ಕೆಲ ತಿಂಗಳ ಹಿಂದೆ ಪಾಕ್‌ ಪ್ರೇರಿತ ಆತ್ಮಹತ್ಯಾ ಬಾಂಬರ್‌ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತದ ಯೋಧರ ಮೇಲೆ ಭಾರಿ ದಾಳಿ ನಡೆಸಿದ ಬಳಿಕ ಭಾರತವು ಪಾಕಿಸ್ತಾನದ ಉಗ್ರರ ಶಿಬಿರಗಳಿದ್ದ ಬಾಲಾಕೋಟ್‌ ಮೇಲೆ ದೊಡ್ಡ ಪ್ರಮಾಣದಲ್ಲಿ ವಾಯುದಾಳಿ ನಡೆಸಿತ್ತು. ಅದರಿಂದ ಸಿಟ್ಟಿಗೆದ್ದ ಪಾಕಿಸ್ತಾನವು ಭಾರತದ ವಿಮಾನಗಳು ತನ್ನ ವಾಯುಸೀಮೆ ಬಳಸಿಕೊಳ್ಳದಂತೆ ನಿಷೇಧ ಹೇರಿತ್ತು. ಮೊನ್ನೆಯಷ್ಟೇ ಅದನ್ನು ತೆರವುಗೊಳಿಸಿದೆ.

ಏಕೆಂದರೆ ಅದರಿಂದ ಪಾಕಿಸ್ತಾನಕ್ಕೆ ಭಾರಿ ಪ್ರಮಾಣದಲ್ಲಿ ನಷ್ಟವಾಗಿದೆ. ಆಕಾಶ ಎಲ್ಲರಿಗೂ ಸೇರಿದ್ದು ಎಂಬುದು ಜನಸಾಮಾನ್ಯರ ಭಾವನೆ. ಆದರೆ, ಪ್ರತಿಯೊಂದು ದೇಶವೂ ತನ್ನ ಆಗಸವನ್ನು ಬೇರೆ ದೇಶ ಬಳಸಿಕೊಳ್ಳುವುದಕ್ಕೆ ಶುಲ್ಕ ವಿಧಿಸುತ್ತದೆ. ಈ ಶುಲ್ಕ ಹೇಗೆ ನಿರ್ಧಾರವಾಗುತ್ತದೆ? ಭಾರತದ ವಾಯುಸೀಮೆ ಬಳಕೆಗೆ ಎಷ್ಟುಶುಲ್ಕ ವಿಧಿಸಲಾಗುತ್ತಿದೆ? ಕುತೂಹಲಕಾರಿ ಮಾಹಿತಿ ಇಲ್ಲಿದೆ.

ವಾಹನಗಳಿಗೆ ರಸ್ತೆ ಟೋಲ್‌ ಇರುವಂತೆ ವಿಮಾನಗಳಿಗೆ ಏರ್‌ಟೋಲ್‌!

ಒಂದು ದೇಶದ ವಿಮಾನವೊಂದು ಬೇರೊಂದು ದೇಶದಲ್ಲಿ ಲ್ಯಾಂಡ್‌ ಆಗಲು ಮತ್ತು ಆ ದೇಶದ ವಾಯುಸೀಮೆ ಬಳಸಿಕೊಂಡು ಮತ್ತೊಂದು ದೇಶಕ್ಕೆ ಸಾಗಲು ಶುಲ್ಕ ಪಾವತಿಸಬೇಕು. ನಾವೆಲ್ಲ ರಸ್ತೆ ಬಳಸಲು ಟೋಲ್‌ ಪಾವತಿಸುವಂತೆ ವಿಮಾನಗಳು ಏರ್‌ಟೋಲ್‌ ಪಾವತಿಸುತ್ತವೆ. ಆಯಾ ದೇಶಗಳ ನಾಗರಿಕ ವಿಮಾನಯಾನ ಸಂಸ್ಥೆಗಳಿಗೆ ಈ ಹಣ ಪಾವತಿಸಬೇಕಾಗುತ್ತದೆ.

