ಬಾಗ್ದಾದಿ ಮಾಹಿತಿ ನೀಡಿದಾತನಿಗೆ 175 ಕೋಟಿ ಬಹುಮಾನ
ಜಗತ್ತಿನ ನಂ.1 ಉಗ್ರ ಎನಿಸಿಕೊಂಡಿದ್ದ ಇರಾಕ್ ಹಾಗೂ ಸಿರಿಯಾದಲ್ಲಿ ಅತ್ಯಂತ ಕ್ರೂರ ಹಾಗೂ ಅಮಾನುಷವಾಗಿ ಜನರನ್ನು ಹತ್ಯೆಗೈಯುತ್ತಿದ್ದ ಐಸಿಸ್ ಉಗ್ರ ಅಬು ಬಕರ್ ಅಲ್- ಬಾಗ್ದಾದಿ ಬಗ್ಗೆ ಸುಳಿವು ನೀಡಿದವರಿಗೆ ಘೋಷಿಸಿದಂತೆ ಬೃಹತ್ ಮೊತ್ತದ ಬಹುಮಾನ ನೀಡಲಾಗಿದೆ.
ವಾಷಿಂಗ್ಟನ್ (ಅ.31): ಐಸಿಸ್ ಉಗ್ರ ನಾಯಕ ಅಬೂಬಕರ್ ಅಲ್ ಬಾಗ್ದಾದಿಯ ಬಗ್ಗೆ ಮಾಹಿತಿ ನೀಡಿದವನಿಗೆ, ಈ ಹಿಂದೆ ಘೋಷಣೆ ಮಾಡಿದಂತೆ ಅಮೆರಿಕ 175 ಕೋಟಿ ಬಹುಮಾನ ನೀಡಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಬಾಗ್ದಾದಿ ಆಪ್ತನನ್ನೇ ಬಲೆಗೆ ಬೀಳಿಸಿಕೊಂಡಿದ್ದ ಅಮೆರಿಕ, ಆತನಿಂದಲೇ ಬಾಗ್ದಾದಿಯ ಅಡಗುದಾಣ, ಪ್ರಯಾಣ ಮುಂತಾದ ಇಂಚಿಂಚು ಮಾಹಿತಿಯನ್ನು ಕಲೆ ಹಾಕಿತ್ತು. ಬಾಗ್ದಾದಿಯ ಬಗ್ಗೆ ಮಾಹಿತಿ ನೀಡಿದಾದ ಸುನ್ನೀ ಅರಬ್ ಆಗಿದ್ದು, ತನ್ನ ಕುಟುಂಬಸ್ಥರನ್ನು ಕೊಂದಿದ್ದರಿಂದ ಐಸಿಸ್ ವಿರುದ್ದ ಆತ ತಿರುಗಿ ಬಿದ್ದಿದ್ದ. ಹಾಗಾಗಿ ಬಾಗ್ದಾದಿಯ ಆಪ್ತ ವಲಯದಲ್ಲಿ ಇದ್ದುಕೊಂಡೇ ಆತನ ಬಗ್ಗೆ ಮಾಹಿತಿಯನ್ನು ಅಮೆರಿಕ ಸೇನೆಗೆ ರವಾನಿಸುತ್ತಿದ್ದ. ದಾಳಿ ವೇಳೆ ಆತ ಬಾಗ್ದಾದಿಯ ಇದ್ಲೀಬ್ ಪ್ರಾಂತ್ಯದ ಮನೆಯಲ್ಲಿಯೇ ಇದ್ದ. ಎರಡು ದಿನಗಳ ಬಳಿಕ ಕುಟುಂಬಸ್ಥರೊಂದಿಗೆ ಆತನನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಭದ್ರತಾ ದೃಷ್ಟಿಯಿಂದ ಆತನ ಹೆಸರು ಹಾಗೂ ಇನ್ನಿತರ ಮಾಹಿತಿಗಳನ್ನು ಬಹಿರಂಗ ಪಡಿಸಿಲ್ಲ.
