ಮೈಸೂರು [ಆ.10] :  ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕರ್ನಾಟಕದ ಜನತೆ ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಮಠದಿಂದ 15 ಲಕ್ಷ ರು. ನೆರವು ನೀಡುವುದಾಗಿ ಪೇಜಾವರ ಮಠದ ವಿಶ್ವೇಶ್ವರತೀರ್ಥ ಸ್ವಾಮೀಜಿ ತಿಳಿಸಿದರು. ಸರಸ್ವತಿಪುರಂನ ಕೃಷ್ಣಧಾಮದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅನೇಕ ಮಂದಿ ಮನೆ, ಮಠ, ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದು, ಅವರ ನೆರವಿಗೆ ಧಾವಿಸುವಂತೆ ಭಕ್ತರು ಮತ್ತು ನಾಗರಿಕರಲ್ಲಿ ಮನವಿ ಮಾಡುತ್ತೇನೆ. 

ಸಂಕಷ್ಟದ ಸಂದರ್ಭದಲ್ಲಿ ಮಠಗಳು ಜನರ ನೆರವಿಗೆ ಮುಂದಾಗಬೇಕು. ಈ ಉದ್ದೇಶದಿಂದ ಮಠದ ಪದಾಧಿಕಾರಿಗಳನ್ನು ಬರಲು ಹೇಳಿದ್ದೇವೆ. ಈಗ ಚಾತುರ್ಮಾಸ ಇರುವುದರಿಂದ ಅಲ್ಲಿಗೆ ಹೋಗಲಾಗುತ್ತಿಲ್ಲ. ಈ ಸಂದರ್ಭದಲ್ಲಿ ಹೇಗೆ ನೆರವಾಗಬಹುದು ಎಂದು ಯೋಚಿಸುತ್ತಿದ್ದೇವೆ ಎಂದು ತಿಳಿಸಿದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸದ್ಯಕ್ಕೆ ಬೆಳಗಾವಿ ಜಿಲ್ಲೆಯ ಒಂದು ಪ್ರದೇಶವನ್ನು ಆಯ್ದುಕೊಂಡು ಪರಿಹಾರ ಕಾರ್ಯ ಕೈಗೊಳ್ಳಲಾಗುವುದು. ಯುವಕರು ಶ್ರಮದಾನದ ಮೂಲಕ ಸಂಕಷ್ಟಕ್ಕೆ ನೆರವಾಗಬೇಕು. ಅಲ್ಲಿ ಏನಾಗಿದೆ, ಏನು ಮಾಡಬೇಕು ಎಂಬುದನ್ನು ಕಾರ್ಯಕರ್ತರಿಗೆ ತಿಳಿಸಿದ್ದೇವೆ. ಚಾತುರ್ಮಾಸ ಮುಗಿದ ಬಳಿಕ ಧಾರವಾಡ, ಹುಬ್ಬಳ್ಳಿ, ಬೆಳಗಾವಿ ಭಾಗದಲ್ಲಿ ಪಾದಯಾತ್ರೆ ಕೈಗೊಳ್ಳಲಾಗುವುದು. 

ಶ್ರೀಮಂತರು ಹೆಚ್ಚು ನೆರವು ನೀಡಬೇಕು. ಈ ನಿಟ್ಟಿನಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಜೊತೆಗೂ ಮಾತನಾಡುತ್ತೇನೆ ಎಂದರು. ಈ ಹಿಂದೆ ನೆರೆ ಬಂದಾಗಲೂ ಸಹಾಯ ಹಸ್ತ ಚಾಚಿದ್ದೇವೆ. ಅನೇಕ ಕಡೆ ಮನೆ ನಿರ್ಮಿಸಿಕೊಡಲಾಗಿದೆ ಎಂದು ಇದೇ ವೇಳೆ ಶ್ರೀಗಳು ಸ್ಮರಿಸಿದರು.