ಈಗ ಬೆಂಗಳೂರಿನಲ್ಲಿ ರಿಯಲ್ಲಾಗಿ ಬೋಟುಗಳು ರಸ್ತೆಗಳಿದಿವೆ. ಇದು ಖಂಡಿತ ತಮಾಷೆಯಲ್ಲ... ಕೋರಮಂಗಲದ ನಿವಾಸಿಗಳು ರಸ್ತೆಗಳಲ್ಲಿ ಸಂಚರಿಸಲು ಬೋಟು ಖರೀದಿಸಿದ್ದಾರೆ. ಜನರು ಹೀಗೆ ಮಾಡುತ್ತಿರುವುದು ಸರಕಾರಕ್ಕೆ ಟಾಂಗ್ ಕೊಡಲಂತೂ ಅಲ್ಲ. ಮಳೆಯಿಂದಾದ ಅಧ್ವಾನದ ಸ್ಥಿತಿ ಅವರ ನಿರ್ಧಾರಕ್ಕೆ ಕಾರಣ.
ಬೆಂಗಳೂರು(ಅ. 13): ಎರಡು ವರ್ಷಗಳ ಹಿಂದೆ ಚೆನ್ನೈನಲ್ಲಿ ಮಳೆ ಬಂದು ಆ ನಗರ ನೀರಿನಲ್ಲಿ ಮುಳುಗಿದ್ದಾಗ ಓಲಾ ಸಂಸ್ಥೆ ಬೋಟ್'ಗಳ ಮೂಲಕ ರಕ್ಷಣಾ ಕಾರ್ಯಕ್ಕೆ ನೆರವಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಇದು ಸಾಕಷ್ಟು ವೈರಲ್ ಆಗಿತ್ತು. ಸ್ವಲ್ಪ ಮಳೆ ಬಂದರೂ ಆಳುದ್ದ ನೀರು ನಿಂತುಕೊಳ್ಳುವ ಚೆನ್ನೈನಲ್ಲಿ ಇದು ಸಹಜ. ಆದರೆ, ಈಗ ತಿಂಗಳುಗಟ್ಟಲೆ ಸತತವಾಗಿ ಮಳೆ ಸುರಿಯುತ್ತಿರುವ ಬೆಂಗಳೂರಿನಲ್ಲೂ ಬೋಟುಗಳು ರಸ್ತೆಗಳಿದಿವೆ. ಇದು ಖಂಡಿತ ತಮಾಷೆಯಲ್ಲ... ನಗರದ ಕೆಲ ಪ್ರದೇಶಗಳ ನಿವಾಸಿಗಳು ರಸ್ತೆಗಳಲ್ಲಿ ಸಂಚರಿಸಲು ಬೋಟು ಖರೀದಿಸಿದ್ದಾರೆ. ಜನರು ಹೀಗೆ ಮಾಡುತ್ತಿರುವುದು ಸರಕಾರಕ್ಕೆ ಟಾಂಗ್ ಕೊಡಲಂತೂ ಅಲ್ಲ. ಮಳೆಯಿಂದಾದ ಅಧ್ವಾನದ ಸ್ಥಿತಿ ಅವರ ನಿರ್ಧಾರಕ್ಕೆ ಕಾರಣ.
ಹಲವಾರು ದಿನಗಳಿಂದ ಉದ್ಯಾನನಗರಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಜನರು ನಲುಗಿ ಹೋಗಿದ್ದಾರೆ. ಹಲವು ಪ್ರದೇಶಗಳು ನಿತ್ಯವೂ ಜಲಾವೃತವಾಗವ ದೃಶ್ಯ ಸಾಮಾನ್ಯವಾಗಿದೆ. ಕೋರಮಂಗಲದ 4ನೇ ಬ್ಲಾಕ್'ನ ಪ್ರದೇಶವಂತೂ ನೀರಿನಲ್ಲಿ ಅಕ್ಷರಶಃ ಮುಳುಗಡೆಯಾಗಿದೆ. ಇಲ್ಲಿ ಹಲವು ಮನೆಗಳಲ್ಲಿ 4 ಅಡಿಗಳಷ್ಟು ನೀರು ನಿಂತಿದೆ. ಹೊರಗೆ ನಡೆದು ಹೋದರೆ ಬಾಯ್ದೆರೆದ ಚರಂಡಿಗಳಿಗೆ ಸಿಲುಕು ಭಯ. ಹೀಗಾಗಿ, ತುರ್ತು ಸಂದರ್ಭಗಳಲ್ಲಿ ಹೊರಹೋಗಲು ಕೆಲ ನಿವಾಸಿಗಳು ಬೋಟ್ ಬಳಕೆ ಮಾಡುತ್ತಿದ್ದಾರೆ. ಮಕ್ಕಳು ಮತ್ತು ವೃದ್ಧರಿಗಂತೂ ಈ ಬೋಟ್ ಅನಿವಾರ್ಯವೆಂಬಂತಾಗಿದೆ.
ವರದಿ: ಮುತ್ತಪ್ಪ ಲಮಾಣಿ, ಸುವರ್ಣ ನ್ಯೂಸ್, ಬೆಂಗಳೂರು
