ಬೆಂಗಳೂರು (ಮಾ. 13): ಎಲೆಕ್ಟ್ರಿಕ್‌ ಬಸ್‌ ವಿಚಾರದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ತೋರಿದ ವಿಳಂಬ ಧೋರಣೆ ಇದೀಗ ಅದಕ್ಕೆ ಮುಳುವಾಗಿದೆ. ರಾಜಧಾನಿಯಲ್ಲಿ ಎಲೆಕ್ಟ್ರಿಕ್‌ ಬಸ್‌ ಸಂಚಾರದ ಕನಸು ಸದ್ಯಕ್ಕಂತೂ ಈಡೇರುವ ಲಕ್ಷಣ ಕ್ಷೀಣಿಸಿದೆ.

ಬಿಎಂಟಿಸಿ ನಿಗದಿತ ಅವಧಿಯಲ್ಲಿ ಎಲೆಕ್ಟ್ರಿಕ್‌ ಬಸ್‌ ಯೋಜನೆ ಅನುಷ್ಠಾನಗೊಳಿಸುವಲ್ಲಿ ವಿಫಲವಾಗಿರುವುದರಿಂದ ಕೇಂದ್ರ ಬೃಹತ್‌ ಕೈಗಾರಿಕಾ ಇಲಾಖೆ ಫೇಮ್‌ ಯೋಜನೆಯಡಿ 80 ಕೋಟಿ ರು. ಸಹಾಯಧನ ಬಳಸಲು ಹೆಚ್ಚುವರಿ ಕಾಲಾವಕಾಶ ನೀಡಲು ಸಾಧ್ಯವಿಲ್ಲವೆಂದು ರಾಜ್ಯ ಕೈಗಾರಿಕಾ ಅಭಿವೃದ್ಧಿ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದೆ.

ಜೊತೆಗೆ ಬಿಎಂಟಿಸಿಗೆ 80 ಎಲೆಕ್ಟ್ರಿಕ್‌ ಬಸ್‌ ಖರೀದಿಗೆ ಈ ಹಿಂದೆ ಫೇಮ್‌ ಯೋಜನೆಯಡಿ ಮೊದಲ ಹಂತದಲ್ಲಿ ನೀಡಿದ್ದ ಶೇ.20ರಷ್ಟು ಪ್ರೋತ್ಸಾಹಧನ (14.95 ಕೋಟಿ ರು.) ಹಾಗೂ ಚಾರ್ಜಿಂಗ್‌ ಘಟಕ ಸ್ಥಾಪನೆಗೆ ನೀಡಲಾಗಿದ್ದ ಶೇ.50ರಷ್ಟುಪ್ರೋತ್ಸಾಹಧನ (3.73 ಕೋಟಿ ರು.)ಹಣವನ್ನು ಕೂಡಲೇ ಬಡ್ಡಿ ಸಹಿತ ಹಿಂದಿರುಗಿಸುವಂತೆ ಪತ್ರದಲ್ಲಿ ಉಲ್ಲೇಖಿಸಿದೆ.

ಫೇಮ್‌ ಯೋಜನೆ ಮೊದಲ ಹಂತ 2019ರ ಮಾಚ್‌ರ್‍ಗೆ ಕೊನೆಗೊಳ್ಳಲಿದೆ. ಹಾಗಾಗಿ ಫೆ.28ರೊಳಗೆ ಎಲೆಕ್ಟ್ರಿಕ್‌ ಬಸ್‌ ಪೂರೈಸುವ ಬಿಡ್ಡರ್‌ಗೆ ಬಸ್‌ ಪೂರೈಸಲು ಕಾರ್ಯಾದೇಶ ನೀಡುವಂತೆ ಕೇಂದ್ರ ಬೃಹತ್‌ ಕೈಗಾರಿಕಾ ಇಲಾಖೆ ಫೆಬ್ರವರಿ ಮೊದಲ ವಾರ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು.

ಈ ನಡುವೆ ಬಿಎಂಟಿಸಿ ಗುತ್ತಿಗೆ ಆಧಾರದಡಿ ಎಲೆಕ್ಟ್ರಿಕ್‌ ಬಸ್‌ ಪಡೆಯುವ ಯೋಜನೆ ರದ್ದುಗೊಳಿಸಿ, ನಿಗಮದಿಂದಲೇ ಬಸ್‌ ಖರೀದಿಸಲು ಮಂಡಳಿ ಸಭೆಯಲ್ಲಿ ನಿರ್ಧರಿಸಿತ್ತು. ಇದರ ಬೆನ್ನಲ್ಲೇ ಫೇಮ್‌ ಯೋಜನೆಯ ಸಹಾಯಧನ ಬಳಕೆಗೆ ಆರು ತಿಂಗಳ ಹೆಚ್ಚುವರಿ ಕಾಲಾವಕಾಶ ಕೋರಿ ಕೇಂದ್ರದ ಬೃಹತ್‌ ಕೈಗಾರಿಕೆ ಇಲಾಖೆಗೆ ಪತ್ರ ಬರೆದಿತ್ತು.

ಇದೀಗ ಬೃಹತ್‌ ಕೈಗಾರಿಕಾ ಇಲಾಖೆ, ಹೆಚ್ಚುವರಿ ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಈಗಾಗಲೇ ನೀಡಿರುವ ಹಣವನ್ನು ಬಡ್ಡಿ ಸಮೇತ ಹಿಂದಿರುಗಿಸುವಂತೆ ಮತ್ತೊಂದು ಪತ್ರ ಬರೆದಿದೆ.

ಏನಿದು ಫೇಮ್‌ ?

ಕೇಂದ್ರ ಬೃಹತ್‌ ಕೈಗಾರಿಕಾ ಇಲಾಖೆ ಸಾರ್ವಜನಿಕ ಸಾರಿಗೆ ಸಂಸ್ಥೆಗಳು ಖರೀದಿಸುವ ಎಲೆಕ್ಟ್ರಿಕ್‌ ಬಸ್‌ಗಳಿಗೆ ಸಹಾಯಧನ ನೀಡಲು ಫಾಸ್ಟರ್‌ ಅಡೋಪ್ಷನ್‌ ಆ್ಯಂಡ್‌ ಮ್ಯಾನೂಫಾಕ್ಚರಿಂಗ್‌ ಆಫ್‌ ಎಲೆಕ್ಟ್ರಿಕ್‌ ವೆಹಿಕಲ್ಸ್‌(ಫೇಮ್‌)ಯೋಜನೆ ರೂಪಿಸಿದೆ.

ಈ ಯೋಜನೆಯಡಿ ಪ್ರತಿ ಎಲೆಕ್ಟ್ರಿಕ್‌ ಬಸ್‌ನ ದರದ ಶೇ.60ರಷ್ಟುಅಥವಾ ಗರಿಷ್ಠ ಒಂದು ಕೋಟಿ ರು. ಸಹಾಯಧನ ನೀಡಲಿದೆ. ಬಿಎಂಟಿಸಿಯು ಈ ಯೋಜನೆಯ ಮೊದಲ ಹಂತದಲ್ಲಿ ಸಹಾಯ ಧನಕ್ಕೆ ಮನವಿ ಮಾಡಿತ್ತು.