ವಿಮಾನದ ವಿಧ, ಎಷ್ಟುದೂರದ ವಾಯುಸೀಮೆಯನ್ನು ಬಳಸಿಕೊಳ್ಳಲಾಗುತ್ತದೆ ಮತ್ತು ವಿಮಾನದ ತೂಕದ ಆಧಾರದ ಮೇಲೆ ಶುಲ್ಕ ನಿಗದಿ ಮಾಡಲಾಗುತ್ತದೆ. ಈ ಬಗ್ಗೆ ಎಲ್ಲಾ ದೇಶಗಳಲ್ಲೂ ಏಕರೀತಿಯ ನಿಯಮಗಳಿಲ್ಲ. ಒಂದೊಂದು ದೇಶದಲ್ಲಿ ಒಂದೊಂದು ರೀತಿಯ ನಿಯಮಗಳಿವೆ. ಹಾಗೆಯೇ ಎಲ್ಲ ವಿಮಾನಗಳಿಗೆ ಏಕರೂಪದ ಶುಲ್ಕವನ್ನೂ ವಿಧಿಸುವುದಿಲ್ಲ.

ಉದಾಹರಣೆಗೆ ಬೋಯಿಂಗ್‌-737 ಹಾರಾಟಕ್ಕೆ ಪಾಕಿಸ್ತಾನ 39,956 ರು. (580 ಡಾಲರ್‌) ಶುಲ್ಕ ವಿಧಿಸುತ್ತದೆ. ಅದೇ ಬೋಯಿಂಗ್‌ 747ಗೆ ಇದಕ್ಕಿಂತ ಹೆಚ್ಚು ಶುಲ್ಕ ವಿಧಿಸಲಾಗುತ್ತದೆ. ವಿಮಾನ ಹಾರಾಟದ ವೇಳೆ ಏರ್‌ ಟ್ರಾಫಿಕ್‌ ನಿಯಂತ್ರಣಕ್ಕೆಂದು ಈ ಶುಲ್ಕ ವಿಧಿಸಲಾಗುತ್ತದೆ. ಏರ್‌ಟೋಲ್‌ ಇಂದು ಹಲವಾರು ದೇಶಗಳಿಗೆ ಸಾಕಷ್ಟುಆದಾಯವನ್ನು ಕೂಡ ತಂದುಕೊಡುತ್ತಿದೆ.

ಪಾಕಿಸ್ತಾನ ಕೈಸುಟ್ಟುಕೊಂಡಿದ್ದು ಏಕೆ?

ಪುಲ್ವಾಮದಲ್ಲಿ ಆತ್ಮಾಹುತಿ ಬಾಂಬ್‌ ದಾಳಿ ನಡೆದ ಬಳಿಕ ಭಾರತೀಯ ವಾಯುಪಡೆ ಫೆ.26ರಂದು ಪಾಕಿಸ್ತಾನದ ಬಾಲಾಕೋಟ್‌ ಉಗ್ರರ ಶಿಬಿರದ ಮೇಲೆ ವಾಯುದಾಳಿ ನಡೆಸಿತ್ತು. ಹಾಗಾಗಿ ಭಾರತ ಇನ್ನಷ್ಟುದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಆತಂಕದಿಂದ ಪಾಕಿಸ್ತಾನ ತನ್ನ ವಾಯುಸೀಮೆಯಲ್ಲಿ ಭಾರತದ ನಾಗರಿಕ ವಿಮಾನಗಳ ಸಂಚಾರಕ್ಕೆ ನಿಷೇಧ ಹೇರಿತ್ತು.

