ಇಸ್ಲಾಮಾಬಾದ್‌[ಜು.17]: ಫೆ.26ರಂದು ಭಾರತ ಬಾಲಾಕೊಟ್‌ ಉಗ್ರರ ನೆಲೆಯ ಮೇಲೆ ವಾಯು ದಾಳಿ ನಡೆಸಿದ ಬಳಿಕ ತನ್ನ ವಾಯುಸೀಮೆಯನ್ನು, ಭಾರತದ ವಿಮಾನಗಳ ಸಂಚಾರಕ್ಕೆ ನಿಷೇಧಿಸಿದ್ದ ಪಾಕಿಸ್ತಾನ ದಿಢೀರನೆ ತನ್ನ ನಿಲುವು ಬದಲಿಸಿದೆ. ಮಂಗಳವಾರದಿಂದಲೇ ಜಾರಿಗೆ ಬರುವಂತೆ ಭಾರತದ ವಿಮಾನಗಳ ಹಾರಾಟಕ್ಕೆ ಅನುವು ಮಾಡಿಕೊಟ್ಟಿದೆ.

ಗಡಿಯ ಮುಂಚೂಣಿ ಸ್ಥಳಗಳಿಂದ ಭಾರತ ತನ್ನ ಯುದ್ಧ ವಿಮಾನ ಹಿಂಪಡೆಯದ ಹೊರತೂ ಭಾರತಕ್ಕೆ ವಾಯುಸೀಮೆ ಮುಕ್ತಗೊಳಿಸುವುದಿಲ್ಲ ಎಂದಿದ್ದ ಪಾಕ್‌, ಇದೀಗ ತನ್ನ ನಿಲುವು ಬದಲಿಸಲು ಸೌಹಾರ್ದತನಕ್ಕಿಂತಲೂ ಆರ್ಥಿಕ ಹೊಡೆತವೇ ಕಾರಣ ಎನ್ನಲಾಗುತ್ತಿದೆ.

ಪಾಕ್‌, ತನ್ನ ವಾಯು ಸೀಮೆಯನ್ನು ಭಾರತಕ್ಕೆ ನಿಷೇಧಿಸಿದ್ದರಿಂದ ಭಾರತದ ವಿಮಾನಯಾನ ಸಂಸ್ಥೆಗಳಿಗೆ 550 ಕೋಟಿ ರು. ನಷ್ಟಉಂಟಾದರೆ, ಪಾಕಿಸ್ತಾನ ಕೂಡ 685 ಕೋಟಿ ರು.ನಷ್ಟುನಷ್ಟಅನುಭವಿಸಿದೆ. ಅಲ್ಲದೇ ತನ್ನ ವಾಯು ಮಾರ್ಗವನ್ನು ಬಳಸಿಕೊಂಡಿದ್ದಕ್ಕೆ ವಿಧಿಸುತ್ತಿದ್ದ ಶುಲ್ಕದಿಂದಲೂ ಪಾಕಿಸ್ತಾನ ವಿಮಾನಯಾನ ಸಂಸ್ಥೆ ಸಾಕಷ್ಟುಹಣಗಳಿಸುತ್ತಿತ್ತು. ಹೀಗಾಗಿ ಪಾಕಿಸ್ತಾನ ತನ್ನ ಕಠಿಣ ನಿಲುವನ್ನು ಬದಲಿಸಿದೆ.

ಪಾಕಿಸ್ತಾನ ತನ್ನ ವಾಯು ಪ್ರದೇಶವನ್ನು ಸ್ಥಗಿತಗೊಳಿಸಿದ್ದರಿಂದ ಉತ್ತರ ಭಾರತದ ವಿಮಾನಗಳು ಗುಜರಾತ್‌ ಇಲ್ಲವೇ ಮಹಾರಾಷ್ಟ್ರದ ಮೂಲಕ ಯುರೋಪ್‌ ಹಾಗೂ ಇತರ ಪಾಶ್ಚಾತ್ಯ ದೇಶಗಳಿಗೆ ಪ್ರಯಾಣಬೆಳೆಸಬೇಕಿತ್ತು. ದೆಹಲಿ, ಅಮೃತಸರ ಹಾಗೂ ಲಖನೌ ಮೂಲಕ ಹಾರಾಟ ಕೈಗೊಳ್ಳುವ ವಿಮಾನಗಳು ಭಾರೀ ತೊಂದರೆ ಎದುರಿಸಿದ್ದವು. ಹೀಗಾಗಿ ಸುಮಾರು 70ರಿಂದ 80 ನಿಮಿಷ ಹೆಚ್ಚುವರಿ ಸಮಯ ಹಾಗೂ ಇಂಧನವನ್ನು ವ್ಯಯಿಸಬೇಕಾಗಿತ್ತು.

ಇದೀಗ ಪಾಕಿಸ್ತಾನ ವಾಯು ಮಾರ್ಗದ ಮೇಲಿನ ನಿಷೇಧವನ್ನು ತೆರವುಗೊಳಿಸಿರುವುದರಿಂದ ಅಮೆರಿಕಕ್ಕೆ ಪ್ರಯಾಣ ಬೆಳೆಸುವ ಏರ್‌ ಇಂಡಿಯಾ ವಿಮಾನವೊಂದಕ್ಕೆ ಒಂದು ಕಡೆಯ ಪ್ರಯಾಣಕ್ಕೆ 20 ಲಕ್ಷ ರು. ಉಳಿತಾಯವಾಗಲಿದೆ. ಅದೇ ರೀತಿ ಯುರೋಪ್‌ಗೆ ತೆರಳುವ ವಿಮಾನಕ್ಕೆ 5 ಲಕ್ಷ ರು. ಉಳಿತಾಯವಾಗಲಿದೆ.