ಇಸ್ಲಮಾಬಾದ್[ಆ.28]: ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಭಾರತದ ನಡೆಗೆ ಪಾಕಿಸ್ತಾನ ಸಿಡಿಮಿಡಿಗೊಂಡಿದೆ. ಹತಾಶ ಪಾಕ್ ಭಾರತ ತನ್ನ ನಿರ್ಧಾರ ಹಿಂಪಡೆಯಲು ನಾನಾ ಕಸರತ್ತು ನಡೆಸುತ್ತಿದ್ದು, ಎಲ್ಲವೂ ವಿಫಲಗೊಳ್ಳುತ್ತಿದೆ. ಇದೀಗ ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ಪುನರಾರಂಭಗೊಂಡಿದ್ದ, ಅಫ್ಘಾನಿಸ್ತಾನದ ಜೊತೆ ವಾಣಿಜ್ಯ ವಹಿವಾಟಿಗಾಗಿ ಬಳಸಿಕೊಳ್ಳುತ್ತಿರುವ ಭೂ ಮಾರ್ಗ ಮತ್ತು ಪಾಕ್ ಮೂಲಕ ಸಾಗುವ ವಾಯುಮಾರ್ಗದಲ್ಲಿ ಭಾರತೀಯ ವಿಮಾನಗಳ ಹಾರಾಟ ನಿಷೇಧಿಸಲು ಪ್ರಧಾನಿ ಇಮ್ರಾನ್ ಖಾನ್ ನಿರ್ಧರಿಸಿದ್ದಾರೆ.

ನಷ್ಟಕ್ಕೆ ಬೆಚ್ಚಿ ಭಾರತಕ್ಕೆ ತನ್ನ ವಾಯುಸೀಮೆ ತೆರೆದ ಪಾಕ್ ಸರ್ಕಾರ!

ಈ ಸಂಬಂಧ ಪಾಕಿಸ್ತಾನದ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಫವಾದ್ ಹುಸೇನ್ ಟ್ವೀಟ್ ಮಾಡಿದ್ದು, 'ಸಚಿವ ಸಂಪುಟ ಸಭೆಯಲ್ಲಿ ಇಮ್ರಾನ್ ಖಾನ್ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಿದೆ' ಎಂದಿದ್ದಾರೆ.

ಭಾರತೀಯ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ದಿನದಿಂದ ಪಾಕಿಸ್ತಾನ ಭಾರತದ ವಿರುದ್ಧ ಕಿಡಿ ಕಾರುತ್ತಲೇ ಇದೆ. ಈ ವಿಚಾರದಿಂದ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಪಾಕ್, ಭಾರತದೊಂದಿಗಿನ ವಾಣಿಜ್ಯ ವ್ಯವಹಾರ ಸೇರಿದಂತೆ ಭಾರತಕ್ಕೆ ಪಾಕಿನಿಂದ ತೆರಳುವ ಬಸ್ ಮತ್ತು ರೈಲು ಸೇವೆಯನ್ನು ಆಗಸ್ಟ್ 5ರಿಂದ ಸ್ಥಗಿತಗೊಳಿಸಿದೆ. ಸದ್ಯ ಈ ಪಟ್ಟಿಗೆ ವಾಯುಮಾರ್ಗ ನಿಷೇಧವೂ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ.

ಪುಲ್ವಾಮಾ ದಾಳಿ ಬಳಿಕ ಉದ್ವಿಗ್ನ ಪರಿಸ್ಥಿತಿ

ಫೆಬ್ರವರಿ 14ರಂದು ನಡೆದಿದ್ದ ಪುಲ್ವಾಮಾ ದಾಳಿಗೆ ಪ್ರತ್ಯುತ್ತರವೆಂಬಂತೆ, ಭಾರತೀಯ ವಾಯುಸೇನೆ ಫೆಬ್ರವರಿ 26ರಂದು ಬಾಲಾಕೋಟ್‍ನ ಜೈಷ್-ಎ-ಮೊಹಮ್ಮದ್ ಉಗ್ರರ ಕ್ಯಾಂಪ್ಗಳ ಮೇಲೆ ಏರ್ ಸ್ಟ್ರೈಕ್ ನಡೆಸಿತ್ತು. ಇದಾದ ಬಳಿಕ ಪಾಕ್ ತನ್ನ ವಾಯು ಮಾರ್ಗವನ್ನು ಸಂಪೂರ್ಣ ಸ್ಥಗಿತಗೊಳಿಸಿತ್ತು. ಆದರೆ ಮಾರ್ಚ್ 27ರಂದು ದೆಹಲಿ, ಬ್ಯಾಂಕಾಕ್ ಹಾಗೂ ಕೌಲಾಲಂಪುರ ವಿಮಾನಗಳ ಹಾರಾಟಕ್ಕೆ ಅನುವು ಮಾಡಿಕೊಟ್ಟಿತ್ತು.

ಕಾಸು ಕೊಟ್ರೆ ಆಕಾಶ; ಇಲ್ಲದಿದ್ರೆ ಇಲ್ಲ ಅವಕಾಶ!

ಇದಾದ ಎರಡು ತಿಂಗಳ ಬಳಿಕ, ಮೇ 15ರಿಂದ ಮತ್ತೆ ಪಾಕಿಸ್ತಾನ ತನ್ನ ವಾಯು ಮಾರ್ಗದ ಮೂಲಕ ತೆರಳುವ ಭಾರತದ ವಿಮಾನಗಳಿಗೆ ನಿರ್ಬಂಧ ಹೇರಿತ್ತು. ಆದರೆ ಈ ನಿಷೇಧವನ್ನು ಪಾಕ್ ಜುಲೈ 16ರಂದು ತೆರವುಗೊಳಿಸಿತ್ತು. ಏರ್ ಇಂಡಿಯಾ ಸೇರಿದಂತೆ 50 ವಿಮಾನಗಳು ಪ್ರತಿದಿನ ಪಾಕಿಸ್ತಾನದ ವಾಯು ಮಾರ್ಗದಲ್ಲಿ ಸಂಚರಿಸುತ್ತವೆ. ಇದರಲ್ಲಿ ಅಮೆರಿಕ, ಯುರೋಪ್ ಮತ್ತು ಮಿಡಲ್ ಈಸ್ಟ್ ದೇಶಗಳಿಗೆ ತೆರಳುವ ವಿಮಾನಗಳು ಕೂಡ ಸೇರಿವೆ.