ಮೈಸೂರು[ಮೇ.21]: ತನ್ನ ಮೈಮೇಲೆ ದೇವರು ಬರುತ್ತದೆ. ಮಕ್ಕಳಿಲ್ಲದ ಮಹಿಳೆಯರಿಗೆ ಮಕ್ಕಳಾಗುವಂತಹ ವರ ನೀಡುವೆ ಎಂದು ಹೇಳಿ ಮಹಿಳೆಯರನ್ನು ನಂಬಿಸಿ ವಂಚಿಸುತ್ತಿದ್ದ ಶನಿ ಮಹಾತ್ಮ ದೇವಸ್ಥಾನದ ಗುಡ್ಡಪ್ಪನನ್ನು ಗ್ರಾಮಸ್ಥರು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಮೈಸೂರು ತಾಲೂಕು ಮಂಡನಹಳ್ಳಿಯಲ್ಲಿ ನಡೆದಿದೆ.

ನಂಜನಗೂಡು ತಾಲೂಕು ನೆಲ್ಲಿನಾಥಪುರದ ವೆಂಕಟೇಶ ನಾಯಕ(22) ಧರ್ಮದೇಟು ತಿಂದ ನಕಲಿ ಗುಡ್ಡಪ್ಪ. ವೆಂಕಟೇಶ್‌ ತನ್ನ ಮೈಮೇಲೆ ದೇವರು ಬರುತ್ತದೆ ಎಂದು ಹೇಳಿ ಅಮಾಯಕ ಮಹಿಳೆಯರನ್ನು ವಂಚಿಸುತ್ತಿದ್ದ ಎನ್ನಲಾಗಿದೆ. ಮಕ್ಕಳಿಲ್ಲದ ಮಹಿಳೆಯರಿಗೆ ಮಕ್ಕಳಾಗುವಂತಹ ವರ ನೀಡುತ್ತೇನೆ. ಇದಕ್ಕಾಗಿ ತನ್ನ ಜೊತೆ ಒಂದು ದಿನ ಧರ್ಮಸ್ಥಳಕ್ಕೆ ಬಂದು ಉಳಿದರೆ ಮಕ್ಕಳಾಗುತ್ತವೆ ಎಂದು ಆರೋಪಿಯು ಮಂಡನಹಳ್ಳಿಯ ಮಹಿಳೆಯೊಬ್ಬರಿಗೆ ನಂಬಿಸಿ ಮೋಸ ಮಾಡಲು ಮುಂದಾಗಿದ್ದ.

ಗುಡ್ಡಪ್ಪ ಮೋಸವನ್ನು ಬಯಲು ಮಾಡಲು ಮುಂದಾದ ಮಹಿಳೆಯು ಗುಡ್ಡಪ್ಪನನ್ನು ಮನೆಗೆ ಕರೆದಿದ್ದು, ಮಂಡನಹಳ್ಳಿಗೆ ಬಂದ ಗುಡ್ಡಪ್ಪನನ್ನು ಗ್ರಾಮಸ್ಥರು ಹಿಡಿದು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಯಾರು ದೂರು ನೀಡಿಲ್ಲ. ಹೀಗಾಗಿ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಜಯಪುರ ಠಾಣೆಯ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.