ಗಡಿಯ ಮುಂಚೂಣಿ ಸ್ಥಳಗಳಲ್ಲಿ ಭಾರತ ನಿಯೋಜಿಸಿರುವ ಯುದ್ಧವಿಮಾನಗಳನ್ನು ಹಿಂತೆಗೆದುಕೊಳ್ಳದ ಹೊರತು ಭಾರತೀಯ ವಿಮಾನಗಳಿಗೆ ತನ್ನ ವಾಯುಸೀಮೆಯನ್ನು ಮುಕ್ತ ಗೊಳಿಸುವುದಿಲ್ಲ ಎಂದು ಪಾಕ್‌ ಪಟ್ಟುಹಿಡಿದಿತ್ತು. ಆದರೆ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಪಾಕಿಸ್ತಾನಕ್ಕೆ ತನ್ನ ಈ ನಿರ್ಣಯದಿಂದ ಮತ್ತಷ್ಟುಹೊಡೆತ ಬಿದ್ದಿತ್ತು. ಹೀಗಾಗಿ ಇತ್ತೀಚೆಗೆ ತನ್ನ ನಿಲುವು ಬದಲಿಸಿದ ಪಾಕ್‌, ಮಂಗಳವಾರ (ಜು.16)ದಿಂದ ಜಾರಿಗೆ ಬರುವಂತೆ ತನ್ನ ವೈಮಾನಿಕ ವಲಯದಲ್ಲಿ ಭಾರತೀಯ ವಿಮಾನಗಳ ಹಾರಾಟಕ್ಕೆ ಅನುವು ಮಾಡಿಕೊಟ್ಟಿದೆ.

ಪಾಕ್‌ನ ಈ ಆತುರದ ನಿರ್ಣಯದಿಂದ ದಿನಕ್ಕೆ ಸುಮಾರು 400 ವಿಮಾನಗಳು ಪಾಕಿಸ್ತಾನದ ವಾಯುಸೀಮೆ ಬದಲಿಸಿ ಹಾರಾಡಬೇಕಿತ್ತು. ಇದರಿಂದ ಪಾಕಿಸ್ತಾನಕ್ಕೆ ಸುಮಾರು 850 ಕೋಟಿ ರು. ನಷ್ಟವುಂಟಾಗಿತ್ತು.

ಅಮೆರಿಕದ ಪ್ರಯಾಣ 4 ತಾಸು ವಿಳಂಬ!

ಪಾಕಿಸ್ತಾನ ತನ್ನ ವಾಯುಸೀಮೆಯಲ್ಲಿ ನಿಷೇಧ ಹೇರಿದ್ದರಿಂದ ಭಾರತದ ವಿಮಾನಗಳು ಬೇರೆ ವಾಯುದಾರಿಯಲ್ಲಿ ಹಾರಬೇಕಿತ್ತು. ಉತ್ತರ ಭಾರತದಿಂದ ಹೊರಡುವ ವಿಮಾನಗಳು ಗುಜರಾತ್‌ ಅಥವಾ ಮಹಾರಾಷ್ಟ್ರದ ಮೂಲಕ ಯೂರೋಪ್‌ ಹಾಗೂ ಇತರ ಪಾಶ್ಚಾತ್ಯ ದೇಶಗಳಿಗೆ ಪ್ರಯಾಣಿಸಬೇಕಿತ್ತು. ಇದರಿಂದಾಗಿ ಸುಮಾರು 70ರಿಂದ 80 ನಿಮಿಷ ಹೆಚ್ಚುವರಿ ಸಮಯ ಹಾಗೂ ಹೆಚ್ಚುವರಿ ಇಂಧನ ವ್ಯಯಿಸಬೇಕಿತ್ತು.

ಭಾರತ ಮತ್ತು ಅಮೆರಿಕ ನಡುವಿನ ವಿಮಾನ ಪ್ರಯಾಣದ ಅವಧಿ 3-4 ಗಂಟೆ ಹೆಚ್ಚಳವಾಗಿತ್ತು. ಭಾರತ ಮತ್ತು ಯೂರೋಪ್‌ ನಡುವಿನ ಪ್ರಯಾಣದ ಅವಧಿ 1 ಗಂಟೆ ಹೆಚ್ಚಳವಾಗಿತ್ತು. ಒಟ್ಟಾರೆ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ .550 ಕೋಟಿ ನಷ್ಟಉಂಟಾಗಿತ್ತು.

