ಬೆಂಗಳೂರು, (ಆ.18): ಫೋನ್ ಕದ್ದಾಲಿಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. 

ಸರ್ಕಾರದ ತೀರ್ಮಾನವನ್ನು ಪ್ರತಿಪಕ್ಷ ಕಾಂಗ್ರೆಸ್‌ನ ನಾಯಕರು ಸ್ವಾಗತಿಸಿದ್ದಾರೆ. ಹೈಕಮಾಂಡ್ ನಾಯಕರ ಸೂಚನೆಯಂತೆ ಯಡಿಯೂರಪ್ಪ ಈ ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐಗೆ ವಹಿಸಿದ್ದಾರೆ ಎಂಬ ಬಗ್ಗೆ ಚರ್ಚೆಗಳು ಶುರುವಾಗಿವೆ. 

ಸಿದ್ದು ಪರವಾಗಿ BSYಗೆ HDK ಧನ್ಯವಾದ...ಒಂದು ಮಾತು!

ಕುಮಾರಸ್ವಾಮಿಗೆ ಉರುಳು..?
ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಪತನದ ಹೊಸ್ತಿಲಲ್ಲಿ ಇದ್ದಾಗ ಅಂದಿನ ಸಿಎಂ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಸೇರಿದಂತೆ ಬಜೆಪಿ ನಾಯಕರ ಫೋನ್‌ಗಳನ್ನು ಟ್ಯಾಪಿಂಗ್ ಮಾಡಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. 

ಮೈತ್ರಿ ಸರ್ಕಾರ ಪತನದ ಅಂಚಿನಲ್ಲಿರುವಾಗ ಅತೃಪ್ತ ಶಾಸಕರು ಸೇರಿದಂತೆ ಹಲವು ನಾಯಕರ ಪೋನ್ ಕದ್ದಾಲಿಕೆ ಮಾಡಲಾಗಿದೆ ಎನ್ನುವ ಸ್ಫೋಟಕ ಮಾಹಿತಿ ಬಹಿರಂವಾಗಿದ್ದು, ಇದನ್ನು ಅಂದಿನ ಸಿಎಂ ಆಗಿದ್ದ ಕುಮಾರಸ್ವಾಮಿ ಅವರೇ ಮಾಡಿಸಿದ್ದಾರೆ ಎನ್ನುವ ತನಿಖೆಯ ಮೂಲಗಳು ತಿಳಿಸಿವೆ. ಇದೀಗ ಈ ಪ್ರಕರಣವನ್ನು ಯಡಿಯೂರಪ್ಪ ಅವರು ಸಿಬಿಐಗೆ ವಹಿಸಿದ್ದು, ಕುಮಾರಸ್ವಾಮಿಗೆ ಕಂಟಕ ಎದುರಾಗಿದೆ.

ಕೆಲ ಅತೃಪ್ತ ಶಾಸಕರು ಕುಮಾರಸ್ವಾಮಿ ಸರ್ಕಾರ ವಿರುದ್ಧ ಸಿಡಿದೆದ್ದು, ಬಂಡಾಯದ ಬಾವುಟ ಹಾರಿಸಿದ್ದರು. ಅತೃಪ್ತರು ಯಾರ ಜತೆ ಸಂಪರ್ಕದಲ್ಲಿದ್ದಾರೆ?  ಅತೃಪ್ತ ಶಾಸರ ಜತೆ ಬಿಜೆಪಿ ನಾಯಕರಿದ್ದಾರೆಯೇ? ಮೈತ್ರಿ ಸರ್ಕಾರದ ವಿರುದ್ಧ ಏನೆಲ್ಲ ನಡೆಯುತ್ತಿದೆ? ಇದರ ಹಿಂದಿನ ರೂವಾರಿಗಳಾರು? ಎನ್ನುವುದನ್ನು ತಿಳಿದುಕೊಳ್ಳಲು ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರ ಫೋನ್‌ಗಳನ್ನು ಕುಮಾರಸ್ವಾಮಿ ಅವರು ಟ್ಯಾಪಿಂಗ್ ಮಾಡಿದ್ದಾರೆ ಎನ್ನುವ ಅನುಮಾನಗಳ ವ್ಯಕ್ತವಾಗಿವೆ.

