ಇದನ್ನು ಪಾಕಿಸ್ತಾನದ ಅಧಿಕಾರಿಗಳೇ ತಮಗೆ ಹೇಳಿದ್ದಾರೆಂಬುದನ್ನು ಆಕೆ ತಿಳಿಸಲಿಲ್ಲವಾದರೂ ಆಮೇಲೆ ನನ್ನ ಮೂಲಗಳಿಂದ ನನಗದು ಗೊತ್ತಾಯಿತು
26/11 ಮುಂಬೈ ದಾಳಿಯ ನಂತರ ಒಂದು ತಮಾಷೆ ನಡೆಯಿತು. ನನ್ನ ಕಚೇರಿಯಿಂದ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿಗೆ ಯಾರೋ ಕರೆ ಮಾಡಿ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದರಂತೆ! ಅದರ ಬೆನ್ನಲ್ಲೇ ಪಾಕ್‌ನ ವಾಯುಪಡೆ ತನ್ನ ವಿಮಾನಗಳನ್ನು ಸಿದ್ಧ ಮಾಡಿಟ್ಟುಕೊಂಡಿತು. ಅಲ್ಲಿನ ಸೇನಾಪಡೆ ಕೂಡ ಯುದ್ಧಕ್ಕೆ ಸಿದ್ಧವಾಯಿತು. ನಾನು ಯಾವುದೋ ಕೆಲಸಕ್ಕೆಂದು ಕೊಲ್ಕತ್ತಾಗೆ ಹೋಗಿಳಿಯುತ್ತಿದ್ದಂತೆ ಈ ವಿಷಯ ತಿಳಿಯಿತು. ಏರ್‌ಪೋರ್ಟ್'ನಿಂದ ಮನೆಗೆ ಹೋಗುತ್ತಿದ್ದಾಗ ಅಮೆರಿಕದ ವಿದೇಶಾಂಗ ಸಚಿವೆ ಕಾಂಡೋಲಿಸಾ ರೈಸ್ ನನಗೆ ಮೇಲಿಂದ ಮೇಲೆ ಫೋನ್ ಮಾಡಲು ಪ್ರಯತ್ನಿಸುತ್ತಿದ್ದಾರೆಂಬ ಮಾಹಿತಿ ಬಂತು. ಮನೆಗೆ ಹೋದವನೇ ರೈಸ್‌ಗೆ ಫೋನ್ ಮಾಡಿದೆ.
ಆಕೆ, ನಾನು ಪಾಕ್‌ಗೆ ಎಚ್ಚರಿಕೆ ನೀಡಿದ್ದರ ಬಗ್ಗೆ ವಿಚಾರಿಸಿದರು. ಇದನ್ನು ಪಾಕಿಸ್ತಾನದ ಅಧಿಕಾರಿಗಳೇ ತಮಗೆ ಹೇಳಿದ್ದಾರೆಂಬುದನ್ನು ಆಕೆ ತಿಳಿಸಲಿಲ್ಲವಾದರೂ ಆಮೇಲೆ ನನ್ನ ಮೂಲಗಳಿಂದ ನನಗದು ಗೊತ್ತಾಯಿತು. ಪಾಕ್ ಸರ್ಕಾರ ಹಾಗೂ ಸೇನಾಪಡೆ ಹೆದರಿ ಈ ಬಗ್ಗೆ ಕಾಂಡೋಲಿಸಾ ಬಳಿ ಗೋಳು ತೋಡಿಕೊಂಡಿದ್ದವಂತೆ. ‘ಅಲ್ಲಾ ಮೇಡಂ, ಹಾಗೇನಾದರೂ ಪಾಕ್ ಮೇಲೆ ಯುದ್ಧ ಸಾರುವುದಿದ್ದರೆ ಭಾರತದ ವಿದೇಶಾಂಗ ಮಂತ್ರಿಯಾದ ನಾನು ರಾಜಧಾನಿಯಿಂದ 1200 ಕಿ.ಮೀ. ದೂರವಿರುವ ಕೊಲ್ಕತ್ತಾಗೆ ಬರುತ್ತಿದ್ದೆನೇ? ಇಲ್ಲಿಂದ ಇನ್ನೂ 250 ಕಿ.ಮೀ. ದೂರವಿರುವ ನನ್ನ ಕ್ಷೇತ್ರಕ್ಕೆ ಹೊರಟಿದ್ದೇನೆ. ನೀವು ಕೇಳಿದ್ದು ವದಂತಿಯಷ್ಟೆ’ ಎಂದು ಹೇಳಿದೆ. ಮರುದಿನ ಪಾಕ್‌ನ ‘ಡಾನ್’ ಪತ್ರಿಕೆಯಲ್ಲಿ ಜರ್ದಾರಿ ಕಚೇರಿಗೆ ಪಾಕ್ ಜೈಲಿನಿಂದ ಒಬ್ಬ ಕೈದಿ ಹುಸಿ ಕರೆ ಮಾಡಿರುವುದಾಗಿ ವರದಿ ಪ್ರಕಟವಾಯಿತು.
(ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬರೆದಿರುವ ‘ದಿ ಕೋಎಲಿಷನ್ ಇಯರ್ಸ್ 1996-2012’ ಪುಸ್ತಕದ ಅನುವಾದದ ಆಯ್ದ ಭಾಗ-ಕನ್ನಡಪ್ರಭ)