ಆದರೆ ನಿಷೇಧ ಈಗ ತೆರವುಗೊಳಿಸಿರುವುದರಿಂದ ಪಾಕ್‌ ವಾಯುಮಾರ್ಗದ ಮೂಲಕವಾಗಿ ಅಮೆರಿಕಕ್ಕೆ ಪ್ರಯಾಣಿಸುವ ಏರ್‌ ಇಂಡಿಯಾ ವಿಮಾನವೊಂದಕ್ಕೆ ಒಂದು ಕಡೆಯ ಪ್ರಯಾಣಕ್ಕೆ .20 ಲಕ್ಷ ಉಳಿತಾಯವಾಗಲಿದೆ. ಅದೇ ರೀತಿ ಯೂರೋಪ್‌ಗೆ ತೆರಳುವ ವಿಮಾನಕ್ಕೆ .5 ಲಕ್ಷ ಉಳಿತಾಯವಾಗಲಿದೆ.

ವಿಮಾನಯಾನ ಸಂಸ್ಥೆಗಳಿಗೆ ಆದ ನಷ್ಟ  ಏರ್‌ಇಂಡಿಯಾ ಸ್ಪೈಸ್‌ ಜೆಟ್‌ ಗೋ ಏರ್‌

.491 ಕೋಟಿ .30.7 ಕೋಟಿ .2.1 ಕೋಟಿ

850 ಕೋಟಿ ರು. - ಪಾಕ್‌ಗೆ ಆದ ನಷ್ಟ

550 ಕೋಟಿ ರು. - ಭಾರತಕ್ಕೆ ಆದ ನಷ್ಟ

ವಿದೇಶಿ ವಿಮಾನಗಳಿಗೆ ಭಾರತ ಎಷ್ಟುಶುಲ್ಕ ವಿಧಿಸುತ್ತದೆ?

ವಿದೇಶಿ ವಿಮಾನಗಳು ಭಾರತದ ವಾಯುಸೀಮೆಯಲ್ಲಿ ಹಾರಾಟ ನಡೆಸಲು ಮತ್ತು ಲ್ಯಾಂಡ್‌ ಆಗಲು ವಿಧಿಸುವ ಶುಲ್ಕವನ್ನು ಡಿಜಿಸಿಎ (ಡೈರೆಕ್ಟೋರೇಟ್‌ ಜನರಲ್‌ ಆಫ್‌ ಸಿವಿಲ್‌ ಏವಿಯೇಶನ್‌) ನಿರ್ಧರಿಸುತ್ತದೆ. ದೇಶೀಯ ವಿಮಾನಗಳಿಗೆ ವಿಧಿಸುವ ಶುಲ್ಕಕ್ಕಿಂತ ಅಂತಾರಾಷ್ಟ್ರೀಯ ವಿಮಾನಗಳಿಗೆ ವಿಧಿಸುವ ಶುಲ್ಕ ಹೆಚ್ಚಾಗಿರುತ್ತದೆ.

ಬೇರೊಂದು ದೇಶದ ವಿಮಾನ ಭಾರತದಲ್ಲಿ ಲ್ಯಾಂಡ್‌ ಆಗಲು 5330 ರು. ನಿಗದಿಪಡಿಸಲಾಗಿದೆ. ವಾಯುಸೀಮೆ ಬಳಕೆಗೆ 5080 ರು. ಮೂಲಶುಲ್ಕ ವಿಧಿಸಲಾಗುತ್ತದೆ. ಜೊತೆಗೆ, ಆ ವಿಮಾನ ಬಳಸಿಕೊಂಡ ವಾಯುಸೀಮೆಯ ಅಂತರ ಮತ್ತು ವಿಮಾನ ಟೇಕ್‌ ಆಫ್‌ ಆಗುವ ಮುಂಚೆ ಇದ್ದ ತೂಕದ ಆಧಾರದ ಮೇಲೆ ಈ ಶುಲ್ಕ ಇನ್ನಷ್ಟುಹೆಚ್ಚಾಗುತ್ತದೆ.

ಅಮೆರಿಕ, ಕೆನಡಾದ ಆಕಾಶ ದುಬಾರಿಯೇನಲ್ಲ

ಕೆಲವು ದೇಶಗಳು ವಿಮಾನ ಹಾರಾಟಕ್ಕೆ ವಾಯುಸೀಮೆ ನೀಡಲು ದುಬಾರಿ ಶುಲ್ಕ ವಿಧಿಸುತ್ತವೆ. ಆದರೆ ಕೆನಡಾ, ಭಾರತದಂತಹ ದೇಶಗಳ ವಾಯುಸೀಮೆ ಅಷ್ಟೇನೂ ದುಬಾರಿ ಅಲ್ಲ. ಇಲ್ಲಿ ವಿಮಾನಗಳ ತೂಕ ಮತ್ತು ಬಳಸಿಕೊಂಡ ವಾಯುಸೀಮೆಯ ಅಂತರದ ಆಧಾರದ ಮೇಲೆ ಶುಲ್ಕ ವಿಧಿಸಲಾಗುತ್ತಿದೆ.

