ನವದೆಹಲಿ:  ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ವಿದೇಶ ಪ್ರಯಾಣಕ್ಕೆ ವ್ಯಯಿಸಿರುವ ಮೊತ್ತ ಬರೋಬ್ಬರಿ 2000 ಕೋಟಿ ರೂ.! ಖುದ್ದು ಸರ್ಕಾರವೇ ಈ ವಿಷಯವನ್ನಿದೀಗ ಬಹಿರಂಗಪಡಿಸಿದೆ.

ರಾಜ್ಯಸಭಾ ಸದಸ್ಯ ವಿನಯ್ ವಿಶ್ವಂ ಕೇಳಿರುವ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ವಿದೇಶಾಂಗ ಇಲಾಖೆ ರಾಜ್ಯ ಸಚಿವ ವಿ.ಕೆ.ಸಿಂಗ್, ಈ ಮಾಹಿತಿಯನ್ನು ಸದನದ ಮುಂದಿಟ್ಟಿದ್ದಾರೆ.

15 ಜೂನ್ 2014ರಿಂದ 03 ಡಿಸೆಂಬರ್ 2018ರ ವರೆಗಿನ ಅವಧಿಯಲ್ಲಿ ಪ್ರಧಾನಿ ವಿದೇಶ ಪ್ರವಾಸಕ್ಕೆ ಸರ್ಕಾರದ ಬೊಕ್ಕಸದಿಂದ 2000 ಕೋಟಿ ರೂ.ನ್ನು ವ್ಯಯಿಸಲಾಗಿದೆ ಎಂದು ವಿ.ಕೆ.ಸಿಂಗ್ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ಮೋದಿ ಸೈಲೆಂಟ್ ಸಾಧನೆ: ದುಪ್ಪಟ್ಟಾಯ್ತು ಕೈಗಾರಿಕಾ ಉತ್ಪಾದನೆ!

ಏರ್ ಕ್ರಾಫ್ಟ್ ನಿರ್ವಹಣೆಗೆಂದೇ 1583.18 ಕೋಟಿ, ಚಾರ್ಟರ್ಡ್ ಫ್ಲೈಟ್ಸ್‌ಗಳಿಗಾಗಿ 429.28 ಕೋಟಿ, ಸುರಕ್ಷಿತ ಹಾಟ್‌ಲೈನ್ ಸೌಲಭ್ಯಕ್ಕಾಗಿ 9.12 ಕೋಟಿ ರೂ. [2014-2017] ಖರ್ಚು ಮಾಡಲಾಗಿದೆ ಎಂದು ಅವರು ಲೆಕ್ಕ ನೀಡಿದ್ದಾರೆ.  

ಕಳೆದ ಜುಲೈಯಲ್ಲಿ ನಡೆದ ಅಧಿವೇಶನದಲ್ಲಿ, ಏರ್ ಕ್ರಾಫ್ಟ್ ನಿರ್ವಹಣೆ, ಚಾರ್ಟರ್ಡ್ ಫ್ಲೈಟ್ಸ್ ಮತ್ತು ಹಾಟ್ ಲೈನ್ ಸೌಲಭ್ಯಗಳಿಗೆ 1,484 ಕೋಟಿ ಖರ್ಚಾಗಿದೆ ಎಂದು ವಿ.ಕೆ. ಸಿಂಗ್ ಸಂಸತ್ತಿಗೆ ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಪ್ರಧಾನಿ ಮೋದಿ ಬಗ್ಗೆ ಪೇಜಾವರ ಶ್ರೀ ಅತೃಪ್ತಿ

2014ರಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದು ಪ್ರಧಾನಿಯಾದ ನರೇಂದ್ರ ಮೋದಿ ಈವರೆಗೆ ಸುಮಾರು 90 ದೇಶಗಳಿಗೆ ಭೇಟಿ ನೀಡಿದ್ದಾರೆ.

ಕಳೆದ ನಾಲ್ಕುವರೆ ವರ್ಷಗಳಲ್ಲಿ ಪ್ರಧಾನಿ ಮೋದಿ, ಡೊನಾಲ್ಡ್ ಟ್ರಂಪ್, ಶೀ ಜಿನ್ ಪಿಂಗ್, ಶಿಂಜೋ ಅಬೆ ಮುಂತಾದ ಜಾಗತಿಕ ನಾಯಕರನ್ನು ಹಲವಾರು ಬಾರಿ ಭೇಟಿಯಾಗಿದ್ದಾರೆ.