ಬಾಗ್ದಾದಿ ಸತ್ತರೂ ಇನ್ನೂ ಇದ್ದಾರೆ ರಕ್ಕಸ ಉಗ್ರರು
ಮಾಹಿತಿದಾರ ಬಾಗ್ದಾದಿಗೆ ಭಾರೀ ಆಪ್ತನಾಗಿದ್ದು, ತಾನು ಪ್ರತಿ ಬಾರಿ ಮನೆ ಬದಲಿಸುವಾಗ ಆತನೇ ಎಲ್ಲಾ ಸಮಾನು ಸರಂಜಾಮುಗಳನ್ನು ಸಾಗಿಸುವ ಹೊಣೆಯನ್ನೂ ಹೊತ್ತುಕೊಂಡಿದ್ದ. ಬಾಗ್ದಾದಿ ಆತ್ಮಾಹುತಿ ಬಾಂಬ್‌ಗಳನ್ನು ದೇಹಕ್ಕೆ ಕಟ್ಟಿಕೊಂಡೇ ಓಡಾಡುತ್ತಾನೆ ಎನ್ನುವ ಮಾಹಿತಿ ಕೂಡ ಅವನಿಂದಲೇ ಲಭ್ಯವಾಗಿತ್ತು. ಎಷ್ಟರ ಮಟ್ಟಿಗೆ ಆಪ್ತನಾಗಿದ್ದ ಎಂದರೆ, ಬಾಗ್ದಾದಿಯ ಸಂಬಂಧಿಕರನ್ನೂ ಆತನೇ ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
2011ರಲ್ಲಿ ಅಮೆರಿಕ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಅಲ್ ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನನ್ನು ಹತ್ಯೆಗೈದಿತ್ತು. ಕಳೆದ ವಾರ ಜಗತ್ತಿನ ನಂ.1 ಉಗ್ರ ಎನಿಸಿಕೊಂಡಿದ್ದ ಇರಾಕ್ ಹಾಗೂ ಸಿರಿಯಾದಲ್ಲಿ ಅತ್ಯಂತ ಕ್ರೂರ ಹಾಗೂ ಅಮಾನುಷವಾಗಿ ಜನರನ್ನು ಕೊಲ್ಲುತ್ತಿದ್ದ ಐಸಿಸ್ ಸಂಘಟನೆ ಸಂಸ್ಥಾಪಕ ಅಬು ಬಕರ್ ಅಲ್ ಬಾಗ್ದಾದಿಯನ್ನು ಅಮೆರಿಕ ಸಂಹರಿಸಿದೆ. ಆ ಮೂಲಕ ಜಗತ್ತಿನ ಮತ್ತೊಬ್ಬ ಉಗ್ರನನ್ನು ಕೊಲ್ಲುವಲ್ಲಿ ಅಮೆರಿಕ ಯಶಸ್ವಿಯಾಗಿದೆ.
ಬಾಗ್ದಾದಿ ಬೆನ್ನತ್ತಿದ್ದ ನಾಯಿ ತೋರಿಸಿದ ಟ್ರಂಪ್
ಆದರೆ, ಉಗ್ರರರ ಹಿಟ್ ಲಿಸ್ಟ್‌ನಲ್ಲಿ ಇನ್ನೂ 54 ಉಗ್ರರು ಸಕ್ರಿಯವಾಗಿದ್ದು, ಅವರ ಬಗ್ಗೆ ವಿಶ್ವವೇ ಸಿಡಿದೇಳುವ ಅಗತ್ಯವಿದೆ. ಅಮೆರಿಕ ಸೇನಾ ದಾಳಿಗೆ ಹೆದರಿ ಬಾಗ್ದಾದಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಅಮೆರಿಕದ ಮಾಧ್ಯಮಗಳೂ ವರದಿ ಮಾಡಿದ್ದು, ಇದನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.