ಯುರೋಪ್‌ ವಿಮಾನಗಳಿಗೆ ಅವುಗಳು ಸಾಗುವ ದೂರ, ತೂಕದ ಆಧಾರದಲ್ಲಿ ಶುಲ್ಕ ನಿಗದಿಯಾಗುತ್ತದೆ. ವಿಮಾನವೊಂದು ಪ್ರಯಾಣಿಸುವ ದೂರವನ್ನು ಆಧರಿಸಿ ಅಮೆರಿಕವು ಶುಲ್ಕ ವಿಧಿಸುತ್ತದೆ. ಅಮೆರಿಕದ ವಾಯುಗಡಿಯಲ್ಲಿ ಬರುವ ಸಮುದ್ರ ಮಾರ್ಗದಲ್ಲಿ ಯಾವುದೇ ದೇಶದ ವಿಮಾನವೊಂದು 100 ನಾಟಿಕಲ… ಮೈಲು (185.2 ಕಿ.ಮೀ) ಪ್ರಯಾಣಿಸಿತೆಂದರೆ 1,825 ರು. (26.51 ಡಾಲರ್‌) ತೆರಬೇಕು. ಅದೇ ರೀತಿಯಾಗಿ 100 ಮೈಲುಗಳಷ್ಟುಭೂಪ್ರದೇಶದಲ್ಲಿ ಪ್ರಯಾಣಿಸಿದರೆ 4200 ರು. (61.75 ಡಾಲರ್‌) ಹಣ ಪಾವತಿಸಬೇಕಿರುತ್ತದೆ. ಹೀಗೆ ಶುಲ್ಕವು ನಿರ್ಧರಿತವಾಗಿರುತ್ತದೆ.

ದೇಶದಿಂದ ದೇಶಕ್ಕೆ ಶುಲ್ಕ ಏಕೆ ಬದಲಾಗುತ್ತದೆ?

1994ರಲ್ಲಿ ಅಮೆರಿಕವು ಶಿಕಾಗೋದಲ್ಲಿ ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಮಾವೇಶ ಆಯೋಜಿಸಿತ್ತು. ವಾಣಿಜ್ಯ ವಿಮಾನಗಳು ವಾಯುನೆಲೆ ಪ್ರವೇಶಿಸುವುದರ ಕುರಿತು ವಿವಿಧ ದೇಶಗಳಲ್ಲಿ ಜಾರಿಯಲ್ಲಿದ್ದ ನಿರ್ಬಂಧಗಳನ್ನು ಕೊನೆಗೊಳಿಸಲು ಸಮಾವೇಶದಲ್ಲಿ ಪ್ರಯತ್ನಿಸಲಾಗಿತ್ತು. ಆದರೆ ಭಾಗಿಯಾಗಿದ್ದ ದೇಶಗಳು ಒಮ್ಮತದ ಒಪ್ಪಂದಕ್ಕೆ ಬಾರದೆ ಸಮಾವೇಶ ವಿಫಲವಾಗಿತ್ತು.

