ಬಸವರಾಜ ಜಿಲ್ಲೆಗೆ ಮೊದಲ ಸ್ಥಾನ ಪಡೆದಿರುವುದು ಹೆತ್ತವರ ಹುಮ್ಮಸ್ಸನ್ನು ಹೆಚ್ಚಿಸಿದೆ. ತಮ್ಮೆಲ್ಲಾ ಆಸ್ತಿ ಒತ್ತೆ ಇಟ್ಟಾದರೂ ಮಗನನ್ನು ವೈದ್ಯನಾಗಿ ಮಾಡುವ ಹಂಬಲ ಹೊಂದಿದ್ದಾರೆ ಎಂದು ಬಸವರಾ​ಜನ ಚಿಕ್ಕಪ್ಪ ಪಿ.ಎಸ್‌.ಮಂಜಪ್ಪ ಹೇಳುತ್ತಾರೆ. 

ದಾವಣಗೆರೆ: ಕೂಲಿ ಮಾಡುವ ಹೆತ್ತವರಿಗೆ ತಮ್ಮ ಮಗ ವೈದ್ಯನಾಗಿ, ತಮ್ಮಂತಹ ಬಡವರ ಸೇವೆ ಮಾಡಬೇಕೆಂಬ ಆಸೆ...! ಹೀಗೆ ತಮ್ಮ ಕಿರಿಯ ಮಗನ ಬಗ್ಗೆ ಅಪಾರ ಕನಸು ಕಂಡವರು ತಾಲೂಕಿನ ಐಗೂರು ಗ್ರಾಮದ ಬಡ, ಅನಕ್ಷರಸ್ಥ ಕೂಲಿ ಕಾರ್ಮಿಕ ದಂಪತಿ ಪರಿಶಿಷ್ಟ ಪಂಗಡದ ಪಿ.ಎಸ್‌.ಹಾಲೇಶಪ್ಪ, ಹನುಮಮ್ಮ ದಂಪತಿ.

ಹೆತ್ತವರ ಆಸೆ ಸಾಕಾರಗೊಳಿಸಲು ಮಗ ಸಹ ಇದೀಗ ಒಂದು ಹೆಜ್ಜೆ ಮುಂದಿಟ್ಟಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.98.16ರಂತೆ 589 ಅಂಕ ಗಳಿಸಿದ್ದಾನೆ. ಸಹಜವಾಗಿಯೇ ಇದು ಅನಕ್ಷರಸ್ಥರಾದ ಬಡ ಪಾಲಕರಲ್ಲಿ ಆನಂದಭಾಷ್ಪ ತರಿಸಿದೆ.

ನಗರದ ಶ್ರೀ ಸಿದ್ಧಗಂಗಾ ಪಿಯು ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಲ್ಲಿ ಒಬ್ಬನಾದ ಪಿ.ಎಚ್‌.ಬಸವರಾಜ 7ನೇ ತರಗತಿವರೆಗೆ ಓದಿದ್ದೆಲ್ಲಾ ಐಗೂರು ಗ್ರಾಮದ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಯಲ್ಲಿ. ನಂತರ ದಾವಣಗೆರೆಯ ಮಾಗನೂರು ಬಸಪ್ಪ ಶಾಲೆಯಲ್ಲಿ ಹೈಸ್ಕೂಲ್‌ ಮುಗಿಸಿದ ಬಸವರಾಜ ಬಳಿಕ ಪಿಯುಸಿಗೆ ಶ್ರೀ ಸಿದ್ಧಗಂಗಾ ಪಿಯು ಕಾಲೇಜು ಸೇರಿದ.

ಬಸವರಾಜ ಜಿಲ್ಲೆಗೆ ಮೊದಲ ಸ್ಥಾನ ಪಡೆದಿರುವುದು ಹೆತ್ತವರ ಹುಮ್ಮಸ್ಸನ್ನು ಹೆಚ್ಚಿಸಿದೆ. ತಮ್ಮೆಲ್ಲಾ ಆಸ್ತಿ ಒತ್ತೆ ಇಟ್ಟಾದರೂ ಮಗನನ್ನು ವೈದ್ಯನಾಗಿ ಮಾಡುವ ಹಂಬಲ ಹೊಂದಿದ್ದಾರೆ ಎಂದು ಬಸವರಾ​ಜನ ಚಿಕ್ಕಪ್ಪ ಪಿ.ಎಸ್‌.ಮಂಜಪ್ಪ ಹೇಳುತ್ತಾರೆ. 

ನಮ್ಮ ಮನೆಯಲ್ಲಿ ಓದಿದವರು ಯಾರೂ ಇಲ್ಲ. ಸಿದ್ದೇಶ, ಬಸವರಾಜ ಕಾಲೇಜು ಮೆಟ್ಟಿಲನ್ನು ಹತ್ತಿದ್ದಾರೆ. ನಾವೂ ಸಹ ಅಂದಿನ ಕೂಲಿ ಕೆಲಸ ನಂಬಿ ಜೀವನ ನಡೆಸುವವರು. ನಮ್ಮ ಮನೆ ಹುಡುಗನೊಬ್ಬ ಇಂತಹ ಸಾಧನೆ ಮಾಡಿದ್ದು, ಕಾಲೇಜಿನ ಶಿವಣ್ಣ ಸರ್‌, ಡಿಸೋಜಾ ಮೇಡಂ, ಡಾ.ಜಯಂತ್‌ ಸರ್‌, ಹೇಮಂತ್‌ ಸರ್‌, ಬಂಗೇರಾ ಸರ್‌, ಬೋಧಕರ ಪ್ರೋತ್ಸಾಹ, ಮಾರ್ಗದರ್ಶನವೇ ತಮ್ಮ ಮಗನ ಸಾಧನೆಗೆ ಕಾರಣವೆಂದು ಅವರು ತಿಳಿಸಿದರು.

ಕನ್ನಡಪ್ರಭ ವಾರ್ತೆ
epaper.kannadaprabha.in