ಉಡುಪಿ :  ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಜನರಿಗೆ ಆರಂಭದಲ್ಲಿ ಇದ್ದ ನಿರೀಕ್ಷೆ ಈಗ ಉಳಿದಿಲ್ಲ, ಜನರು ನಿರೀಕ್ಷಿದಷ್ಟುಅವರಿಂದ ದೇಶದ ಕೆಲಸ ಮಾಡುವುದಕ್ಕೆ ಸಾಧ್ಯವಾಗಿಲ್ಲ ಎಂದು ಪೇಜಾವರ ಶ್ರೀಗಳು ನಿರಾಸೆ ವ್ಯಕ್ತಪಡಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೋದಿ ಅವರು ದೇಶದ ಆರ್ಥಿಕ ಸುಧಾರಣೆ ಮತ್ತು ರಾಮಮಂದಿರ ನಿರ್ಮಾಣಕ್ಕೆ ಆದ್ಯತೆ ನೀಡಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು.

ಅವರು ನೋಟು ರದ್ದು ಮಾಡುವಂತಹ ದಿಟ್ಟನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇದರಿಂದ ಕಪ್ಪು ಹಣ, ಭ್ರಷ್ಟಾಚಾರ ನಿಯಂತ್ರಣಕ್ಕೆ ಬಂದಿದ್ದರೂ, ಅದರಿಂದ ಜನಸಾಮಾನ್ಯರಿಗೆ ಲಾಭವಾಗಿಲ್ಲ ಎಂದು ಶ್ರೀಗಳು ಹೇಳಿದರು.

ಎಚ್ಚರಿಕೆ ಗಂಟೆ:  ಪಂಚರಾಜ್ಯ ಚುನಾವಣೆ ಫಲಿತಾಂಶ ಮೋದಿ ಅವರಿಗೆ ಎಚ್ಚರಿಕೆ ಕರೆಗಂಟೆ. ಇನ್ನಾದರೂ ಅವರು ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಘೋಷಿಸಿದರೆ ಮುಂದಿನ ಚುನಾವಣೆಯಲ್ಲಿ ಹಿಂದೂ ಮತದಾರರ ಉತ್ಸಾಹವನ್ನು ಹೆಚ್ಚಿಸಬಹುದು. ಆದರೆ ಎನ್‌ಡಿಎ ಮೈತ್ರಿಕೂಟದಲ್ಲೇ ರಾಮಮಂದಿರ ನಿರ್ಮಾಣಕ್ಕೆ ವಿರೋಧ ಬರಬಹುದು, ಆದ್ದರಿಂದ ಮೈತ್ರಿಕೂಟವನ್ನು ಉಳಿಸಿಕೊಳ್ಳುವುದಕ್ಕಾಗಿ ಮೋದಿ ಮಂದಿರ ನಿರ್ಮಾಣ ನಿರ್ಧಾರದಿಂದ ಹಿಂದೆ ಸರಿಯಲೂಬಹುದು ಎಂದು ಶ್ರೀಗಳು ಪತ್ರಕರ್ತರ ಪ್ರಶ್ನೆಯೊಂದಕ್ಕೆ ವಿಶ್ಲೇಷಿಸಿದರು.

ಕೇಂದ್ರದಲ್ಲಿ ಇನ್ನೊಮ್ಮೆ ಅಧಿಕಾರ ಪಡೆಯಲು ಬಿಜೆಪಿ ತನ್ನ ಜೊತೆಗೆ ಸಮಾನ ವಿಚಾರಧಾರೆಯುಳ್ಳ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಳ್ಳಬೇಕು, ಜೊತೆಗೆ ಚಂದ್ರಬಾಬು ನಾಯ್ಡು ಅವರಂತಹವರೊಂದಿಗೆ ವಿರೋಧ ಸರಿ ಮಾಡಿಕೊಳ್ಳಬೇಕು, ಇಲ್ಲದಿದ್ದರೆ ಬಿಜೆಪಿಗೆ ದೊಡ್ಡ ನಷ್ಟವಾಗುತ್ತದೆ, ಯಾಕೆಂದರೆ ಅವರು ಬಿಜೆಪಿಯನ್ನು ಬಗ್ಗುಬಡಿಯಲು ಹಠ ಹಿಡಿದಿದ್ದಾರೆ. ಈ ಸಂದರ್ಭದಲ್ಲಿ ವಾಜಪೇಯಿ ಅವರು ಅನುಸರಿಸುತ್ತಿದ್ದ ಮೃದು ನೀತಿಯನ್ನು ಪ್ರಧಾನಿ ಮೋದಿ ಅನುಸರಿಸಬೇಕು ಎಂದು ಪೇಜಾವರ ಶ್ರೀಗಳು ಹೇಳಿದರು.