ಇಸ್ಲಾಮಾಬಾದ್(ಸೆ.12): ಪಾಕಿಸ್ತಾನದಲ್ಲಿ ಬೇಹುಗಾರಿಕೆ ಆರೋಪದಡಿ ಬಂಧನವಾಗಿರುವ ಕುಲಭೂಷಣ್ ಜಾಧವ್‌ಗೆ, 2ನೇ ಬಾರಿ ರಾಜತಾಂತ್ರಿಕ ನೆರವು ನೀಡಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದೆ

ಈ ಕುರಿತು ಮಾಹಿತಿ ನೀಡಿರುವ ಪಾಕ್ ವಿದೇಶಾಂಗ ಇಲಾಖೆ ವಕ್ತಾರ ಮೊಹಮ್ಮದ್ ಫೈಸಲ್, ಜಾಧವ್‌ಗೆ 2ನೇ ಬಾರಿ ರಾಜತಾಂತ್ರಿಕ ನೆರವು ನೀಡುವ ಯಾವುದೇ ಅವಕಾಶಗಳಿಲ್ಲ ಎಂದು ಹೇಳಿದ್ದಾರೆ. 

ಕಳೆದ ಜುಲೈ 17ರಂದು ಪ್ರಕರಣದ ಅಂತಿಮ ತನಿಖೆ ನಡೆಸಿದ್ದ ಅಂತಾರಾಷ್ಟ್ರೀಯ ನ್ಯಾಯಾಲಯ, ಜಾಧವ್‌ಗೆ ರಾಜತಾಂತ್ರಿಕ ಸಂಪರ್ಕಕ್ಕೆ ಅವಕಾಶ ನೀಡುವಂತೆ ತೀರ್ಪು ನೀಡಿತ್ತು. ಅದರಂತೆ ಕಳೆದ ಸೆ.02ರಂದು ಮೊದಲ ರಾಜತಾಂತ್ರಿಕ ಸಂಪರ್ಕಕ್ಕೆ ಪಾಕ್ ಅನುಮತಿ ನೀಡಿತ್ತು.

ಆದರೆ ಇದೀಗ ಎರಡನೇ ರಾಜತಾಂತ್ರಿಕ ಸಂಪರ್ಕ ಸಾಧ್ಯವಿಲ್ಲ ಎನ್ನುತ್ತಿರುವ ಪಾಕಿಸ್ತಾನ ಮತ್ತೆ ವಿಯೆನ್ನಾ ಒಪ್ಪಂದ ಮುರಿಯಲು ಮುಂದಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತದ ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್, ಪಾಕಿಸ್ತಾನ ಐಸಿಜೆ ತೀರ್ಪನ್ನು ಉಲ್ಲಂಘಿಸುತ್ತಿದೆ ಎಂದು ಹರಿಹಾಯ್ದಿದ್ದಾರೆ.