ಕುಮಾರಸ್ವಾಮಿ ಮಾತ್ರವಲ್ಲದೇ ಇದರಲ್ಲಿ ಐಪಿಎಸ್ ಅಧಿಕಾರಿಗಳು ಸಹ ಶಾಮೀಲಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಸೂಕ್ಷ್ಮವಾಗಿ ಗಮನಿಸಿ, ಕುಮಾರಸ್ವಾಮಿ ಅವರನ್ನು ಈ ಪ್ರಕರಣದಿಂದಲೇ ಮುಗಿಸಬಹುದೆಂಬ ದೂರಾಲೋಚನೆಯಿಂದ ಫೋನ್ ಟ್ಯಾಪಿಂಗ್‌ ಪ್ರಕರಣವನ್ನು ಸಿಬಿಐಗೆ ವಹಿಸಿದ್ದಾರೆ. ಇದರಿಂದ ಒಳಗೊಳಗೆ ಕುಮಾರಸ್ವಾಮಿ ಸೇರಿದಂತೆ ಕೆಲ ಪೊಲೀಸ್ ಅಧಿಕಾರಿಗಳಿಗೆ ನಡುಕ ಶುರುವಾಗಿದೆ.     

ಲೋಕಸಭಾ ಚುನಾವಣೆ ವೇಳೆಯೇ ಫೋನ್ ಕದ್ದಾಲಿಕೆ ಸದ್ದು
ಹೌದು...ಮಂಡ್ಯ ಲೋಕಸಭಾ ಚುನಾವಣೆ ವೇಳೆ ಕುಮಾರಸ್ವಾಮಿ ಅವರು ಪೋನ್ ಟ್ಯಾಪಿಂಗ್ ಮಾಡಿಸುತ್ತಿದ್ದಾರೆ ಎನ್ನುವ ಗಂಭೀರ ಆರೋಪವನ್ನು ಸುಮಲತಾ ಅಂಬರೀಶ್ ಮಾಡಿದ್ದರು. 

ಇದಕ್ಕೆ ಪೂರಕವೆಂಬಂತೆ ಚುನಾವಣೆ ಪ್ರಚಾರದ ವೇಳೆ ಸುಮಲತಾ ಅಂಬರೀಶ್ ಅವರು ಯಾರ ಜತೆ ಮಾತನಾಡುತ್ತಿದ್ದಾರೆ? ಎಲ್ಲೆಲ್ಲಿ ಡೀಲಿಂಗ್‌ಗಳು ನಡೆಯುತ್ತಿವೆ? ಸುಮಲತಾ ಅವರು ಏಲೆಲ್ಲಿ ಸಭೆಗಳನ್ನು ಮಾಡುತ್ತಾರೆ? ಎನ್ನುವುದು ನನಗೆ ಗೊತ್ತಿದೆ ಎಂದು ಸ್ವತಃ ಕುಮಾರಸ್ವಾಮಿ ಅವರೇ ಮಾಧ್ಯಮಗಳ ಮುಂದೆ ಹೇಳಿದ್ದರು. 

ಈ ಎಲ್ಲಾ ಮಾಹಿತಿಗಳು ಕುಮಾರಸ್ವಾಮಿ ಅವರಿಗೆ ಹೇಗೆ ಗೊತ್ತಾಗುತ್ತಿದ್ದವು? ಯಾರು ಮಾಹಿತಿ ನೀಡುತ್ತಿದ್ದರು? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಒಬ್ಬರ ದಿನಚರಿ ಬಗ್ಗೆ ತಿಳಿಯಬೇಕಾದ್ರೆ ಅವರ ಫೋನ್ ಟ್ಯಾಪಿಂಗ್ ಮಾಡಿಸಬೇಕು ಒಂದು. ಇಲ್ಲ ಅವರ ಹಿಂದೆ ಗೂಢಾಚಾರಿಗಳನ್ನು ಬಿಟ್ಟು ಮಾಹಿತಿ ಪಡೆಯಲು ಮಾತ್ರ ಸಾಧ್ಯ. 

ಇವೆಲ್ಲವೂಗಳನ್ನು ಇದೀಗ ಸಿಬಿಐ ಅಧಿಕಾರಿಗಳ ತಂಡ ಪಿನ್‌ ಟು ಪಿನ್ ತನಿಖೆ ನಡೆಸಲಿದೆ. ಒಟ್ಟಿನಲ್ಲಿ ಮೈತ್ರಿ ಸರ್ಕಾರ ಪತನದ ಕೊನೆಗಳಿಗೆಯಲ್ಲಿ ಈ ಫೋನ್ ಕದ್ದಾಲಿಕೆ ಆಗಿದ್ದು, ಕುಮಾರಸ್ವಾಮಿಗೆ ಕಂಟಕ ಎದುರಾಗುವ ಎಲ್ಲಾ ಸಾಧ್ಯತೆಗಳಿವೆ.