1990 ಕ್ಕೂ ಮೊದಲು ಸೋವಿಯತ್‌ ಒಕ್ಕೂಟ ರಾಷ್ಟ್ರಗಳು ತಮ್ಮ ವಾಯುಸೀಮೆಯನ್ನು ಬೇರೆ ದೇಶಗಳು ಬಳಸಿಕೊಳ್ಳಲು ನಿರ್ಬಂಧ ಹೇರಿದ್ದವು. ಹಾಗಾಗಿ ದೂರದ ಹಾದಿ ಬಳಸಿ ಪೂರ್ವ ಏಷ್ಯಾ ತಲುಪಬೇಕಿತ್ತು. ಅದಾಗ್ಯೂ, 1990ರ ದಶಕದಲ್ಲಿ ಕಮ್ಯುನಿಸ್ಟ್‌ ದೇಶಗಳಾಗಿದ್ದ ರಷ್ಯಾ ಮತ್ತು ಚೀನಾ ದೇಶಗಳು ಕಮ್ಯುನಿಸ್ಟೇತರ ದೇಶಗಳಿಗೂ ತಮ್ಮ ವಾಯುಗಡಿಯನ್ನು ಮುಕ್ತಗೊಳಿಸುವ ನಿರ್ಧಾರ ಕೈಗೊಂಡವು. ಇದರಿಂದಾಗಿ ವಿವಿಧ ದೇಶಗಳ ನಡುವಿನ ವಿಮಾನ ಪ್ರಯಾಣದ ಅವಧಿ ಗಮನಾರ್ಹವಾಗಿ ಕಡಿಮೆಯಾಗಿ ವಿಮಾನಯಾನ ಸಾಕಷ್ಟುಅಗ್ಗವಾಯಿತು.

ಸಮುದ್ರದ ಮೇಲೆ ಹಾರಲೂ ಹಣ ನೀಡಬೇಕೇ?

ಪೆಸಿಫಿಕ್‌ ಹಾಗೂ ಅಂಟ್ಲಾಂಟಿಕ್‌ ಸಾಗರದ ಮೇಲಿನ ಹೆಚ್ಚಿನ ವೈಮಾನಿಕ ಮಾರ್ಗದ ನಿಯಂತ್ರಣವನ್ನು ಅಮೆರಿಕ ಹೊಂದಿದೆ. ಇದರನ್ವಯ ವಿಮಾನವೊಂದು ನ್ಯೂಜಿಲೆಂಡ್‌ನಿಂದ ಕೆನಡಾ ದೇಶಕ್ಕೆ ಹಾರಾಟ ನಡೆಸುತ್ತಿದೆ ಎಂದಾದರೆ ಆ ಮಾರ್ಗದ ವಾಯಗಡಿಯನ್ನು ಬಳಸಿಕೊಂಡಿದ್ದಕ್ಕಾಗಿ ನಿರ್ದಿಷ್ಟಮೊತ್ತದ ಹಣವನ್ನು ಅಮೆರಿಕಕ್ಕೆ ಪಾವತಿಸಬೇಕು.

ಇದು ಅಮೆರಿಕಕ್ಕೆ ಮಾತ್ರ ಸೀಮಿತವಲ್ಲ. ಎಲ್ಲ ದೇಶಗಳೂ ತಮ್ಮ ವ್ಯಾಪ್ತಿಯಲ್ಲಿರುವ ಸಮುದ್ರದ ಮೇಲೆ ವಿದೇಶಿ ವಿಮಾನಗಳು ಹಾರಾಡಿದರೆ ಅದಕ್ಕೂ ಶುಲ್ಕ ವಸೂಲಿ ಮಾಡುತ್ತವೆ. ಭಾರತವೂ ಬಂಗಾಳ ಕೊಲ್ಲಿ ಹಾಗೂ ಹಿಂದು ಮಹಾಸಾಗರಲ್ಲಿ ತನ್ನ ಜಲಗಡಿಯ ಮೇಲೆ ಹಾರುವ ವಿಮಾನಗಳಿಗೆ ಶುಲ್ಕ ವಿಧಿಸುತ್ತದೆ.

ಇಸ್ರೇಲ್‌, ಕತಾರ್‌ ವಿಮಾನ ಅರಬ್‌ ದೇಶಗಳಲ್ಲಿ ಹಾರುವಂತಿಲ್ಲ

ದೇಶವೊಂದರ ವಾಯುಪ್ರದೇಶವನ್ನು ವಿಮಾನದ ಹಾರಾಟಕ್ಕೆ ಮುಕ್ತವಾಗಿಡುವಲ್ಲಿ ಹಣದ ಹರಿವೇ ಮುಖ್ಯ ಪಾತ್ರ ವಹಿಸುತ್ತದೆ. ಆದರೆ, ಕೆಲವೊಮ್ಮೆ ದೇಶ-ದೇಶಗಳು ಹೊಂದಿರುವ ರಾಜಕೀಯ ಸ್ನೇಹ ಸಂಬಂಧ, ವೈರತ್ವಗಳೂ ಇಲ್ಲಿ ಪಾತ್ರ ವಹಿಸುತ್ತವೆ.

