Asianet Suvarna News Asianet Suvarna News

ಪ್ರಧಾನಿ ಮೋದಿಯಿಂದ ಐನ್‌ಸ್ಟೀನ್‌ ಚಾಲೆಂಜ್‌!

ಪ್ರಧಾನಿ ಮೋದಿಯಿಂದ ಐನ್‌ಸ್ಟೀನ್‌ ಚಾಲೆಂಜ್‌| ಗಾಂಧೀ ತತ್ವಗಳನ್ನು ಮುಂದಿನ ಪೀಳಿಗೆಗೆ ನವೀನ ರೀತಿಯಲ್ಲಿ ಹರಡಲು ಕರೆ| ಗಾಂಧಿ ದಾರಿ ದೀಪ, ಕೋಟ್ಯಂತರ ಜನರಿಗೆ ಈಗಲೂ ಧೈರ್ಯ ತುಂಬುತ್ತಿದ್ದಾರೆ| ಅಮೆರಿಕದ ‘ನ್ಯೂಯಾರ್ಕ್ ಟೈಮ್ಸ್‌’ಗೆ ಮೋದಿ ಲೇಖನ

PM Einstein Challenge In Tribute To Mahatma Gandhi
Author
Bangalore, First Published Oct 3, 2019, 10:46 AM IST

ನ್ಯೂಯಾರ್ಕ್[ಅ.03]: ಅಹಿಂಸಾವಾದದ ಮೂಲಕ ಜಗದ್ವಿಖ್ಯಾತರಾಗಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಪ್ರತಿಷ್ಠಿತ ನ್ಯೂಯಾರ್ಕ್ ಟೈಮ್ಸ್‌ ಪತ್ರಿಕೆಗೆ ಲೇಖನವೊಂದನ್ನು ಬರೆದು ವಿಶಿಷ್ಟವಾಗಿ ನಮನ ಸಲ್ಲಿಸಿದ್ದಾರೆ. ಗಾಂಧೀಜಿ ಅವರೊಬ್ಬ ಅತ್ಯುತ್ತಮ ಶಿಕ್ಷಕ. ದಾರಿ ದೀಪ. ಜಾಗತಿಕವಾಗಿ ಕೋಟ್ಯಂತರ ಜನರಿಗೆ ಈಗಲೂ ಅವರು ಧೈರ್ಯ ತುಂಬುತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಗಾಂಧೀ ಚಿಂತನೆಗಳನ್ನು ಮುಂದಿನ ತಲೆಮಾರಿಗೆ ಹರಡಲು ‘ಐನ್‌ಸ್ಟೀನ್‌ ಚಾಲೆಂಜ್‌’ ಎಂಬ ಹೊಸ ಆಂದೋಲನಕ್ಕೆ ಕರೆ ಕೊಟ್ಟಿದ್ದಾರೆ.

‘ಭಾರತ ಹಾಗೂ ವಿಶ್ವಕ್ಕೆ ಗಾಂಧಿ ಏಕೆ ಬೇಕು?’ ಎಂಬ ತಲೆಬರಹದಡಿ ಈ ಲೇಖನ ಪ್ರಕಟವಾಗಿದ್ದು, ಮಾರ್ಟಿನ್‌ ಲೂಥರ್‌ ಕಿಂಗ್‌ ಜೂನಿಯರ್‌ ಹಾಗೂ ನೆಲ್ಸನ್‌ ಮಂಡೇಲಾ ಅವರಂತಹ ಮಹಾನ್‌ ನಾಯಕರಿಗೆ ಗಾಂಧಿ ಪ್ರೇರಣೆಯಾಗಿದ್ದರು ಎಂದು ಮೋದಿ ಬರೆದಿದ್ದಾರೆ.

ಗಾಂಧೀಜಿ ಅವರು ಮಾನವ ಸಮಾಜದ ಮಹಾನ್‌ ವೈರುಧ್ಯಗಳಿಗೆ ಸೇತುವೆಯಾಗಿದ್ದರು. ರಾಷ್ಟ್ರೀಯವಾದಕ್ಕೆ ಒತ್ತು ನೀಡಿದ್ದರು. ರಾಷ್ಟ್ರೀಯವಾದ ವಾಸ್ತವವಾದಾಗ ಮಾತ್ರ ಅಂತಾರಾಷ್ಟ್ರೀಯವಾದ ಸಾಧ್ಯ. ಭಾರತ ರಾಷ್ಟ್ರೀಯವಾದ ಎಂದರೆ, ಅದು ಎಂದಿಗೂ ಸಂಕುಚಿತವಲ್ಲ ಅಥವಾ ಪ್ರತ್ಯೇಕವಾದುದಲ್ಲ. ಬದಲಿಗೆ ಮಾನವೀಯತೆ ಸೇವೆಗೆ ಕೆಲಸ ಮಾಡುವಂತಹದ್ದು ಎಂದು 1925ರಲ್ಲಿ ಬಣ್ಣಿಸಿದ್ದರು ಎಂದು ಮೋದಿ ಸ್ಮರಿಸಿದ್ದಾರೆ.

ಗಾಂಧೀಜಿ ಕುರಿತು ಪ್ರಸಿದ್ಧ ವಿಜ್ಞಾನಿ ಐನ್‌ಸ್ಟೀನ್‌ ಅವರು ಆಡಿದ್ದ ‘ಮೂಳೆ, ಮಾಂಸ ತುಂಬಿಕೊಂಡಿದ್ದ ಗಾಂಧಿ ಎಂಬ ವ್ಯಕ್ತಿ ಭೂಮಿಯ ಮೇಲೆ ನಡೆದಾಡಿದ್ದರು ಎಂಬುದನ್ನು ಭವಿಷ್ಯದ ಪೀಳಿಗೆ ನಂಬಲು ಕಷ್ಟವಾದೀತು’ ಎಂಬ ಐನ್‌ಸ್ಟೀನ್‌ ಅವರ ಮಾತುಗಳನ್ನು ಲೇಖನದಲ್ಲಿ ಪ್ರಸ್ತಾಪಿಸಿರುವ ಮೋದಿ, ಮುಂದಿನ ತಲೆಮಾರು ಕೂಡಾ ಗಾಂಧೀಜಿ ಅವರ ಸಿದ್ಧಾಂತಗಳನ್ನು ನೆನಪಿಸಿಕೊಳ್ಳುವುದನ್ನು ನಾವು ಖಚಿತಪಡಿಸಿಕೊಳ್ಳುವುದಾದರೂ ಹೇಗೆ? ಇದಕ್ಕಾಗಿಯೇ ನಾನು ಚಿಂತಕರು, ಉದ್ಯಮಿ ಮತ್ತು ತಂತ್ರಜ್ಞಾನ ನಾಯಕರಿಗೆ ಮುಂದೆ ಬಂದು ವಿನೂತನ ವಿಧಾನಗಳ ಮೂಲಕ ಗಾಂಧೀ ತತ್ವಗಳನ್ನು ಪಸರಿಸುವ ಕೆಲಸ ಮಾಡಿ ಎಂದು ಐನ್‌ಸ್ಟೀನ್‌ ಚಾಲೆಂಜ್‌ ನೀಡುತ್ತಿದ್ದೇನೆ ಎಂದು ಕರೆ ಕೊಟ್ಟಿದ್ದಾರೆ.

Follow Us:
Download App:
  • android
  • ios