ನವದೆಹಲಿ(ಮಾ.29): ಕೆಲವೊಮ್ಮೆ ಪಾಕ್ ಏನು ಹೇಳಲು ಹೊರಟಿದೆ ಎಂಬುದು ಅರ್ಥವೇ ಆಗೋದಿಲ್ಲ. ಇನ್ನೂ ಕೆಲವೊಮ್ಮೆ ಅರ್ಥ ಮಾಡಿಕೊಳ್ಳುವ ಅವಶ್ಯಕತೆಯೇ ಇರೋದಿಲ್ಲ.

ತನ್ನ ಉಗ್ರ ಪ್ರೇಮ ಜಗಜ್ಜಾಹೀರಾಗಿದ್ದರೂ, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವುದಾಗಿ ಹೇಳುವ ಪಾಕಿಸ್ತಾನವನ್ನು ಅರ್ಥ ಮಾಡಿಕೊಳ್ಳುವ ಅವಶ್ಯಕತೆಯಾದರೂ ಏನಿದೆ ಹೇಳಿ?

ಪುಲ್ವಾಮಾ ಉಗ್ರ ದಾಳಿಯ ಬಳಿಕ ಬಾಲಾಕೋಟ್ ನಲ್ಲಿ ಜೈಷ್ ಉಗ್ರ ನೆಲೆಗಳ ಮೇಲೆ ಭಾರತ ನಡೆಸಿದ ದಾಳಿಯಿಂದ ಬೆಚ್ಚಿ ಬಿದ್ದಿರುವ ಪಾಕಿಸ್ತಾನ, ಭಾರತದ ಗಡಿ ಪ್ರದೇಶದಲ್ಲಿರುವ ಉಗ್ರ ಕ್ಯಾಂಪ್‌ಗಳನ್ನು ಮುಚ್ಚಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಎರಡೂ ದೇಶಗಳ ನಡುವಿನ ಉದ್ವಿಗ್ನ ಸ್ಥಿತಿ ಇನ್ನು ಶಾಂತವಾಗಿಲ್ಲ. ಹೀಗಿರುವಾಗ ಪಿಒಕೆಯಲ್ಲಿರುವ ಉಗ್ರ ಕ್ಯಾಂಪ್‌ಗಳನ್ನು ಹಾಗೆಯೇ ಉಳಿಸಿಕೊಂಡರೆ ಮತ್ತೆ ಭಾರತ ದಾಳಿ ನಡೆಸುವ ಸಾಧ್ಯತೆ ಇದ್ದೇ ಇದೆ ಎಂಬ ಭೀತಿಯಿಂದ ಪಾಕ್‌ ನರಳುತ್ತಿದೆ.

ಹೀಗಾಗಿ ತಕ್ಷಣವೇ ಈ ಕ್ಯಾಂಪ್‌ಗಳನ್ನು ಮುಚ್ಚುವುದು ಸೂಕ್ತ ಎಂಬ ನಿರ್ಧಾರಕ್ಕೆ ಇತ್ತೀಚೆಗೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂಬ ಮಾಹಿತಿಯನ್ನು ಗುಪ್ತಚರ ಮಾಹಿತಿ ಕಲೆ ಹಾಕಲಾಗಿದೆ.

ಮಾ.16ರಂದು ಪಿಒಕೆಯ ನಿಕಿಯಾಲ್ ಪ್ರದೇಶದಲ್ಲಿ ನಡೆದ ಸಭೆಯಲ್ಲಿ ಐಎಸ್ಐ ಮತ್ತು ಲಷ್ಕರ್ ಉಗ್ರ ಸಂಘಟನೆಗಳ ನಾಯಕರು ಭಾಗಿಯಾಗಿದ್ದು, ಅಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗುಪ್ತಚರ ಮಾಹಿತಿ ತಿಳಿಸಿದೆ.

ಕೂಡಲೇ ಕೋಟ್ಲಿ ಮತ್ತು ನಿಕಿಯಾಲ್ ಪ್ರದೇಶದಲ್ಲಿ ನಿರ್ವಹಿಸಲಾಗುತ್ತಿದ್ದ 4 ಉಗ್ರ ಕ್ಯಾಂಪ್‌ಗಳನ್ನು ಮುಚ್ಚಲಾಗಿದೆ. ಈ ಕ್ಯಾಂಪ್‌ಗಳನ್ನು ಲಷ್ಕರ್ ಉಗ್ರ ಅಶ್ಫಾಕ್ ಬರಲ್ ಎಂಬಾತ ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ.

ಪುಲ್ವಾಮಾ ದಾಳಿಯಲ್ಲಿ ತನ್ನ ಕೈವಾಡ ನಿರಾಕರಿಸಿದ್ದ ಪಾಕ್, ದಾಳಿಯ ಕುರಿತಾದ ಪ್ರಾಥಮಿಕ ತನಿಖಾ ವರದಿಯನ್ನು ನಿನ್ನೆಯಷ್ಟೇ ಭಾರತ ಸರ್ಕಾರಕ್ಕೆ ಸಲ್ಲಿಸಿತ್ತು. ಆದರೆ ಭಾರತದ ವಾಯುದಾಳಿ ಕುರಿತು ಚರ್ಚೆಗೆ ಆಹ್ವಾನ ನೀಡಿತ್ತು.