ಗಡಿ, ಜಲ ಮತ್ತಿತರ ವಿಚಾರಗಳ ಕುರಿತಾಗಿ ದೇಶವೊಂದರ ಮೇಲೆ ರಾಜತಾಂತ್ರಿಕ ಒತ್ತಡ ಹೇರಲೂ ಇಂದು ವಾಯುಪ್ರದೇಶ ನಿರ್ಬಂಧವನ್ನು ಸಾಧನವಾಗಿ ಬಳಸಿಕೊಳ್ಳಲಾಗುತ್ತಿದೆ. ಉದಾಹರಣೆಗೆ ಇಸ್ರೆಲ್ಗೆ ತೆರಳುವ ಅಥವಾ ಇಸ್ರೇಲ್‌ನಿಂದ ಹಾರಾಟ ನಡೆಸುವ ವಿಮಾನಗಳಿಗೆ ತಮ್ಮ ವಾಯುಸೀಮೆ ಪ್ರವೇಶಿಸಲು ಅರಬ್ ದೇಶಗಳು ಅವಕಾಶ ನೀಡುವುದಿಲ್ಲ.

ಕತಾರ್‌ ದೇಶವು ಭಯೋತ್ಪಾದನೆಯನ್ನು ಪ್ರಾಯೋಜಿಸುತ್ತದೆ ಎಂದು ಆರೋಪಿಸಿ ಅರಬ್ ದೇಶಗಳಾದ ಬಹರೇನ್‌, ಈಜಿಪ್ಟ್‌, ಸೌದಿ ಅರೇಬಿಯಾ ಮತ್ತು ಯುಎಇ ದೇಶಗಳು ಕತಾರ್‌ನತ್ತ ತೆರಳುವ ಮತ್ತು ಆಗಮಿಸುವ ವಿಮಾನಗಳಿಗೆ ನಿರ್ಬಂಧ ಹೇರಿವೆ. ಇದೇ ರೀತಿ ರಾಜಕೀಯ ಕಾರಣಗಳನ್ನು ಮುಂದೊಡ್ಡಿ ತೈವಾನ್‌ಗೆ ತನ್ನ ವಾಯುಸೀಮೆ ಬಳಸಿಕೊಂಡು ವಿಮಾನಗಳು ಹಾರಾಟ ನಡೆಸುವುದಕ್ಕೆ ಚೀನಾ ಅವಕಾಶ ನೀಡಿಲ್ಲ.

ಇಲ್ಲಿ ನಿಷೇಧ ಸಾಮಾನ್ಯ

ಎಲ್ಲ ದೇಶಗಳೂ ತಮ್ಮಲ್ಲಿರುವ ಸೂಕ್ಷ್ಮ ಸ್ಥಳಗಳ ಮೇಲೆ ವಿಮಾನ ಹಾರಾಟ ನಿಷೇಧಿಸಿರುತ್ತವೆ. ಭಾರತದಲ್ಲಿ ಆಗ್ರಾದ ತಾಜ್‌ ಮಹಲ್‌, ಸಂಸತ್‌ ಭವನ, ರಾಷ್ಟ್ರಪತಿ ಭವನ, ಆಂಧ್ರಪ್ರದೇಶದ ತಿರುಪತಿ ವೆಂಕಟರಮಣ ದೇವಾಲಯ, ಶ್ರೀಹರಿಕೋಟಾ ಉಪಗ್ರಹ ಉಡ್ಡಯನ ಕೇಂದ್ರ ಮತ್ತಿತರ ಪ್ರದೇಶಗಳ ಮೇಲೆ ವಿಮಾನಗಳು ಹಾರುವಂತಿಲ್ಲ.

ಕಾರ್ತಿಕ್‌ ಕೆ ಎಸ್‌ ಕೊಪ್ಪ