಾಜ್ಯದ ಸೊಲಾಂಗ್’ಗೆ ಭೇಟಿ ನೀಡಿದ್ದ ವೇಳೆ ಪ್ಯಾರಾಗ್ಲೈಡಿಂಗ್ ಕಲಿತಿದ್ದಾಗಿ  ಹೇಳಿದ್ದರು.

ಬುಧವಾರ ಅಂಚಲ್‌ರ ಸಾಧನೆಯನ್ನು ಟ್ವೀಟರ್ ನಲ್ಲಿ ಮೋದಿ ಕೊಂಡಾಡಿದ ಬಳಿಕ, ಪ್ರತಿಕ್ರಿಯಿಸಿರುವ ರೋಶನ್ ಲಾಲ್ ‘ಮೋದಿಯವರಿಗೆ ಅಂಚಲ್ ನನ್ನ ಮಗಳು ಎಂದು ಬಹುಶಃ ತಿಳಿದಿಲ್ಲ ಎನಿಸುತ್ತದೆ. 2 ತಿಂಗಳ ಹಿಂದೆ ಅವರು ಪ್ರಚಾರಕ್ಕಾಗಿ ಆಗಮಿಸಿದ್ದಾಗ ನಾನು ಸಹ ಸಮಾರಂಭದಲ್ಲಿ ಪಾಲ್ಗೊಂಡಿದ್ದೆ. ಆದರೆ ಅವರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ.

ನನ್ನ ಮಗಳ ಸಾಧನೆಯ ವಿಷಯ ಪ್ರಧಾನ ಮಂತ್ರಿ ಯವರಿಗೂ ತಲುಪಿದೆ ಎನ್ನುವುದನ್ನು ನೋಡಿ ಬಹಳ ಸಂತೋಷವಾಗುತ್ತಿದೆ’ ಎಂದು ಹೇಳಿದ್ದಾರೆ. ರೋಶಲ್ ಲಾಲ್‌ರ ಪುತ್ರಿ ಅಂಚಲ್, ಟರ್ಕಿಯಲ್ಲಿ ನಡೆದ ಆಲ್ಪೈನ್ ಎಡ್ಜೆರ್ 3200 ಕಪ್‌ನಲ್ಲಿ ಕಂಚಿನ ಪದಕ ಗೆದ್ದು ಇತಿಹಾಸ ಬರೆದಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಪ್ರಧಾನಿ ಮೋದಿ ‘ಅಂಚಲ್‌ರ ಸಾಧನೆ ಇಡೀ ದೇಶ ಸಂಭ್ರಮಿಸುವಂತೆ ಮಾಡಿದೆ. ಇತಿಹಾಸ ಬರೆಯುವುದರೊಂದಿಗೆ ಅನೇಕರನ್ನು ಸ್ಕೀಯಿಂಗ್‌ನತ್ತ ಸೆಳೆದಿದ್ದಾರೆ. ಅವರ ಸಾಧನೆ ಹೀಗೆ ಮುಂದುವರಿಯಲಿ’ ಎಂದು ಟ್ವೀಟ್ ಮಾಡಿದ್ದರು.

1997 ರಲ್ಲಿ ಮೋದಿಗೆ ತರಬೇತಿ: ಅಂಚಲ್‌ರ ತಂದೆ ನಡೆಸುತ್ತಿದ್ದ ಪ್ಯಾರಾಗ್ಲೈಡಿಂಗ್ ಶಾಲೆಗೆ ಮೋದಿ 1997 ರಲ್ಲಿ ಭೇಟಿ ನೀಡಿದ್ದರಂತೆ. ಆಗ ಅವರು ಹಿಮಾಚಲದ ಬಿಜೆಪಿ ಉಸ್ತುವಾರಿಯಾಗಿದ್ದರು. ಮಳೆ ಯಿಂದಾಗಿ ನೆಲ ಒದ್ದೆಯಾಗಿದ್ದರೂ, ಹಠ ಹಿಡಿದಿದ್ದ ಮೋದಿ, ಠಾಕೂರ್‌ರಿಂದ ಪ್ಯಾರಾಗ್ಲೈಡಿಂಗ್ ಹೇಳಿಸಿ ಕೊಂಡು ಪ್ರಯತ್ನಿಸಿದ್ದರಂತೆ. ತಾವು ಮೋದಿಗೆ ಪ್ಯಾರಾಗ್ಲೈಡಿಂಗ್ ಕಲಿಸುವ ವೇಳೆ ತೆಗೆದಿದ್ದ ಫೋಟೋಗಳನ್ನು ರೋಶನ್ ಲಾಲ್ ಪ್ರದರ್ಶಿಸಿದ್ದಾರೆ.

ತಮ್ಮ ತಂದೆ ಹಾಗೂ ಮೋದಿ ಅವರ ಒಡನಾಟದ ಬಗ್ಗೆ ಪ್ರತಿಕ್ರಿಯಿಸಿರುವ ಅಂಚಲ್ ‘ನನ್ನ ತಂದೆಗೆ ಮೋದಿಯವರ ಪರಿಚಯವಿದೆ ಎಂದು ಗೊತ್ತು. ಆದರೆ ಅವರನ್ನು ಭೇಟಿಯಾಗಿಲ್ಲ. ಪ್ರಧಾನಿ ನನ್ನ ಬಗ್ಗೆ ಟ್ವೀಟ್ ಮಾಡುತ್ತಾರೆ ಎಂದು ಕೊಂಡಿರಲಿಲ್ಲ. ಅವರ ಟ್ವೀಟ್‌ನಿಂದ ಕ್ರೀಡೆ ಬಗ್ಗೆ ಹೆಚ್ಚಿನ ಜನಕ್ಕೆ ತಿಳಿಯಲಿದೆ. ಕ್ರೀಡೆ ಬಗ್ಗೆ ಉತ್ಸಾಹ, ಆಸಕ್ತಿ ಇರುವುವರಿಗೆ ಮೋದಿ ಅವರ ಟ್ವೀಟ್ ಉತ್ತೇಜನ ನೀಡಲಿದೆ. ನನ್ನ ಪದಕ ಸಾಧನೆ ಅನೇಕರಿಗೆ ಸ್ಫೂರ್ತಿಯಾಗಬೇಕು ಎನ್ನುವುದು ನನ್ನ ಆಸೆ’ ಎಂದು ಹೇಳಿದ್ದಾರೆ.

Follow Us:
Download App:
  • android
  • ios